ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ವಜಾ ಮಾಡಬೇಕು; ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಮಾಜಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಫ್‍ಐಆರ್‍ನಲ್ಲಿ ಯಾಕೆ ಇನ್ನೂ ನಾಗೇಂದ್ರರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದರು. ಕ್ರಿಮಿನಲ್ ಕೇಸ್ ದಾಖಲಿಸಲು ಆಗ್ರಹಿಸಿದರು. ಈಶ್ವರಪ್ಪನವರ ಪ್ರಕರಣದಲ್ಲಿ ಈಶ್ವರಪ್ಪ ಮೇಲೆ 302 ಪ್ರಕರಣ ದಾಖಲಿಸಬೇಕೆಂದು ಅವತ್ತು ಹೇಳಿದ್ದೀರಿ. ಹಾಗಿದ್ದರೆ ನಾಗೇಂದ್ರರನ್ನು ಯಾಕೆ ಭ್ರಷ್ಟಾಚಾರ ಪ್ರಕರಣದಡಿ ಸೇರಿಸಿಲ್ಲ ಎಂದು ಆಕ್ಷೇಪಿಸಿದರು.
ನಮ್ಮ ಹೋರಾಟ ಮತ್ತು ಮೇಲೆ (ಕೇಂದ್ರದಲ್ಲಿ) ಮ್ಯಾನೇಜ್ ಮಾಡಲು ಸಾಧ್ಯವೇ ಎಂಬ ಅವಕಾಶಕ್ಕೆ ಕಾಯ್ದು ರಾಜೀನಾಮೆಗೆ ವಿಳಂಬ ಮಾಡಿದಂತಿದೆ. ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಾತ್ರಿ ಆದ ಬಳಿಕ ವಿಧಿ ಇಲ್ಲದೆ ರಾಜೀನಾಮೆ ಪಡೆದಿದ್ದಾರೆ. ಮುಖ್ಯಮಂತ್ರಿಗಳಿಗೆ ಪಾರದರ್ಶಕತೆ ಇದ್ದರೆ, ಪ್ರಾಮಾಣಿಕವಾಗಿ ನಡೆದುಕೊಂಡಿದ್ದರೆ ಅಧೀಕ್ಷಕ ಚಂದ್ರಶೇಖರ್ ವರು ಆತ್ಮಹತ್ಯೆ ಮಾಡಿಕೊಂಡ ಮರುದಿನವೇ, ಅಂದರೆ ಡೆತ್ ನೋಟ್ ಸಿಕ್ಕಿದ 27ರಂದು ನಾಗೇಂದ್ರರ ರಾಜೀನಾಮೆ ಪಡೆಯಬೇಕಿತ್ತು ಎಂದು ನುಡಿದರು.
ಇದನ್ನು ಮುಚ್ಚಿ ಹಾಕುವ ಸಂಚು ನಡೆದಿತ್ತು ಎಂದು ಆರೋಪಿಸಿದ ಅವರು, ಆ ಕಾರಣಕ್ಕಾಗಿ ನೈತಿಕ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊರಬೇಕು; ಹಾಗೂ ರಾಜೀನಾಮೆ ಕೊಡಬೇಕು. ಕೇವಲ ನಾಗೇಂದ್ರರ ರಾಜೀನಾಮೆ ಪಡೆದರೆ ಸಾಲದು ಎಂದು ತಿಳಿಸಿದರು.
ಸಚಿವರ ಆಪ್ತ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಅವರು ಇರುವ ಜಾಗದಲ್ಲಿ ಎಲ್ಲಿ ಬೇಕಾದರೂ ಹೋಗಿ ಭೇಟಿ ಮಾಡುವಷ್ಟು ಸಂಬಂಧ ಇರುವ ನೆಕ್ಕುಂಟಿ ನಾಗರಾಜ್ ಪಾತ್ರ ಇದರಲ್ಲಿ ಇದೆ ಎಂದು ಅವರು ಪುನರುಚ್ಚರಿಸಿದರು. ನೆಕ್ಕುಂಟಿ ನಾಗರಾಜ್ ಜೊತೆ ಡಿಸಿಎಂ, ಸಿಎಂ, ರಾಮಲಿಂಗಾರೆಡ್ಡಿ, ನಾಗೇಂದ್ರರು ಇದ್ದ ಫೋಟೊಗಳನ್ನೂ ಅವರು ಪ್ರದರ್ಶಿಸಿದರು. ವಿಶೇಷ ವಿಮಾನದಲ್ಲಿ ನೆಕ್ಕುಂಟಿ ನಾಗರಾಜ್ ಜೊತೆ ಡಿಸಿಎಂ ಇದ್ದುದನ್ನೂ ವಿವರಿಸಿದರು.
ಕಾಣುವ ಕೈಗಳ ಜೊತೆಗೆ ಕಾಣದ ಕೈಗಳು..
ಪ್ರಕರಣದಡಿ ಕಾಣುವ ಕೈಗಳ ಜೊತೆಗೆ ಕಾಣದ ಕೈಗಳೂ ಸೇರಿಕೊಂಡಿವೆ. ಪದ್ಮನಾಭ್, ಪರಶುರಾಮ್, ಶುಚಿಸ್ಮಿತಾ, ನೆಕ್ಕುಂಟಿ ನಾಗರಾಜ್, ನಾಗೇಂದ್ರ ಕಾಣುವ ಕೈಗಳು ಆಗಿದ್ದರೆ, ಕಾಣದ ಕೈಗಳು ಬೆಂಗಳೂರಿನಿಂದ ದೆಹಲಿ ವರೆಗೆ ಇರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಅದೇ ಕಾರಣಕ್ಕೆ ಮೊದಲ ಎರಡು ದಿನ ಮುಚ್ಚಿ ಹಾಕುವ ತಂತ್ರಗಾರಿಕೆಯಲ್ಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ತೊಡಗಿದ್ದರು. ಸಾರ್ವಜನಿಕ ಒತ್ತಡ ಜಾಸ್ತಿ ಆದ ಬಳಿಕ ಎಸ್‍ಐಟಿ ರಚನೆಯ ಘೋಷಣೆ ಮಾಡಿದ್ದಾರೆ ಎಂದು ಸಿ.ಟಿ.ರವಿ ಅವರು ವಿಶ್ಲೇಷಿಸಿದರು.
ಇದು ಗಂಭೀರವಲ್ಲದ ಪ್ರಕರಣ ಎಂದು ಬಿಂಬಿಸಲು ಸರಕಾರ ಪ್ರಯತ್ನ ಮಾಡಿತ್ತು. 187 ಕೋಟಿ ಮೊತ್ತದ ಹಗರಣ ಇದಾಗಿದೆ. ಸರಕಾರವು ಲೋಕಸಭಾ ಚುನಾವಣಾ ಫಲಿತಾಂಶ ಬರಲಿ ಎಂದು ಕಾಯುತ್ತಿದ್ದಂತೆ ಕಾಣುತ್ತಿದೆ. ಇಂಡಿ ಒಕ್ಕೂಟದ ಪರವಾಗಿ ಫಲಿತಾಂಶ ಬಂದಲ್ಲಿ ಆಗ ಇಡೀ ಪ್ರಕರಣವನ್ನು ಮುಚ್ಚಿ ಹಾಕಬಹುದೆಂಬ ಮಾನಸಿಕತೆಯಲ್ಲಿ 12 ದಿನಗಳ ಕಾಲ ವಿಳಂಬ ಮಾಡಿದಂತಿದೆ ಎಂದು ಅವರು ತಿಳಿಸಿದರು.
ಎಸ್‍ಐಟಿ ರಚಿಸಿದರೂ ನಾವು ಬಹಿರಂಗ ಆರೋಪ ಮಾಡುವವರೆಗೆ ನೆಕ್ಕುಂಟಿ ನಾಗರಾಜ್‍ರನ್ನು ವಿಚಾರಣೆಗೆ ಕರೆದಿರಲಿಲ್ಲ. ಬಹಿರಂಗ ಆರೋಪ ಮಾಡಿದ ಬಳಿಕ ನೆಕ್ಕುಂಟಿ ನಾಗರಾಜ್‍ರನ್ನು ವಿಚಾರಣೆಗೆ ಕರೆದರು. ಬಳಿಕ ಅವರನ್ನು ಬಂಧಿಸಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಓದುಗರೇ ಗಮನಿಸಿ: ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಇದೇ ಕೊನೆ ದಿನ….!
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ: ಎಂ.ಕೆ ವಿಶಾಲಾಕ್ಷಿ ಮಾಹಿತಿ