ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹೊಸ ಕ್ಯಾಬಿನೆಟ್ ಸದಸ್ಯರು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜವಾಹರಲಾಲ್ ನೆಹರೂ ನಂತರ ಮೂರು ಬಾರಿ ಪ್ರಧಾನಿಯಾಗುತ್ತಿರುವ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಮೂರು ಹಂತದ ಭದ್ರತೆಯನ್ನು ಏರ್ಪಡಿಸಲಾಗಿದ್ದು, ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ದೆಹಲಿ ಪೊಲೀಸರ ಸ್ವಾಟ್ ಮತ್ತು ಎನ್ಎಸ್ಜಿಯ ಕಮಾಂಡೋಗಳನ್ನು ಸ್ಥಳ ಮತ್ತು ಇತರ ಆಯಕಟ್ಟಿನ ಸ್ಥಳಗಳ ಸುತ್ತಲೂ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರಾಗುವ ನೂತನ ಸಂಸದರಿಗೆ ಪಾಠ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಉನ್ನತ ಸಚಿವರು ಮತ್ತು ಪ್ರಮುಖ ಮಿತ್ರಪಕ್ಷದ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಈ ವೇಳೆ ಕೇಂದ್ರ ಸಚಿವ ಸಂಪುಟ ಸೇರಲಿರುವ ಸಂಸದರಿಗೆ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಬಾಕಿ ಇರುವ ಅಭಿವೃದ್ಧಿ ಯೋಜನೆಗಳನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಐದು ವರ್ಷಗಳ ರೋಡ್ ಮ್ಯಾಪ್ ಕೂಡ ತಯಾರಿಸಬೇಕು. ೨೦೪೭ ರವರೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.