ಶಿವಮೊಗ್ಗ: 2023-24 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ-2 ಜೂನ್ 14 ರಿಂದ 22 ರವೆಗೆ ಜಿಲ್ಲೆಯಲ್ಲಿ ನಡೆಯಲಿದ್ದು ಪರೀಕ್ಷೆಗಳು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಯಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜೂ.11 ರಂದು ಏರ್ಪಡಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-2 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭದ್ರಾವತಿ 02, ಹೊಸನಗರ 01, ಸಾಗರ 01, ಶಿಕಾರಿಪುರ 01, ಶಿವಮೊಗ್ಗ 03, ಸೊರಬ 01 ತೀರ್ಥಹಳ್ಳಿ 01 ಸೇರಿ ಜಿಲ್ಲೆಯ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 14 ರಿಂದ 22 ರವರೆಗೆ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಗೆ ಪುನರಾವರ್ತಿತ ವಿದ್ಯಾರ್ಥಿಗಳು 2091, ಖಾಸಗಿ ಪುನರಾವರ್ತಿತ 171 ಮತ್ತು ಫಲಿತಾಂಶ ಸುಧಾರಣೆಗಾಗಿ 249 ಸೇರಿ ಒಟ್ಟು 2511 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪ್ರಥಮ ಭಾಷೆಗೆ 1215, ದ್ವಿತೀಯ ಭಾಷೆಗೆ 1549, ತೃತೀಯ ಭಾಷೆಗೆ 1409, ಗಣಿತ 1785, ವಿಜ್ಞಾನ 2035 ಮತ್ತು ಸಮಾಜ ವಿಜ್ಞಾನ ವಿಷಯಕ್ಕೆ 1435 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಆಸನ/ಪೀಠೋಪಕರಣಗಳ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು.
ಈಗಾಗಲೇ ಪ್ರತಿ ಕೇಂದ್ರಗಳಿಗೆ 10 ಜನ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ 07 ಮಾರ್ಗಗಳಿಗೆ 07 ಜನ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅನ್ಯ ಇಲಾಖಾ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ಯಾವುದೇ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುವುದಿಲ್ಲ.
ಪರೀಕ್ಷಾ ಸಂಬಂಧ ಪೊಲೀಸ್ ಬಂದೋಬಸ್ತ್, ಆರೋಗ್ಯ ಸಹಾಯಕರ ನೇಮಕಕ್ಕೆ ಕೋರಲಾಗಿದ್ದು, ಜಿಲ್ಲಾ/ತಾಲ್ಲೂಕು ಖಜಾನೆಗಳಿಗೆ ಭದ್ರತಾ ಕೊಠಡಿ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ.
ಸಿಸಿಟಿವಿ ಅಳವಡಿಕೆ ಕಡ್ಡಾಯ : ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಸಿಸಿಟಿವಿ ಗಳು ಪರೀಕ್ಷಾ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು. ಹಾಗೂ ಜಿಲ್ಲಾ ಪಂಚಾಯ್ತಿಯ ಸಿಇಓ ಕಚೇರಿಯಲ್ಲಿ ಸಿಸಿಟಿವಿ ವ್ಯವಸ್ಥೆಯನ್ನು ಮಾನಿಟರ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿ, ಪರೀಕ್ಷೆಗೆ ನಿಯೋಜನೆಗೊಂಡ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ವೀಕ್ಷಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಎಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿ, ಜಿ.ಪಂ ಉಪ ಕಾರ್ಯದರ್ಶಿ ಸುಜಾತಾ, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಡಯಟ್ ಪ್ರಾಚಾರ್ಯ ಬಸವರಾಜ್, ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು, ಬಿಇಓ ಗಳು ಪಾಲ್ಗೊಂಡಿದ್ದರು.
‘ರಾಜ್ಯ ಸರ್ಕಾರಿ ನೌಕರ’ರ ವರ್ಗಾವಣೆಗೆ ‘ಸಿಎಂ ಸಿದ್ಧರಾಮಯ್ಯ’ ಈ ಮಾನದಂಡ ಫಿಕ್ಸ್
‘ಮಾತು ಬರುತ್ತಿಲ್ಲ, ದರ್ಶನ್ಗಾಗಿ ಪ್ರಾರ್ಥಿಸುತ್ತೇನೆ’:ಆಘಾತ ಹೊರಹಾಕಿದ ನಟಿ ಸಂಜನಾ ಗಲ್ರಾನಿ | Darshan Arrest