ಬೆಂಗಳೂರು: ಕಾಂಗ್ರೆಸ್ ಸರಕಾರಕ್ಕೆ ಅನುಕೂಲ ಆಗುವ ರೀತಿಯಲ್ಲಿ ಹೇಳಿಕೆ ನೀಡದಿದ್ದರೆ ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ಎಸ್ಐಟಿ ಅಧಿಕಾರಿಗಳು ನೊಂದ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಸಂತ್ರಸ್ತ ಮಹಿಳೆ ಒಬ್ಬರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ಈ ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಸಚಿವ ಕೃಷ್ಣ ಬೈರೇಗೌಡರೇ.. ಈಗ ಏನು ಹೇಳುತ್ತೀರಿ? ಕಂಡ ಕಂಡವರ ಮನೆ ಬಾಗಿಲಿಗೆ ಹೋಗಿ ಬೆದರಿಕೆ ಹಾಕುತ್ತಿದ್ದೀರಿ. ನಿಮ್ಮ ತನಿಖಾ ತಂಡದ ಅಧಿಕಾರಿಗಳು ನೊಂದ ಮಹಿಳೆಯರಿಗೆ ಬೆದರಿಕೆ ಹಾಕುತ್ತಿರುವುದು ಸುಳ್ಳೇ? ಎಲ್ಲೆಲ್ಲಿ ಏನೆಲ್ಲಾ ನಿಮ್ಮ ಅಧಿಕಾರಿಗಳು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ನನಗೂ ಬರುತ್ತಿದೆ. ನಾವು ಹೇಳಿದ ಹಾಗೆಯೇ ಹೇಳಿಕೆ ಕೊಡದಿದ್ದರೆ ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ನಿಮ್ಮ ಅಧಿಕಾರಿಗಳು ಬೆದರಿಕೆ ಹಾಕುತ್ತಿಲ್ಲವೇ? ನಿಜ ಹೇಳಿ. ಇದೇನಾ ತನಿಖೆ ನಡೆಸುವ ರೀತಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ರಕ್ಷಣೆ ಮಾಡಿರುವ ಮಹಿಳೆಯನ್ನು ಎಲ್ಲಿ ಇಟ್ಟಿದ್ದೀರಿ?
ಹಾಸನ ಅಶ್ಲೀಲ ವಿಡಿಯೋಗಳು ಹಾಗೂ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಬಗ್ಗೆ ಕೃಷ್ಣಭೈರೇಗೌಡರು ಮಾಡಿರುವ ಟೀಕೆಗಳಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ ಅವರು; ಕಿಡ್ನಾಪ್ ಪ್ರಕರಣದಲ್ಲಿ ರಕ್ಷಣೆ ಮಾಡಿರುವ ಆ ಮಹಿಳೆಯನ್ನು ಎಲ್ಲಿ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಕಿಡ್ನಾಪ್ ಆಗಿದ್ದಾರೆನ್ನಲಾದ ಮಹಿಳೆಯನ್ನು ರಕ್ಷಣೆ ಮಾಡಿದ್ದೇವೆ ಎಂದು ಹೇಳಿದ್ದೀರಿ. ಎಲ್ಲಿ ರಕ್ಷಣೆ ಮಾಡಿದಿರಿ ಅವರನ್ನು? ಆ ಮಹಿಳೆಯನ್ನು ಈಗ ಎಲ್ಲಿ ಇರಿಸಿದ್ದೀರಿ? ಇದುವರೆಗೂ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ಕೊಡಿಸಲಿಲ್ಲ ಯಾಕೆ? ಎಂದು ಅವರು ಸರಣಿ ಪ್ರಶ್ನೆಗಳನ್ನು ಕೇಳಿದರು.
ಇವತ್ತು ಕೂಡ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಕರೆದು ಕೊಂಡು ಬಂದಿದ್ದೀರಿ. ಜಾಮೀನು ಪಡೆಯಲು ಹೋದ ವಕೀಲರನ್ನು ಕರೆದುಕೊಂಡು ಬಂದಿದ್ದೀರಾ.. ಕಿಡ್ನಾಪ್ ಗೆ ಒಳಪಟ್ಟರೆನ್ನಲಾದ ಹೆಣ್ಣುಮಗಳನ್ನೂ ಕರೆದುಕೊಂಡು ಬಂದಿದ್ದೀರಿ. ಅವರಿಂದ ಏನು ಹೇಳಿಕೆ ಪಡೆದಿದ್ದೀರಿ? ಎಲ್ಲಿಂದ ಆಕೆಯನ್ನು ಕರೆದುಕೊಂಡು ಬಂದಿದ್ದೀರಿ? ಎಂದು ನೇರ ಪ್ರಶ್ನೆಗಳನ್ನು ಕೇಳಿದರು ಅವರು.
ಪೆನ್ ಡ್ರೈವ್ ಹಂಚಿದ್ದನ್ನು ಸಚಿವರು ಸಮರ್ಥಿಸುತ್ತಾರಾ?
ಪ್ರಪಂಚದಲ್ಲಿಯೇ ಅತಿ ದೊಡ್ಡ ಲೈಂಗಿಕ ಹಗರಣ ಎಂದು ಹೇಳುತ್ತಿರುವ ಕೃಷ್ಣ ಭೈರೇಗೌಡರಿಗೆ, ಅಷ್ಟು ದೊಡ್ಡದಾದ ಲೈಂಗಿಕ ಹಗರಣದಲ್ಲಿ ನೊಂದ ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಪೆನ್ ಡ್ರೈವ್ ಗಳಲ್ಲಿ ತುಂಬಿಸಿ ಹಾದಿಬೀದಿಯಲ್ಲಿ ಹಂಚಬಾರದು ಎನ್ನುವುದು ಗೊತ್ತಿರಲಿಲ್ಲವೇ? ವಿದೇಶದಲ್ಲಿ ಓದಿಕೊಂಡು ಬಂದ ಅವರಿಗೆ ಇಷ್ಟೂ ಸಾಮಾನ್ಯ ತಿಳಿವಳಿಕೆ ಇಲ್ಲವೇ? ಪೆನ್ ಡ್ರೈವ್ ಗಳನ್ನು ಹಂಚಿದ್ದನ್ನು ಅವರು ಸಮರ್ಥನೆ ಮಾಡುತ್ತಾರೆಯೇ? ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮಾನಹರಣ, ಶೀಲಹರಣ ಮಾಡಿರುವುದು ನೀವು, ನಿಮ್ಮ ಪಟಾಲಂ. ನಿಮ್ಮ ನಾಯಕರು ಕೃಷ್ಣ ಬೈರೇಗೌಡರೇ. ಡಿಕೆಶಿ ಪಾತ್ರ ಇಲ್ಲದೇ ಇಲ್ಲದಿದ್ದರೆ ದೇವರಾಜೇಗೌಡರು ಸುಖಾಸುಮ್ಮನೆ ಯಾಕೆ ಹೇಳುತ್ತಿದ್ದರು? “ಹಲೋ.. ನಾನು ಡಿ.ಕೆ.ಶಿವಕುಮಾರ್ ಮಾತಾಡ್ತಾ ಇದೀನಿ.. ಹೇಗಿದ್ದೀಯಪ್ಪಾ? ಎಂದು ಕೇಳಿದ್ದು ಯಾರಪ್ಪಾ? ಯಾಕಪ್ಪಾ ಮಾತನಾಡಿದೆ ಡಿ.ಕೆ.ಶಿವಕುಮಾರ್? ಮಾಡುವುದೆಲ್ಲಾ ಮಾಡಿ, ಈಗ ನನ್ನ ಮೇಲೇ ಆರೋಪ ಮಾಡುತ್ತಿದ್ದೀರಿ” ಎಂದು ಕಟುವಾಗಿ ಪ್ರಶ್ನಿಸಿದರು ಅವರು.
ಸಚಿವರಿಗೆ ನಾನೇ ಟಾರ್ಗೆಟ್
ಒಕ್ಕಲಿಗ ಸಚಿವರು, ಸಂಸದರು, ಶಾಸಕರು ನನ್ನ ವಿರುದ್ಧ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅವರ ಉದ್ದೇಶ ಇರುವುದು ನೊಂದವರಿಗೆ ನ್ಯಾಯ ಕೊಡಿಸುವುದಲ್ಲ. ನನ್ನ ವಿರುದ್ಧ ದಾಳಿ ಮಾಡುವುದಷ್ಟೇ ಅವರ ಗುರಿ. ಅವರು ಪೆನ್ ಡ್ರೈವ್ ಗಳನ್ನು ಹಂಚಿಕೆ ಮಾಡಿದ ತಮ್ಮ ಪಕ್ಷದ, ಸರಕಾರದ ʼಖಳನಾಯಕʼನನ್ನು ರಕ್ಷಣೆ ಮಾಡಿಕೊಳ್ಳಲು ಜಾತಿ ಅಸ್ತ್ರ ಬಳಕೆ ಮಾಡಿದ್ದಾರೆ. ನಾನು ಅಂತಹ ಕೆಲಸ ಮಾಡಲ್ಲ. ಇಲ್ಲಿ ನಾನು ಜಾತಿಯನ್ನು ಎಳೆದು ತರುವುದಿಲ್ಲ. ಏಕಾಂಗಿಯಾಗಿಯೇ ಇದೆಲ್ಲವನ್ನೂ ಎದುರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಹಾಸನದಲ್ಲಿ ಪೆನ್ ಡ್ರೈವ್ ಹಂಚಿದವರು ಇನ್ನೂ ಸಿಕ್ಕಿಲ್ಲ ನಿಮ್ಮ ಯೋಗ್ಯತೆಗೆ. ಆದರೆ, ರಾಮನಗರ ಶಾಸಕರ ವಿಡಿಯೋ ಬಂತಲ್ಲ, ಅದರ ಬಗ್ಗೆ ರಾಕೆಟ್ ವೇಗದಲ್ಲಿ ಮೂವರನ್ನು ಬಂಧನ ಮಾಡಿದ್ದೀರಾ ಅಲ್ಲವೇ? ನೀವು, ನಿಮ್ಮ ತನಿಖೆ ಹೇಗೆ ಸಾಗುತ್ತಿದೆ ಎನ್ನುವುದಕ್ಕೆ ಇದೊಂದು ಸ್ಯಾಂಪಲ್ ಸಾಕಲ್ಲವೇ? ಎಂದು ಸರಕಾರಕ್ಕೆ ಛೇಡಿಸಿದರು ಅವರು.
ನೇರವಾಗಿ ನನ್ನ ಮೇಲೆ ಗುರಿಯಿಟ್ಟು ಈ ವಿಚಾರದಲ್ಲಿ ಅವರೆಲ್ಲರೂ ಮಾತನಾಡಿದ್ದಾರೆ. ಪೆನ್ ಡ್ರೈವ್ ವಿಚಾರ ಗೊತ್ತಿದ್ದೂ ನಾನು ಹಾಸನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ. ಡಿಕೆಶಿ ಮತ್ತು ನನ್ನ ನಡುವೆ ಒಕ್ಕಲಿಗ ನಾಯಕತ್ವಕ್ಕೆ ನಡೆಯುತ್ತಿರುವ ಫೈಟ್ ಎಂದು ಬಿಂಬಿಸಲು ಹೊರಟಿದ್ದಾರೆ. ಮೊದಲಿನಿಂದಲೂ ನಾನು ಏಕಾಂಗಿಯಾಗಿಯೇ ಹೋರಾಟ ಮಾಡಿದ್ದೆ. ಈಗಲೂ ಮಾಡುತ್ತಿದ್ದೇನೆ. ಆಗ ನೀವು 80 ಶಾಸಕರು ಇದ್ದೀರಿ. ನಾವು 28 ಶಾಸಕರಷ್ಟೇ ಇದ್ದೆವು. ಎಲ್ಲಾದರೂ ನಿಮಗೆ ಹೆದರಿದೆವಾ? ಪಲಾಯನ ಮಾಡಿದೆವಾ? ಎಂದು ಕೇಳಿದರು ಅವರು.
ತನಿಖೆಯನ್ನು ದೃಶ್ಯಂ ಸಿನಿಮಾಗೆ ಹೋಲಿಸಿದ ಹೆಚ್ದಿಕೆ
ಪೆನ್ ಡ್ರೈವ್ ವಿಚಾರವನ್ನು ನನ್ನ ತಲೆಗೆ ಕಟ್ಟಲು ಹೊರಟಿದ್ದೀರಿ. ನಾನೇ ಪ್ರೊಡ್ಯೂಸರ್, ಡೈರೆಕ್ಟರ್, ಕಥಾನಾಯಕ ಎಂದೆಲ್ಲಾ ಹೇಳತ್ತಿದ್ದೀರಿ. ನಾನು ಸಿನಿಮಾ ನಿರ್ಮಾಣ ಮಾಡಿದ್ದೇನೆ, ಆದರೆ ಆಕ್ಟಿಂಗ್ ಮಾಡಿಲ್ಲ ಅಷ್ಟೇ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು ಅವರು.
ಈ ಘಟನೆಗೆ ನನ್ನನ್ನು ಕಥಾನಾಯಕ ಮಾಡಲು ಹೊರಟಿದ್ದೀರಿ ಅಲ್ಲವೇ? ಹಲವಾರು ಸಿನಿಮಾಗಳ ಕಥೆಗಳನ್ನು ನೋಡಿದ್ದೇನೆ, ಕೇಳಿದ್ದೇನೆ. ಅಂತಹ ಸಿನಿಮಾಗಳೇ ಹಿಟ್ ಆಗಿ ಬಿಡುತ್ತಿವೆ. ಕನ್ನಡದಲ್ಲಿ ʼಉತ್ಕರ್ಷʼ, ಮಲೆಯಾಳಂ ರೀಮೇಕ್ ನ ʼದೃಶ್ಯಂʼ ನಂತಹ ಸಿನಿಮಾಗಳು ಬಂದಿರುವುದನ್ನು ನೋಡಿದ್ದೇವೆ. ಈ ಪ್ರಕರಣ, ಸರಕಾರದ ತನಿಖೆ ನಡೆಸುತ್ತಿರುವ ವರಸೆ ನೋಡಿದರೆ ನನಗೆ ಆ ಸಿನಿಮಾಗಳು ನೆನಪಿಗೆ ಬರುತ್ತಿವೆ ಎಂದು ಅವರು ಕುಟುಕಿದರು.
ತಲೆ ಮರೆಸಿಕೊಂಡಿರುವ ಆ ಚಾಲಕನನ್ನು ಮೊದಲು ಹಿಡಿದು ವಿಚಾರಣೆ ನಡೆಸಿ. ಎಲ್ಲಾ ಕಥೆಗಳು ಹೊರಗೆ ಬರುತ್ತವೆ. ಮನೆಮನೆಗೆ ಹೋಗಿ ದೂರು ಕೊಡಿ ಅಂತ ಒತ್ತಾಯ ಮಾಡುವ ಅವಶ್ಯಕತೆ ಇಲ್ಲ. ಕೆ ಆರ್ ನಗರದಿಂದ ಹುಡುಕಿ ಹುಡುಕಿ ಕರೆದುಕೊಂಡು ಬರ್ತಾ ಇದೀರಲ್ಲ? ಹಾಸನ, ಹೊಳೆನರಸೀಪುರದಲ್ಲಿ ಯಾರೂ ಇಲ್ವಾ? ಯಾಕೆ ಇವತ್ತು ಕೇಂದ್ರ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ ಎಂದು ಅವರು ಕಿಡಿಕಾರಿದರು.
ಸಚಿವರೇ, ತನಿಖೆ ಸರಿಯಾದ ರೀತಿಯಲ್ಲಿ ಆಗದೇ ಇದ್ದರೆ ಇನ್ನೂ ಏನೇನು ಆಗುತ್ತದೆಯೋ ಗೊತ್ತಿಲ್ಲ. ನಿಮ್ಮ ನಾಯಕರ ಕೈಗೆ ಈ ವಿಚಾರ ಯಾವಾಗ ಬಂತು? ಪ್ರಜ್ವಲ್ ರೇವಣ್ಣ ಚಾಲಕ ಕಾರ್ತಿಕ್ ಗೌಡ ಈಗ ಶ್ರೆಯಸ್ ಪಟೇಲ್ ಜತೆ ಇದ್ದಾನೆ. ಫೋಟೋಗಳನ್ನು ನೀವೇ ತೋರಿಸ್ತಾ ಇದೀರಾ ಅಲ್ಲವೇ? ಒಂದು ವೇಳೆ ಕಾರ್ತಿಕ್ ಗೌಡ ನನ್ನನ್ನು ಭೇಟಿ ಮಾಡಿ ಎಲ್ಲವನ್ನೂ ಹೇಳಿದ್ದಿದ್ದರೆ ಅಂದೇ ಸರಿ ಮಾಡುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಪೆನ್ ಡ್ರೈವ್ ಸುರಿದಿದ್ದು ನಾವಾ?
ಇದು ಪ್ರಪಂಚದಲ್ಲಿಯೇ ದೊಡ್ಡ ಲೈಂಗಿಕ ಹಗರಣ ಎಂದು ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಇದರ ಪ್ರಾಮುಖ್ಯತೆ ಮರೆಯಲು ಹೊರಟಿದ್ದೇವೆ ಎಂದಿದ್ದಾರೆ. ಪೆನ್ ಡ್ರೈವ್ ಬಿಟ್ಟಿದ್ದು ಪ್ರಚಾರಕ್ಕೋ ಅಥವಾ ಇನ್ನೇತಕ್ಕೆ? ಅದನ್ನು ಬಿಟ್ಟಿದ್ದು ನಾವಾ? ಬೀದಿಬೀದಿಯಲ್ಲಿ ಚೆಲ್ಲಿದ್ದು ನಾವಾ? ಮೋದಿಯ, ಅಮಿತ್ ಶಾ ಅವರನ್ನು ಪ್ರಶ್ನೆ ಮಾಡಿದ್ದೀರಿ. ನಿಮಗೆ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ಬೇಕಿಲ್ಲ. ನಮ್ಮ ಮೈತ್ರಿ ಇರುತ್ತದೆಯೋ ಇಲ್ಲವೋ ಎನ್ನುವುದು ಬೇಕಷ್ಟೇ. ಒಂದು ಮಾತು ನೆನಪಿಟ್ಟುಕೊಳ್ಳಿ. ಈ ಪಕ್ಷ ಬೇರೆಯವರ ದಯೆದಾಕ್ಷಿಣ್ಯದಿಂದ ಬದುಕುತ್ತಿಲ್ಲ. ನಮ್ಮದೇ ಹೆಗ್ಗುರುತು ಇದೆ. ಲಕ್ಷಾಂತರ ಕಾರ್ಯಕರ್ತರಿದ್ದಾರೆ. ನಿಮ್ಮ ಹಾಗೇ ಕಂಡವರ ಬಾಗಿಲಿಗೆ ಹೋಗಿಲ್ಲ ನಾವು ಎಂದು ಕೃಷ್ಣ ಬೈರೇಗೌಡರಿಗೆ ತಿರುಗೇಟು ಕೊಟ್ಟರು ಕುಮಾರಸ್ವಾಮಿ.
ಮಹಿಳಾ ಆಯೋಗದ ಅಧ್ಯಕ್ಷರು ಸಿಎಂಗೆ ಪತ್ರ ಬರೆಯುತ್ತಾರೆ. ಮಹಿಳೆಯರ ಮಾನಹರಣ ಪ್ರಕರಣ ನಾಲ್ಕು ಗೋಡೆಗಳ ನಡುವೆ ಇತ್ತು. ಅದನ್ನು ವಿಶ್ವಕ್ಕೆ ಗೊತ್ತಾಗುವಂತೆ ಮಾಡಿದ್ದು ಯಾರು? ಅವತ್ತು ನವೀನ್ ಗೌಡ ಎಂಬ ಕಿಡಿಗೇಡಿ ಇನ್ನೇನು ಅಶ್ಲೀಲ ವಿಡಿಯೋ ಬರುತ್ತದೆ, ಕಮಿಂಗ್ ಸೂನ್ ಎಂದು ಪೋಸ್ಟ್ ಹಾಕುತ್ತಾನೆ. ಎಂಟು ಗಂಟೆಗೆ ರಿಲೀಸ್ ಆಗುತ್ತೆ ಅಂತ ಬರೆದಿದ್ದ. ಇವತ್ತಿನವರೆಗೆ ಅವನ ಮೇಲೆ ಕ್ರಮ ಕೈಗೊಂಡಿದ್ದೀರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜ್ವಲ್ ಸಮರ್ಥನೆ ಮಾಡುವ ಪ್ರಶ್ನೆ ಇಲ್ಲ
ಪ್ರಜ್ವಲ್ ರೇವಣ್ಣ ಅವರನ್ನು ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಹಾಗೂ ಪ್ರತಿಯೊಬ್ಬರೂ ಈ ನೆಲದ ಕಾನೂನಿಗೆ ತಲೆ ಬಾಗಲೇಬೇಕು ಎಂದು ಪ್ರಕರಣ ಬೆಳಕಿಗೆ ಬಂದ ಮೊದಲ ದಿನವೇ ಹೇಳಿದ್ದೇನೆ. ಅದನ್ನು ಉಪ ಮುಖ್ಯಮಂತ್ರಿಗಳು ಅದನ್ನೂ ವ್ಯಂಗ್ಯ ಮಾಡಿದ್ದಾರೆ. ದೇವೇಗೌಡರಿಗೆ ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ನಮ್ಮ ನಮ್ಮ ವ್ಯವಹಾರ, ಸಂಸಾರ ನಮ್ಮದು. ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಹಾಸನ ರಾಜಕಾರಣದಲ್ಲಿ ಪ್ರವೇಶ ಮಾಡಿದ್ದೆ. ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದಿದ್ದೆ. ಆ ಮಾತಿನ ಪ್ರಕಾರ ನಡೆದುಕೊಂಡೆ. ನಾನು ರೇವಣ್ಣ ಅವರ ಕುಟುಂಬವನ್ನು ರಾಜಕಾರಣದಲ್ಲಿ ಮುಗಿಸಲು ಹೊರಟಿದ್ದೇನೆ ಅಂತೆಲ್ಲಾ ಮಾತನಾಡಿದ್ದಾರೆ ಇವರು. ನಾಚಿಕೆ ಆಗಬೇಕು ಇವರಿಗೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ನಾನು ಏಕವಚನದಲ್ಲಿ ಮಾತಾಡಿದರೆ ನೋವಾಗುತ್ತದೆ ಅವರಿಗೆ.. ಪಾಪ.. ಹುಬ್ಬಳ್ಳಿಯಲ್ಲಿ ನೇಹಾ ಘಟನೆ ನಡೆದಾಗ ಈ ಸರ್ಕಾ.ರ ಹೇಗೆ ನಡೆದುಕೊಂಡಿತು? ಹಿಂದೂಗಳ ಮಾಂಗಲ್ಯ ಹರಣ, ಶೀಲಹರಣ ಎಂದೆಲ್ಲಾ ಕೃಷ್ಣ ಭೈರೇಗೌಡರು ಹೇಳಿದ್ದಾರೆ. ಇವೆಲ್ಲಾ ಕಾಂಗ್ರೆಸ್ ನವರಿಗೆ ಈಗ ನೆನಪಿಗೆ ಬರುತ್ತಿವೆ. ಹಿಂದೂಗಳು ಇವರಿಗೆ ಈಗ ನೆನಪಿಗೆ ಬಂದಿದ್ದಾರೆ. ಹಿಂದೆ ಕಲ್ಲಪ್ಪ ಹಂಡಿಭಾಗ್ ಎನ್ನುವ ಪೊಲೀಸ್ ಅಧಿಕಾರಿಯ ಬದುಕನ್ನೇ ಹರಣ ಮಾಡಿದವರು ಇವರು. ಆ ಕುಟುಂಬಕ್ಕೆ ಏನು ಮಾಡಿದಿರಿ? ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಕೃಷ್ಣ ಬೈರೇಗೌಡರೂ ಆಗ ಮಂತ್ರಿ ಆಗಿದ್ದರು. ನಿಷ್ಟಾವಂತ ಅಧಿಕಾರಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಆ ಹೆಣ್ಣುಮಗಳ ಮಾಂಗಲ್ಯ ಉಳಿಸಿದರ ನೀವು? ಎಂದು ಅವರು ತರಾಟೆಗೆ ತೆಗೆದುಕೊಂಡರು.
ಪೆನ್ ಡ್ರೈವ್ ಗಳಿಗೆ ಎಷ್ಟು ಖರ್ಚು ಮಾಡಿದ್ದೀರಿ?
ದೇವರಾಜೇಗೌಡ ಮತ್ತು ಕುಮಾರಸ್ವಾಮಿ ಭೇಟಿ ಮಾಡಿದ್ದರು. ಅವರೇ ಈ ಕಥೆ ಹೆಣೆದಿದ್ದಾರೆ ಅಂತೆಲ್ಲಾ ಹೇಳ್ತಾ ಇದೀರಲ್ಲ? 26ನೇ ತಾರೀಖಿಗೆ ಮೊದಲು ಈ ಪೆನ್ ಡ್ರೈವ್ ಗಳಿಗೆ ಎಷ್ಟು ಖರ್ಚು ಮಾಡಿದ್ದೀರಿ? ಕುಮಾರಸ್ವಾಮಿ ಜೇಬಲ್ಲಿ ಪೆನ್ ಡ್ರೈವ್ ಇದೆ ಅಂತಾ ಸುಮ್ನೆ ತೋರಿಸ್ತಾ ಇರ್ತೀರಾ ಅಂತೀರಲ್ಲ.. ನಾನು ಇಂತ ಪೆನ್ ಡ್ರೈವ್ ತಯಾರು ಮಾಡೋನಲ್ಲ. ನಿಮ್ಮ ಸರ್ಕಾರದ ಭ್ರಷ್ಟಾಚಾರ ದ ಪೆನ್ ಡ್ರೈವ್ ನನ್ನ ಬಳಿ ಇರೋದು. ಸ್ಪೀಕರ್ ಕ್ರಮ ತಗೊಳ್ತೀನಿ ಅಂತಾ ಭರವಸೆ ಕೊಟ್ರೆ, ಅದನ್ನು ಬಿಡುಗಡೆ ಮಾಡ್ತೀನಿ ಎಂದು ಅವರು ಸವಾಲು ಹಾಕಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿಟಿ ದೇವೇಗೌಡರು, ಬಂಡೆಪ್ಪ ಕಾಶೆಂಪೂರ್, ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು, ಸಾರಾ ಮಹೇಶ್, ವೆಂಕಟರಾವ್ ನಾಡಗೌಡ, ಅಲ್ಕೋಡ್ ಹನುಮಂತಪ್ಪ, ಶಾಸಕರಾದ ನೇಮಿರಾಜ್ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಬೊಜೆಗೌಡ, ಟಿ.ಎ.ಶರವಣ, ಮಂಜೇಗೌಡ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಪ್ರಸನ್ನ ಕುಮಾರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತು ಯಾವುದೇ ನಿರ್ಬಂಧ ವಿಧಿಸಿಲ್ಲ: BBMP ಸ್ಪಷ್ಟನೆ
BREAKING : ಮೆಗಾಸ್ಟಾರ್ ಚಿರಂಜೀವಿ ಸೇರಿ 132 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ, ಇಲ್ಲಿದೆ ಲಿಸ್ಟ್