ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ದಿನಕ್ಕೊಂದು ಹೇಳಿಕೆ ನೀಡುತ್ತಿರುವಂತ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಪಕ್ಷದಿಂದ ಡಿಜಿ ಐಜಿಪಿಗೆ ದೂರು ನೀಡಲಾಗಿದೆ.
ಇಂದು ಮಾಜಿ ಪರಿಷತ್ ಸದಸ್ಯ ಹಾಗೂ ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಹೆಚ್.ಎಂ ರಮೇಶ್ ಗೌಡ ನೇತೃತ್ವದಲ್ಲಿ ಬೆಂಗಳೂರಿನಲ್ಲಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿ ಜೆಡಿಎಸ್ ಪಕ್ಷದ ನಾಯಕರು ದೂರು ನೀಡಿದರು.
ದೂರಿನಲ್ಲಿ ಇನ್ನೇನು ಇದೆ?
ಹೆಚ್.ಎಂ.ರಮೇಶ್ ಗೌಡ ಸಹಿ ಹಾಕಿರುವ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಅನೇಕ ಗಂಭೀರ, ಗುರುತರ ಆರೋಪಗಳನ್ನು ಮಾಡಲಾಗಿದೆ.
ಕಾಂಗ್ರೆಸ್ ನಾಯಕ, ವೈನಾಡು ಲೋಕಸಭೆ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಇದೇ ಮೇ 2ರಂದು ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿ ಅವರ ಹೇಳಿಕೆ, ಭಾಷಣ ಎಲ್ಲವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುದ್ರಣ ಮಾಧ್ಯಮದಲ್ಲಿಯೂ ವರದಿಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದೆ.
ನೊಂದ ಮಹಿಳೆಯರ ನ್ಯಾಯ ಕೊಡಿಸುವುದನ್ನು ಕಡೆಗಣಿಸಿ ಒಬ್ಬ ಜನಪ್ರತಿನಿಧಿಯಾಗಿ ರಾಹುಲ್ ಗಾಂಧಿ ಅವರು ಇಂಥ ಹೇಳಿಕೆ ನೀಡಿರುವುದು ಕಾನೂನು ಉಲ್ಲಂಘನೆ ಆಗಿರುತ್ತದೆ. ನಾನೂರು ಮಹಿಳೆಯರ ಮೇಲೆ ಮಾಸ್ ರೇಪ್ ಆಗಿರುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಎಲ್ಲಾ ಮಾಹಿತಿ ಇದೆ ಹಾಗೂ ಅತ್ಯಾಚಾರಕ್ಕೆ ತುತ್ತಾದ ಅಷ್ಟೂ ಮಹಿಳೆಯರ ಮಾಹಿತಿ ಅವರಲ್ಲಿ ಇದೆ ಎನ್ನುವುದು ಅವರದೇ ಹೇಳಿಕೆಯಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 1860ರ ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಲ್ಲಿ ಜೆಡಿಎಸ್ ಪಕ್ಷ ಒತ್ತಾಯ ಮಾಡಿದೆ.
ರಾಜ್ಯ ಸರ್ಕಾರವೂ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದ್ದು, ಕೂಡಲೇ ಈ ತಂಡವು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿ ಕರೆಸಬೇಕು. ನಾನೂರು ಮಹಿಳೆಯರು ಎಂದು ತಪ್ಪು ಮಾಹಿತಿ, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತೆ ಮಾಡಿದ ಅವರ ವಿರುದ್ಧ ಕೂಡಲೇ ಸೆಕ್ಷನ್ 202, 1860ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಜೆಡಿಎಸ್ ಆಗ್ರಹಪಡಿಸಿದೆ.
ಅಲ್ಲದೆ, ಪೆನ್ ಡ್ರೈವ್ ಹಂಚಿಕೆಯ ಬಗ್ಗೆಯೂ ಜೆಡಿಎಸ್ ಡಿಜಿ ಅವರ ಜತೆ ಮಾತುಕತೆ ನಡೆಸಿತು. ಎಸ್ ಐಟಿ ಏಕಪಕ್ಷೀಯವಾಗಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದೆ. ಆದರೆ ಪೆನ್ ಡ್ರೈವ್ ಹಂಚಿಕೆ ಆರೋಪಿಗಳ ಬಗ್ಗೆ ಮೌನ ವಹಿಸಿದೆ. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಈವರೆಗೆ ಅವರನ್ನು ಎಸ್ ಐಟಿ ಬಂಧನ ಮಾಡಿಲ್ಲ ಎಂದು ನಿಯೋಗ ದೂರಿತು.
ಬೇರೆಯವರ ಕಾಲದ ಫೋನ್ ಕದ್ದಾಲಿಕೆ ವಿಚಾರ ಎಲ್ಲರಿಗೂ ಗೊತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
‘ಬೆಂಗಳೂರಿನ ಸೌಂದರ್ಯ’ಕ್ಕೆ ಹೆಚ್ಚು ಆದ್ಯತೆ ನೀಡಿ: ಸಿಟಿ ರೌಂಡ್ಸ್ ವೇಳೆ ‘ಸಿಎಂ ಸಿದ್ಧರಾಮಯ್ಯ’ ಸೂಚನೆ