ತಾಯಿ-ಮಗುವಿಗೆ ಆರಂಭಿಕವಾಗಿ ಕಂಡುಬರುವ ಯಾವುದೇ ತೊಂದರೆಗಳನ್ನು ಸಕಾಲದಲ್ಲಿ ಗುರ್ತಿಸಿ ಚಿಕಿತ್ಸೆ ನೀಡಲು ಹಾಗೂ ಶಿಶು ಮರಣ ಮತ್ತು ತಾಯಿ ಮರಣ ತಡೆಗಟ್ಟಲು ಆಸ್ಪತ್ರೆಗಳಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ತಿಳಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ನಿರಂತರ ಜಾಗೃತಿ ನೀಡುವ ಮೂಲಕ ಮನೆಯಲ್ಲಿ ಹೆರಿಗೆ ಮಾಡುವ ಪದ್ದತಿ ತಡೆಯುವ ಪ್ರಯತ್ನವನ್ನು ಜಿಲ್ಲಾ ಆರೋಗ್ಯ ಇಲಾಖೆಯು ಮಾಡುತ್ತಿದೆ.
ಇತ್ತೀಚೆಗೆ ಬಳ್ಳಾರಿ ನಗರದ ಕೌಲ್‍ಬಜಾರ್ ವ್ಯಾಪ್ತಿಯಲ್ಲಿ ದಂಪತಿಯೊಬ್ಬರು ಆಸ್ಪತ್ರೆಗೆ ಪರೀಕ್ಷೆ ಮಾಡಿಸಲು ಹೋದಾಗ ಹೆರಿಗೆ ನೋವು ಕಂಡುಬಂದಿದ್ದು, ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುತ್ತೇವೆ ಎಂದು ಸಿಬ್ಬಂದಿಯವರಿಗೆ ತಿಳಿಸಿದಾಗ, ತಕ್ಷಣ ಅಲ್ಲಿಯ ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ ಅವರು, ಗರ್ಭಿಣಿಯ ಕುಟುಂಬದ ಸದಸ್ಯರೊಂದಿಗೆ ಆಪ್ತ ಸಮಾಲೋಚನೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದರು. ರಕ್ತಹೀನತೆ ನಿಯಂತ್ರಣ ಮಾಡುವ ಚುಚ್ಚು ಮದ್ದು ನೀಡಿ, ಮನೆ ಹೆರಿಗೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಸಮಸ್ಯೆಗಳ ಜೊತೆಗೆ ಗಂಭೀರ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವುದು ಸೂಕ್ತ ಎಂದು ತಿಳಿಸಿ ಆಶಾಕಾರ್ಯಕರ್ತೆಯೊಂದಿಗೆ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿಸಿದ್ದರು. ನಂತರ ಹೆರಿಗೆಯಾಗಿದ್ದು ಪ್ರಸ್ತುತ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಬಂಡಿಹಟ್ಟಿ ವ್ಯಾಪ್ತಿಯ ವಟ್ಟಪ್ಪಕೇರಿಯ ಗರ್ಭಿಣಿಯೊಬ್ಬರು ವಿಮ್ಸ್‍ನಲ್ಲಿ ಪರೀಕ್ಷೆಗೆಂದು ತೆರಳಿದಾಗ ಮಗುವಿಗೆ ಕುತ್ತಿಗೆ ಸುತ್ತಲು ಕರಳು ಸುತ್ತಿಕೊಂಡಿರುವ ಕುರಿತು ತಿಳಿಸಿದಾಗ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಗರ್ಭಿಣಿಯು ಆಸ್ಪತ್ರೆಯಲ್ಲಿ ಮಾಹಿತಿ ನೀಡದೇ ಮನೆಗೆ ಬಂದಿದ್ದರು. ವೈದ್ಯಾಧಿಕಾರಿ ಡಾ.ಯಾಸಿನ್ ಅವರು, ಆಶಾಕಾರ್ಯಕರ್ತೆಯರನ್ನು ಮನೆಗೆ ಕಳುಹಿಸಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದಾಗ ಮಾತ್ರ ಸಹಜ ಹೆರಿಗೆಯಿಂದ ನಿಮ್ಮ ಹಾಗೂ ಮಗುವಿನ ಕಾಳಜಿ ತೆಗೆದುಕೊಳ್ಳಲು ಸಾಧ್ಯವೆಂದು ಮನವೊಲಿಸಿದ ನಂತರವೇ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿತ್ತು. ಅಲ್ಲಿಯೂ ಅವರು ದಾಖಲಾಗದೇ ಇಲ್ಲದ್ದನ್ನು ಕಂಡು ಗರ್ಭಿಣಿಯ ಮನೆಗೆ ಭೇಟಿ ನೀಡಿ ಪುನಃ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆರಿಗೆ ಮಾಡಿಸಲಾಗಿದ್ದು, ಪ್ರಸ್ತುತ ತಾಯಿ ಮಗು ಆರೋಗ್ಯವಾಗಿದ್ದಾರೆ.
ಈ ಎರಡು ಘಟನೆಗಳಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವವಾಗಿದ್ದು ಮನೆಯಲ್ಲಿಯೇ ಹೆರಿಗೆ ಮಾಡಿಸುವುದರಿಂದ ತಾಯಿ ಮತ್ತು ಮಗುವಿಗೆ ಸೋಂಕು ಆಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮನೆ ಹೆರಿಗೆಗಿಂತ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವಿನ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಡಾ.ರಮೇಶ್‍ಬಾಬು ಅವರು ತಿಳಿಸಿದ್ದಾರೆ.
ಮಗುವಿನ ಹೊಟ್ಟೆಯಲ್ಲಿ ಹೊಲಸು ಪದಾರ್ಥ ಸೇರಿಕೊಂಡಿದ್ದರೆ ಅಥವಾ ಉಸಿರಾಟದ ತೊಂದರೆಯಿದ್ದರೆ, ಕರಳು ಬಳ್ಳಿ ಹೊಕ್ಕಳು ಸುತ್ತಲು ಸುತ್ತಿಕೊಂಡಂತಹ ತೊಂದರೆಯಿದ್ದರೆ, ಕಾಲು ಮೇಲಾಗಿ ಹೆರಿಗೆಯಾಗುವ ಸಾಧ್ಯತೆಗಳು ಇದ್ದಾಗ, ಗರ್ಭಿಣಿಯ ಜನನಾಂಗದಲ್ಲಿ ಗಾಯಗಳಾಗಿ ಅಧಿಕ ರಕ್ತಸ್ರಾವ ಆಗುವ ಮೂಲಕ ತಾಯಿ ಮತ್ತು ಮಗುವಿನ ಮರಣ ಸಾಧ್ಯತೆಗಳು ಹೆಚ್ಚಾಗಬಹುದು. ಕರಳು ಬಳ್ಳಿಯನ್ನು ಹಳೆಯದಾದ ಬ್ಲೇಡ್ ಅಥವಾ ಕುಡುಗೋಲಿನಿಂದ ಕತ್ತರಿಸುವ ಅಥವಾ ತರಬೇತಿ ಇಲ್ಲದವರಿಂದ ಹೆರಿಗೆ ಮಾಡಿಸಿದಲ್ಲಿ ಮಗುವಿಗೆ ಸೋಂಕು ಉಂಟಾಗಿ ಮರಣ ಹೊಂದುವ ಸಾಧ್ಯತೆಯಿರುತ್ತದೆ.
ಈ ಹಿನ್ನಲೆಯಲ್ಲಿ ಮನೆಯಲ್ಲಿ ಯಾವುದೇ ಇಂತಹ ಪ್ರಯತ್ನ ಮಾಡದೇ ಇವೆಲ್ಲವುಗಳನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆಯುಳ್ಳ ಸುಸಜ್ಜಿತ ಹೆರಿಗೆ ಕೊಠಡಿ, ಸೋಂಕು ರಹಿತ ಉಪಕರಣಗಳು, ನುರಿತ ವೈದ್ಯರು ಹಾಗೂ ಸಿಬ್ಬಂದಿ, ದಿನದ 24 ಗಂಟೆ ವಿದ್ಯುತ್, ನೀರಿನ ವ್ಯವಸ್ಥೆ, ಸುಸಜ್ಜಿತ ವಾರ್ಡ್, ಪೌಷ್ಠಿಕಾಂಶವುಳ್ಳ ಊಟದ ವ್ಯವಸ್ಥೆ ಎಲ್ಲವುಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಕಲ್ಪಿಸಲಾಗಿದೆ.
ಹೆರಿಗೆ ತಕ್ಷಣದಲ್ಲಿ ಮಗುವಿಗೆ ಮಾರಕ ರೋಗಗಳನ್ನು ತಡೆಗಟ್ಟಲು ಬಿಸಿಜಿ ಹಾಗೂ ಪೆÇೀಲಿಯೋ ಹನಿ, ಹೆಪಟೈಟಸ್ ಬಿ ಮತ್ತು ಮಗುವಿನ ದೇಹದ ಒಳಗಡೆ ಆಂತರಿಕವಾಗಿ ರಕ್ತಸ್ರಾವವಾದಲ್ಲಿ ತಡೆಗಟ್ಟಲು ವಿಟಮಿನ್ ಕೆ ಲಸಿಕೆ ಹಾಕುವ ಮೂಲಕ ಮಗುವಿನ ಆರೋಗ್ಯವನ್ನು ಕಾಪಾಡಲು ಸಹಾಯಕವಾಗುತ್ತದೆ. ಈ ದಿಶೆಯಲ್ಲಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ಜಿಲ್ಲೆಯಲ್ಲಿ ಶಿಶು ಮತ್ತು ತಾಯಿ ಆರೋಗ್ಯವನ್ನು ಕಾಪಾಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.