ಮಂಡ್ಯ : ಪ್ರಸಕ್ತ ಮುಂಗಾರಿನಲ್ಲಿ ಮದ್ದೂರು ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು, ರೈತರು ಭೂಮಿ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರರು ಗುಣಮಟ್ಟದ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕೆಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಸೂಚನೆ ನೀಡಿದರು.
ಮದ್ದೂರು ಪಟ್ಟಣದ ಕೃಷಿ ನಿರ್ದೇಶಕರ ಕಛೇರಿಯಲ್ಲಿ 2024-25 ನೇ ಸಾಲಿನ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರಿಗೆ ತರಭೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರು ಜಮೀನುಗಳನ್ನು ಬಿತ್ತನೆ ಕಾರ್ಯಕ್ಕೆ ಸಿದ್ಧಗೊಳಿಸಿದ್ದು, ವಿವಿಧ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳಿಗೆ ಯಾವುದೇ ಕೊರತೆಯಿಲ್ಲ. ಹಾಗೂ ಅವುಗಳು ಅಗತ್ಯ ವಸ್ತು ಕಾಯ್ದೆಯಡಿ ಬರುವುದರಿಂದ ಅವುಗಳನ್ನು ಪಾರದರ್ಶಕವಾಗಿ ಮತ್ತು ಸಮರ್ಪಕವಾಗಿ ಸಮಗ್ರ ಪೋಷಕಾಂಶಗಳ ಬಳಕೆ ಬಗ್ಗೆ ರೈತರಿಗೆ ಒತ್ತು ನೀಡಿ ಮಾರಾಟ ಮಾಡುವುದರ ಜೊತೆಗೆ ಇಲಾಖೆಗೆ ವಹಿವಾಟಿನ ವರದಿಯನ್ನು ಕಾಲಕಾಲಕ್ಕೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದರು.
ಋತುಮಾನಕ್ಕೆ ಹಾಗೂ ತಾಲೂಕಿಗೆ ಸೂಕ್ತವಾದ ಮತ್ತು ಪರವಾನಗಿಯಲ್ಲಿ ಧೃಡಿಕರಿಸಲ್ಪಟ್ಟ ಅಧಿಕ ಇಳುವರಿ ಭತ್ತದ ತಳಿಗಳನ್ನು ಮಾತ್ರ ಮಾರಾಟ ಮಾಡಬೇಕು.
ರಸಗೊಬ್ಬರ ಮಾರಾಟದಲ್ಲಿ ಕೃತಕ ಅಭಾವ ಸೃಷ್ಟಿಸದಂತೆ ಎಚ್ಚರವಹಿಸಿ POS Machine ಮೂಲಕವೇ ರೈತರಿಗೆ ರಸೀದಿ ನೀಡಿ ಮಾರಾಟ ಮಾಡುವಂತೆ ಉಪ ನಿರ್ದೇಶಕಿ ಕೆ.ಮಾಲತಿ ಎಚ್ಚರಿಕೆ ನೀಡಿದರು.
ರೈತರು ಅಧಿಕೃತ ಲೈಸೆನ್ಸ್ ಹೊಂದಿದ ರಸಗೊಬ್ಬರ ಮಾರಾಟಗಾರರಿಂದ ಮಾತ್ರ ಖರೀದಿ ಮಾಡಬೇಕು ಹಾಗೂ ತಾಲೂಕಿನ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಿಸುತ್ತಿದ್ದು, ರೈತರ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ನಿರ್ದೇಶಕ ಪರಮೇಶ್ ಮನವಿ ಮಾಡಿದರು.
ಇದೇ ವೇಳೆ ಕೃಷಿ ಅಧಿಕಾರಿಗಳಾದ ರೂಪಶ್ರೀ, ದಯಾನಂದ್, ಭವಾನಿ, ಕೃಷ್ಣೇಗೌಡ, ಕರುಣ, ಕೆಂಪೇಗೌಡ, ಶೈಲಜಾ, ಇಪ್ಕೋ ಸಂಸ್ಥೆಯ ಡ್ರೋನ್ ತಂತ್ರಜ್ಞ ಧನರಾಜ್ ಸೇರಿದಂತೆ ಇತರರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಓದುಗರೇ ಗಮನಿಸಿ: ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಇದೇ ಕೊನೆ ದಿನ….!