ಬೆಂಗಳೂರು: ಮದುವೆ ಆರತಕ್ಷತೆಯಲ್ಲಿ ನೈಟ್ರೋಜನ್ ತುಂಬಿದ ಪಾನ್ ಸೇವಿಸಿದ 12 ವರ್ಷದ ಬಾಲಕಿಯೊಬ್ಬಳು ಆಸ್ಪತ್ರೆಗೆ ದಾಖಲಾದ ಘಟನೆ ಎಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ.
ಸಂಬಂಧಿಕರ ಮದುವೆಯ ಆರತಕ್ಷತೆ ಸಮಾರಂಭದಲ್ಲಿ 12 ವರ್ಷದ ಬಾಲಕಿಯೊಬ್ಬಳು ಲಿಕ್ವಿಡ್ ನೈಟ್ರೋಜನ್ ತುಂಬಿದ ಪಾನ್ ಸೇವಿಸಿದ್ದಳು. ಕೆಲ ಹೊತ್ತಿನಲ್ಲಿಯೇ ಹೊಟ್ಟೆ ನೋವಿನಿಂದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಈ ವೇಳೆ ಆಸ್ಪತ್ರೆ ವೈದ್ಯರು ಬಾಲಕಿಯನ್ನು ಅಗತ್ಯ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಎಂಡೋಸ್ಕೋಪ್ ಪರೀಕ್ಷೆಯಲ್ಲಿ ಅನ್ನನಾಳ, ಹೊಟ್ಟೆಯ ಇತರೆ ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಸುಮಾರು 4 – 5 ಸೆಂ.ಮೀ ಅಳತೆಯ ರಂಧ್ರವಾಗಿದೆ ಎನ್ನುವುದನ್ನು ಕಂಡು ಕೊಂಡಿದೆ. ಶಸ್ತ್ರಚಿಕಿತ್ಸೆಯ ನಂತರ ಎರಡು ದಿನ ಐಸಿಯುನಲ್ಲಿದ್ದ ಬಾಲಕಿಯು 6 ದಿನಗಳ ಆಸ್ಪತ್ರೆ ವಾಸ ಮುಗಿಸಿ ಮನೆ ಸೇರಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.