ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ, ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದರಂತೆ ಅಕ್ಟೋಬರ್.3, 2024ರಿಂದ ದಸರಾ ರಜೆ ಹಾಗೂ ಏಪ್ರಿಲ್.11, 2025ರಿಂದ ಬೇಸಿಗೆ ರಜೆ ಆರಂಭಗೊಳ್ಳಲಿದೆ.
ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಕಟಿಸಿರುವಂತ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದರಿಂದ ರಾಜ್ಯಾಧ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ, ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದಿದೆ.
ಸದರಿ ಮಾರ್ಗಸೂಚಿಯಲ್ಲಿ ವಾರ್ಷಿಕ, ಮಾಹೆವಾರು ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ ಆಯೋಜನೆಗೆ ಪೂರಕವಾದ ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ ಸಿಸಿಇ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ, ಸಿದ್ಧಪಡಿಸಲಾಗಿದೆ ಎಂದಿದೆ.
2024-25ನೇ ಸಾಲಿನಲ್ಲಿ ಮೊದಲನೇ ಅವಧಿಗೆ ದಿನಾಂಕ 29-05-2024ರಿಂದ ಶಾಲಾ ಕರ್ತವ್ಯದ ದಿನಗಳು ಆರಂಭಗೊಳ್ಳಲಿವೆ. ದಿನಾಂಕ 2-10-2024ರವರೆಗೆ ನಡೆಯಲಿದೆ. ಎರಡನೇ ಅವಧಿಗೆ ದಿನಾಂಕ 21-10-2024ರಿಂದ ದಿನಾಂಕ 10-04-2025ರವರೆಗೆ ಶಾಲಾ ಕರ್ತವ್ಯದ ದಿನಗಳಾಗಿದ್ದಾವೆ ಎಂದಿದೆ.
ಹೀಗಿದೆ 2024-25ನೇ ಸಾಲಿನ ರಜಾ ದಿನಗಳು
ದಿನಾಂಕ 03-10-2024ರಿಂದ ದಿನಾಂಕ 20-10-2024ರವರೆಗೆ ದಸರಾ ರಜೆಯನ್ನು ಘೋಷಿಸಲಾಗಿದೆ. ದಿನಾಂಕ 11-04-2024 ರಿಂದ ದಿನಾಂಕ 28-05-2025ರವರೆಗೆ ಬೇಸಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಇನ್ನೂ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗುವಂತ ಒಟ್ಟು ಶಾಲಾ ಕರ್ತವ್ಯದ ದಿನಗಳು 224 ಆಗಿವೆ. ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನ, ಪಠ್ಯೇತರ ಚಟುವಟಿಕೆಗಳು, ಪಠ್ಯ ಚಟುವಟಿಕೆಗಳು, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 24 ದಿನ ಮೀಸಲಿಡಲಾಗಿದೆ. ಮೌಲ್ಯಮಾಪನಾ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 04 ದಿನಗಳು ಹಾಗೂ ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯದ ದಿನಗಳು 180 ದಿನಗಳು ಅಂತ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ