ನವದೆಹಲಿ:ರಾಜ್ಕೋಟ್ನಲ್ಲಿ ಟಿಆರ್ಪಿ ಗೇಮ್ ಝೋನ್ ಪ್ರಕರಣದಲ್ಲಿ ನಾಲ್ವರು ಅಧಿಕಾರಿಗಳ ಬಂಧನವಾಗಿದೆ. ನಗರ ಯೋಜಕ ಅಧಿಕಾರಿ ಮನ್ಸುಖ್ ಸಗಾಥಿಯಾ, ಸಹಾಯಕ ನಗರ ಯೋಜಕ ಮುಖೇಶ್ ಮಕ್ವಾನಾ, ಸಹಾಯಕ ನಗರ ಯೋಜಕ ಗೌತಮ್ ಜೋಶಿ ಮತ್ತು ಅಗ್ನಿಶಾಮಕ ಠಾಣೆ ಅಧಿಕಾರಿ ರೋಹಿತ್ ವಿಗೋರಾ ಬಂಧಿತರು.
ಎಲ್ಲಾ ಅಧಿಕಾರಿಗಳನ್ನು ರಾಜ್ ಕೋಟ್ ಪೊಲೀಸರು ಬಂಧಿಸಿದ್ದಾರೆ.
ಟಿಆರ್ಪಿ ಗೇಮ್ ಜೋನ್ನಲ್ಲಿ ಶನಿವಾರ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ, ಎಸಿಬಿ ತಂಡವು ರಾಜ್ಕೋಟ್ನಲ್ಲಿರುವ ಅನೇಕ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದೆ. ತಂಡವು ರಾಜ್ ಕೋಟ್ ನ ಐದು ಸ್ಥಳಗಳ ಮೇಲೂ ದಾಳಿ ನಡೆಸಿತು. ರಾಜ್ಕೋಟ್ ಮುನ್ಸಿಪಲ್ ಕಾರ್ಪೊರೇಷನ್ನ ನಗರ ಯೋಜಕ ಅಧಿಕಾರಿ ಎಂಡಿ ಸಂಘಥಿಯಾ ಮತ್ತು ರಾಜ್ಕೋಟ್ ಅಗ್ನಿಶಾಮಕ ಅಧಿಕಾರಿ ಥೇಬಾ ಅವರ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಮತ್ತು ಅಪರಾಧ ವಿಭಾಗ ದಾಳಿ ನಡೆಸಿದೆ.
ಧವಳ್ ಠಕ್ಕರ್ ಅವರನ್ನು ಬನಸ್ಕಾಂತ ಕ್ರೈಂ ಬ್ರಾಂಚ್ ಪೊಲೀಸರು ಮತ್ತು ರಾಜ್ಕೋಟ್ ಪೊಲೀಸರು ಅಬು ರಸ್ತೆಯಲ್ಲಿ ಸೋಮವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಪಾಲುದಾರರಾದ ಯುವರಾಜ್ ಸಿಂಗ್ ಸೋಲಂಕಿ, ರಾಹುಲ್ ರಾಥೋಡ್, ಧವಳ್ ಠಕ್ಕರ್, ಕಿರಿತ್ ಸಿನ್ಹ ಜಡೇಜಾ ಮತ್ತು ವ್ಯವಸ್ಥಾಪಕ ನಿತಿನ್ ಜೈನ್ ಸೇರಿದ್ದಾರೆ. ಟಿಆರ್ಪಿ ಗೇಮ್ ಝೋನ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 60% ಷೇರು ಹೊಂದಿದ್ದ ಮಾಲೀಕ ಪ್ರಕಾಶ್ ಹಿರಾನ್ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ.
ಅಮಾನತುಗೊಂಡ ಅಧಿಕಾರಿಗಳ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುವುದು. ನಂತರ ಭ್ರಷ್ಟಾಚಾರ ಸಂಬಂಧಿತ ವಿಷಯಗಳ ಬಗ್ಗೆ ತನಿಖೆ ನಡೆಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಗುಜರಾತ್ ಸರ್ಕಾರದ ಎಸ್ಐಟಿ ಅಮಾನತುಗೊಂಡ ಎಲ್ಲಾ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿದೆ.