ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಚುನಾವಣಾ ನೀತಿ ಸಂಹಿತೆಗೆ ತೆರೆ ಬೀಳುತ್ತಿದ್ದಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳು ಪರಿಷ್ಕರಣೆ ಆಗುವ ಸಾಧ್ಯತೆ ಇದೆ.
7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರಿಗೆ ಅಂತಿಮವಾಗಿ ಶೇ.8 ರಿಂದ ಶೇ.8.5 ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದ್ದು, ಒಟ್ಟಾರೆ ಏರಿಕೆ ಮೂಲವೇತನದ ಶೇ.25 ರಿಂದ ಶೇ.25.5 ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಎ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು ಮೂಲ ವೇತನ 17,000 ರೂ. ಇದ್ದರೆ, ತುಟ್ಟಿಭತ್ಯೆ ಶೇ. 31 (5,270 ರೂ.) ಹಾಗೂ ಶೇ.27.50 (4,675 ರೂ. ) ಫಿಟ್ಮೆಂಟ್ ಸೇರಿ ಒಟ್ಟು 26,945 ಸಿಗುತ್ತಿತ್ತು. ಇನ್ನು 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27,000 ಇದ್ದರೆ, ಅಂದಾಜು ತುಟ್ಟಿ ಭತ್ಯೆ ಶೇ.8.5 (2295 ರೂ), ಮನೆ ಬಾಡಿಗೆ ಭತ್ಯೆ ಶೇ.20 (5,400 ರೂ.), ವೈದ್ಯಕೀಯ 500, ನಗರ ಪರಿಹಾರ ಭತ್ಯೆ (ಸಿಸಿಎ) 750 ರೂ. ಸೇರಿ ಒಟ್ಟು 35,945 (01-01-2024ಕ್ಕೆ) ರೂ. ಸಿಗಲಿದೆ. 6ನೇ ವೇತನ ಆಯೋಗದಲ್ಲಾದರೆ ಒಟ್ಟು 29,005 ರೂ. ಸಿಗುತ್ತಿತ್ತು. ಪರಿಷ್ಕೃತ ವೇತನದಲ್ಲಿ 6940 ರೂ. ಹೆಚ್ಚಳವಾಗಲಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆಯಾಗುತ್ತಿದ್ದಂತೆ ಸರಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆಂದು ಮೂಲಗಳು ಹೇಳಿವೆ. ಆದೇಶಗಳನ್ನು ಸಿದ್ದಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ.