ಬೆಂಗಳೂರು : 2024-25ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತವಾಗಿ ಒದಗಿಸಲಾಗುತ್ತಿರುವ ಶೂ ಮತ್ತು ಸಾಕ್ಸ್ ಖರೀದಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
2024-25ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 42.65 ಲಕ್ಷ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಒಟ್ಟು ರೂ.121.00 ಕೋಟಿಗಳ ವೆಚ್ಚದಲ್ಲಿ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ಅಥವಾ ಪಾದರಕ್ಷೆ ಏತರಿಸಬೇಕಾಗಿದೆ.
ಷರತ್ತುಗಳು:-
1. ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ, ಉತ್ತಮ ಗುಣಮಟ್ಟದ ಪಾದರಕ್ಷೆಯನ್ನು ಸ್ಥಳೀಯವಾಗಿ ಖರೀದಿಸಿ, ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ)ಗೆ ವಹಿಸುವುದು.
2. ಒಂದು ಜೊತೆ ಕಪ್ಪು ಬಣ್ಣದ ಶೂ ಗಳನ್ನು ಹಾಗೂ ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್ಗಳನ್ನು ಖರೀದಿಸಿ ವಿತರಿಸುವುದು. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ ಮತ್ತು ಸಾಕ್ಸ್ ಗಳ ಬದಲಾಗಿ ಪಾದರಕ್ಷೆಗಳನ್ನು ಖರೀದಿಸಿ ವಿತರಿಸುವುದು.
3. ಶೂ ಮತ್ತು ಸಾಕ್ಸ್ಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಎಸ್.ಡಿ.ಎಂ.ಸಿ.ಯು ಕೆಳಕಂಡಂತೆ ಖರೀದಿ ಸಮಿತಿಯನ್ನು ರಚಿಸತಕ್ಕದ್ದು.
4. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಸಭೆ ನಡೆಸಿ ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆ ಖರೀದಿ ಸಮಿತಿಯ ಸದಸ್ಯರನ್ನು ಆಯ್ಕೆಗೊಳಿಸಬೇಕು. ಈ ಉದ್ದೇಶಕ್ಕಾಗಿ ನಡೆಸುವ ಎಸ್.ಡಿ.ಎಂ.ಸಿ. ಸಭೆಯಲ್ಲಿ ಕನಿಷ್ಟ ಅರ್ಧದಷ್ಟು ಸದಸ್ಯರು ಹಾಜರಿರತಕ್ಕದ್ದು ಹಾಗೂ ಸಮಿತಿಯ ನಡಾವಳಿಯನ್ನು ವಲಯ ಸಂಪನ್ಮೂಲ ವ್ಯಕ್ತಿಗಳು ಅಥವಾ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು (ಬಿ.ಆರ್.ಪಿ ಅಥವಾ ಸಿ.ಆರ್.ಪಿ) ಇಲಾಖೆಯ ಅಂತರ್ಜಾಲ ತಾಣದಲ್ಲಿ ದಾಖಲಿಸತಕ್ಕದ್ದು.
5. ಹೆಚ್ಚಿನ ಶಾಲೆಗಳಲ್ಲಿ ಖರೀದಿ ವೆಚ್ಚವು ಐದು ಲಕ್ಷಕ್ಕಿಂತ ಕಡಿಮೆ ಆಗುವುದರಿಂದ ಅಂತಹ ಶಾಲೆಗಳು ಮೂರು ಸಂಸ್ಥೆಗಳಿಂದ ಕೊಟೇಶನ್ ಪಡೆದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮದ ಪ್ರಕಾರವಾಗಿ(ಕೆ.ಟಿ.ಟಿ.ಪಿ ಆಕ್ಟ್ 1999) ಖರೀದಿ ಪ್ರಕ್ರಿಯೆಯನ್ನು ನಿರ್ವಹಿಸುವುದು. ಕನಿಷ್ಠ ಮೂರು ಸಂಸ್ಥೆಗಳಿಂದ ದರಪಟ್ಟಿಗಳನ್ನು ಹೊಂದಿರಲೇಬೇಕು. ಖರೀದಿ ಮಾಡುವಂತಹ ಸಂಸ್ಥೆಯು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೋಂದಣಿಯಾಗಿರಬೇಕು ಹಾಗೂ ಜಿಎಸ್‌ಟಿ ಸಂಖ್ಯೆ ಹೊಂದಿರಬೇಕು.
6. ಶೂ ಗಳ ಮೇಲ್ಪದರು ಪಾಲಿವಿನೈಲ್ 1ಪಿ.ವಿ.ಸಿ] ಕೋಟೆಡ್ ವಿಸ್ಕೋಸ್/ಪಾಲಿಯೆಸ್ಟರ್/ ಪಾಲಿಯೆಸ್ಟರ್ ಕಾಟನ್ ಫ್ಯಾಬ್ರಿಕ್ 1.5 ಎಂಎಂ ಹೊಂದಿದ ಮತ್ತು ಎಕ್ಸೆಂಡೆಡ್ ಪಾಲಿವಿನೈಲ್ ಕ್ಲೋರೈಡ್ 1ಪಿ.ವಿ.ಸಿ1 ಸೋಲ್ ಹೊಂದಿದ ಹಾಗೂ ಪಾದರಕ್ಷೆಯ ಒಳಪದರು (Insock) ಬಟ್ಟೆ/ಫ್ಯಾಬ್ರಿಕ್‌ನಿಂದ ಕೂಡಿರುವುದನ್ನು (ಅಂದಾಜು 0.8 ಎಂ.ಎಂ ದಪ್ಪ) ಖರೀದಿಸುವುದು. ಎಸ್.ಡಿ.ಎಂ.ಸಿ.ಗಳು ಪಾದರಕ್ಷೆಗಳನ್ನು ಖರೀದಿಸಲು ತೀರ್ಮಾನಿಸಿದಲ್ಲಿ ವೆಲ್‌ಕ್ರೋ ಪಾದರಕ್ಷೆಗಳನ್ನು (Velcro Sandals) ಮತ್ತು ಲೈನಿಂಗ್ ಸಾಕ್ಸ್ ಖರೀದಿಸಿ ವಿತರಿಸುವುದು.
7. ಪ್ರತಿಯೊಂದು ತಾಲ್ಲೂಕಿನಲ್ಲಿ ಕನಿಷ್ಠ ಶೇ.5ರಷ್ಟು ಶಾಲೆಗಳಲ್ಲಿನ ಶೂ ಮತ್ತು ಸಾಕ್ಸ್ ಗುಣಮಟ್ಟವನ್ನು ಯಾದೃಚ್ಚಿಕವಾಗಿ ಪರೀಕ್ಷಿಸಲು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಒಂದು ಸಮಿತಿಯನ್ನು ರಚಿಸಲು ಕ್ರಮಕೈಗೊಳ್ಳುವುದು.
8. ಹಿಂದಿನ ಸಾಲುಗಳಲ್ಲಿ ಕಳಪೆ ಗುಣಮಟ್ಟದ ಮತ್ತು ನಕಲಿ ಬ್ರಾಂಡೆಡ್ ಶೂ ಮತ್ತು ಸಾಕ್ಸ್ ಸರಬರಾಜಾಗಿರುವ ಬಗ್ಗೆ ಸರ್ಕಾರದ ಹಂತದಲ್ಲಿ ಸಾಕಷ್ಟು ದೂರುಗಳು ಸ್ವೀಕೃತವಾಗಿರುತ್ತವೆ. ಆದ್ದರಿಂದ ಪ್ರಸ್ತುತ ಸಾಲಿನಲ್ಲಿ ಜಾಗರೂಕತೆಯಿಂದ ಪರಿಶೀಲಿಸಿ, ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರಾಂಡ್‌ಗಳ ಅಧಿಕೃತ ಮಾರಾಟಗಾರರಿಂದ ISO CERTIFIED ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆಗಳನ್ನು ಖರೀದಿಸತಕ್ಕದ್ದು. ಅನಧಿಕೃತ ಮಾರಾಟಗಾರರಿಂದ ನಕಲಿ ಬ್ರಾಂಡ್/ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆಗಳನ್ನು ಖರೀದಿಸಿರುವ ಬಗ್ಗೆ ದೂರುಗಳು ವರದಿಯಾದಲ್ಲಿ ತಪಾಸಣೆಗೆ ಒಳಪಡಿಸಿ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರು/ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದು.