ಬೆಂಗಳೂರು : ಹುಬ್ಬಳ್ಳಿಯ ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣದ ಆರೋಪಿ ಗಿರೀಶ್ ವಿರುದ್ಧ ಮಹಿಳೆಯೊಬ್ಬರು ಮತ್ತೊಂದು ಎಫ್ ಐಆರ್ ದಾಖಲಾಗಿದೆ.
ವಿಶ್ವಮಾನವ ಎಕ್ಸ್ ಪ್ರೆಸ್ ರೈಲಿನಲ್ಲಿ ತಡರಾತ್ರಿ ಅಂಜಲಿ ಹಂತಕ ಗಿರೀಶ್ ಅಲಿಯಾಸ್ ವಿಶ್ವನನ್ನು ಪೊಲೀಸರು ಬಂಧಿಸಿದ್ದು, ಇದೀಗ ಮಹಿಳೆಯೊಬ್ಬರು ಗಿರೀಶ್ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ.
ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗದಗ ಮೂಲದ ಲಕ್ಷ್ಮಿ ಎಂಬುವ ಪತಿ ಮಹಾತೇಂಶ್ ಸವಟೂರು ಎಂಬುವರ ದೂರು ಆಧರಿಸಿ ಎಫ್ ಐಆರ್ ದಾಖಲಾಗಿದೆ. ಪತ್ನಿಜೊತೆಗೆ ಬರುವಾಗ ಅರಸೀಕೆರೆ ನಿಲ್ದಾಣದಲ್ಲಿ ಜನರಲ್ ಬೋಗಿ ಹತ್ತಿದ್ದ ಗಿರೀಶ್ ಕಿರಿಕ್ ಮಾಡಿದ್ದ. ರೈಲು ಹತ್ತಿ ಮಹಿಳೆಗೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಶೌಚಾಲಯಕ್ಕೆ ಹೋದಾಗ ಮಹಿಳೆಯನ್ನು ಹಿಂಬಾಲಿಸಿಕೊಂಡು ರೆಸ್ಟ್ ರೂಂ ಕಿಂಡಿಯಿಂದ ಗಮನಿಸುತ್ತಿದ್ದ. ದಬಾಯಿಸಿದಕ್ಕೆ ಚಾಕುವಿನಿಂದ ಇರಿಯಲು ಮುಂದಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಗಿರೀಶ್ ಸಾವಂತ್ ಮೈಸೂರಿನಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಬರುತ್ತಿದ್ದ ವೇಳೆ ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಕಿರಿಕ್ ತೆಗೆದಿದ್ದಾನೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಒಟ್ಟು ಸೇರಿ ಈತನನ್ನು ಥಳಿಸಿದ್ದಾರೆ. ಜನರಿಂದ ತಪ್ಪಿಸಿಕೊಳ್ಳಲು ಚಲಿಸುವ ರೈಲಿನಿಂದ ಜಿಗಿದಿದ್ದ. ಆಗ ತೀವ್ರವಾಗಿ ಗಾಯಗೊಂಡಿದ್ದ.
ಆರೋಪಿಯನ್ನ ದಾವಣಗೆರೆ ಪೊಲೀಸರು ವಶಕ್ಕೆ ಪಡೆದಿದ್ದರು. ಅಂಜಲಿ ಕೊಲೆ ಆರೋಪಿ ಎಂದು ಆರಂಭದಲ್ಲಿ ತಿಳಿದಿರಲಿಲ್ಲ. ಬಳಿಕ ಆರೋಪಿಯ ಗುರುತು ಪತ್ತೆ ಹಚ್ಚಿದ ದಾವಣಗೆರೆ ಪೊಲೀಸರು, ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈತನನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆತಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಕಿಮ್ಸ್‌ಗೆ ಆಗಮಿಸಿ ಆರೋಪಿಯನ್ನು ಪರಿಶೀಲಿಸಿದ್ದಾರೆ.