ಬೆಂಗಳೂರು : “ವಿಡಿಯೋ ಮಾಡಿಕೊಂಡವರ ಕೃತ್ಯದ ಬಗ್ಗೆ ಮಾತನಾಡುವುದು ಬಿಟ್ಟು, ವಿಡಿಯೋ ಹಂಚಿಕೆಯ ಬಗ್ಗೆ ಮಾತನಾಡಲಾಗುತ್ತಿದೆ. ಇದರಲ್ಲಿ ಡಿ.ಕೆ.ಶಿವಕುಮಾರ್ ಅವರ ಮಧ್ಯ ಪ್ರವೇಶವಾಗಿಲ್ಲ” ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕಿಡಿಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಹಗರಣದಲ್ಲಿ ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರು ಮಧ್ಯ ಪ್ರವೇಶ ಮಾಡಿಲ್ಲ. ನೂರಕ್ಕೆ ನೂರರಷ್ಟು ಈ ವಿಚಾರಕ್ಕೂ ಅವರಿಗೂ ಸಂಬಂಧವಿಲ್ಲ. ಅವರು ಟೀಕೆ ಮಾಡಿದ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರು ತಿರುಗೇಟು ನೀಡಿದ್ದಾರೆ. ಈ ವಿಚಾರಕ್ಕೂ ಮೊದಲೇ ಇಬ್ಬರ ನಡುವೆ ಟೀಕೆ, ಟಿಪ್ಪಣಿಗಳು ನಡೆದಿವೆ ಎಂದರು.
ಈ ಅನಾಚಾರವನ್ನು ಯಾರೋ ವಿಡಿಯೋ ಮಾಡಿದ್ದಲ್ಲ. ಸ್ವತಃ ಅವರೇ ಮಾಡಿಕೊಂಡಿರುವುದು. ಇದು ಹಾಸನದಲ್ಲಿಯೇ ಎಲ್ಲರಿಗೂ ಹಂಚಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾದ ನಂತರ ಯಾವುದೂ ಸಹ ಯಾರ ಹಿಡಿತಕ್ಕೂ ಸಿಗುವುದಿಲ್ಲ. ವಿಚಾರ ಗಾಳಿಗೆ ಹೋದ ಮೇಲೆ ಯಾವ ದಿಕ್ಕಿಗೆ ಹೋಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ ಎಂದರು.
ಇಂತಹ ಸೂಕ್ಷ್ಮವಾದ ವಿಚಾರವನ್ನು ಜನತಾದಳದವರು ಬೀದಿ ರಂಪ ಮಾಡುತ್ತಿದ್ದಾರೆ. ಯಾವ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರತಿಭಟನೆಗೆ ರಾಜ್ಯದಾದ್ಯಂತ ಕರೆ ಕೊಟ್ಟಿದ್ದಾರೆ ಎಂದು ತಿಳಿದಿಲ್ಲ. ಈ ವಿಚಾರ ಬೇರೆ ದಿಕ್ಕಿಗೆ ಹೋಗಲಿ ಎಂದು ರಾಜಕೀಕರಣ ಮಾಡಲು ದಳದವರು ಹೊರಟಿದ್ದಾರೆ ಎಂದು ಹೇಳಿದರು.
ವಜಾ ಮಾಡಲು ಶಿವಕುಮಾರ್ ಅವರು ಕೋಳಿ ಮರಿಯೇ
“ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಲು, ತೆಗೆದುಹಾಕಲು ಕೋಳಿ ಮರಿಯೇ? ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದಾರೆ. ಅವರು ತಾವೇ ಉನ್ನತಮಟ್ಟದ ವ್ಯಕ್ತಿ ಎಂದುಕೊಂಡಿದ್ದಾರೆ. ಇಬ್ಬರ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಸಹ ಏನೂ ಇಲ್ಲ. ನಿನ್ನಿಂದ ಬಹಳ ಉಪಯೋಗವಾಗುತ್ತದೆ ಬಾ ಎಂದು ಹೇಳಿಲ್ಲ. ದೇವರಾಜೇಗೌಡ ಹಾಗೂ ಶಿವರಾಮೇಗೌಡ ಇಬ್ಬರೂ ಕೂಡ ಬಿಜೆಪಿ ನಾಯಕ ಆಗಿರುವ ಕಾರಣಕ್ಕೆ ಪೋನ್ ನೀಡಿದಾಗ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅವರ ಮಧ್ಯಪ್ರವೇಶವಾಗಿಲ್ಲ ಎಂದು ತಿಳಿಸಿದರು.
ನಾವು, ನೀವು ಈ ಸಮಾಜಕ್ಕೆ ಕಟ್ಟಾಳುಗಳಲ್ಲ
“ಸಮಾಜವನ್ನು ಈ ವಿಚಾರದಲ್ಲಿ ಎಳೆದು ತರುವುದು ಒಳ್ಳೆಯದಲ್ಲ. ನಾವು, ನೀವು ಈ ಸಮಾಜಕ್ಕೆ ಕಟ್ಟಾಳುಗಳಲ್ಲ. ಸಂದರ್ಭ ಬಂದಾಗ ಸಮಾಜ ನಮ್ಮನ್ನು, ನಿಮ್ಮನ್ನು ಬೆಂಬಲಿಸುತ್ತದೆ. ಸಮಾಜವು ಒಂದಷ್ಟು ಜನರಿಗೆ ಹೆಚ್ಚು, ಕಡಿಮೆ ಆಶೀರ್ವಾದ ಮಾಡಿರಬಹುದು. ಆದರೆ ಎಲ್ಲವೂ ನಮ್ಮದೇ ಹಿಡಿತದಲ್ಲಿ ಇದೆ ಎಂದು ಬಾವಿಸುವುದು ತಪ್ಪು. ಸಮುದಾಯದವರು ನಮಗೂ, ನಿಮಗೂ ಆಶೀರ್ವಾದ ಮಾಡಿದ್ದಾರೆ ಎಂದರು.
ನೀವು ಅಂದರೆ ಒಕ್ಕಲಿಗರು, ಒಕ್ಕಲಿಗರು ಎಂದರೆ ನೀವು. ನೀವು ಏನು ಮಾಡಿದರೂ ಒಕ್ಕಲಿಗರು ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಕೊಂಡಿದ್ದಾರೆ. ಕೆಂಪೇಗೌಡರು, ಕುವೆಂಪು ಅವರು ಹುಟ್ಟಿದ ಸಮುದಾಯ ಇದು. ಎಲ್ಲಾ ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ಈ ಸಮುದಾಯಕ್ಕೆ ಇದೆ. ಈ ಸಮಾಜಕ್ಕೆ ತನ್ನದೇ ಆದ ಗೌರವಿದೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ಏಕವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು
ಮೊದಲು ಏಕವಚನದಲ್ಲಿ ಮಾತನಾಡುವುದು, ಗದರಿಸಿ ಮಾತನಾಡುವುದನ್ನು ನಿಲ್ಲಿಸಬೇಕು. ನಿಮಗಿಂತ ಚೆನ್ನಾಗಿ ಏಕವಚನದಲ್ಲಿ ಮಾತನಾಡಲು ನಮಗೆ ಸಾಧ್ಯವಾಗುತ್ತದೆ. ಆದರೆ ನಾವು ಟಿವಿ ಮುಂದೆ ಕುಳಿತಾಗ ಈ ಮಾತುಗಳನ್ನು ಕೇಳಲು ಸಾಧ್ಯವಾಗದ ಕಾರಣ ಬಳಸುವುದಿಲ್ಲ. ನಿಮಗೆ ಏನು ಅನ್ನಿಸುತ್ತದೆಯೋ ತಿಳಿದಿಲ್ಲ. ಮುಖ್ಯಮಂತ್ರಿ ಮತ್ತು ಡಿಸಿಎಂ ವಿಚಾರದಲ್ಲಿ ಲಘುವಾಗಿ ಮಾತನಾಡುವುದು ಖಂಡನೀಯ ಎಂದರು.
ಶ್ರೇಯಸ್ ಪಟೇಲ್ ಕಾರು ಚಾಲಕನ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವ ನಮ್ಮ ಜೊತೆ ನೂರಾರು ಜನ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಅವರ ಪೂರ್ವಾಪರ ತಿಳಿದುಕೊಂಡು ಪೋಟೋ ತೆಗೆಸಿಕೊಳ್ಳಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಇಡೀ ದೇಶ, ವಿದೇಶಗಳೇ ಗಮನ ಹರಿಸುವಂತಹ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳು ನಡೆದಾಗ ಅಧಿಕಾರದಲ್ಲಿ ಯಾವುದೇ ಸರ್ಕಾರ ಇದ್ದರೂ ತನಿಖೆ ನಡೆಸಬೇಕಾಗಿರುವುದು ಆಯಾಯಾ ಸರ್ಕಾರಗಳ ಕರ್ತವ್ಯ. ಆಡಳಿತ ಪಕ್ಷ ನೇಮಿಸಿರುವ ತನಿಖಾ ತಂಡವನ್ನು ವಿರೋಧ ಪಕ್ಷ ಒಪ್ಪಬೇಕು ಎಂದೇನಿಲ್ಲ. ಒಳ್ಳೆಯದನ್ನು ಒಳ್ಳೆಯದು ಎಂದು ಹೇಳುವ ಕಾಲ ದೂರವಾಗಿದೆ. ರಾಮರಾಜ್ಯದ ವಾತಾವರಣ ನಮ್ಮಲ್ಲಿ ಇಲ್ಲ ಎಂದರು.
ಎಸ್ ಐಟಿ ವ್ಯವಸ್ಥೆ ಸರಿಯಿಲ್ಲ ಅವರ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಜನತಾದಳದ ಮಿತ್ರರು ಹೇಳುತ್ತಿದ್ದಾರೆ. ಇನ್ನೂ ತನಿಖೆಯ ಪ್ರಾರಂಭದಲ್ಲೇ ತನಿಖೆ ಸರಿ ಇಲ್ಲ ಎನ್ನುವುದು ಎಷ್ಟು ಸರಿ? ಎಂದು ಕೇಳಿದರು.
ಇಡೀ ಕರ್ನಾಟಕ, ಕನ್ನಡಿಗರು ತಲೆ ತಗ್ಗಿಸುವ ವಿಚಾರ. ನೂರಾರು ಸಂಸಾರಗಳು ತಲೆ ತಗ್ಗಿಸಬೇಕಾಗಿದೆ. ತನಿಖೆ ಒಂದು ಹಂತಕ್ಕೆ ಹೋಗುವ ತನಕ ಬೀದಿಗೆ ಬಂದು ಮಾತನಾಡುವ ವಿಚಾರ ಇದಲ್ಲ ಎಂದರು.
ಈ ಅವಧಿಯ ನಂತ್ರ ಈ ಖಾತೆಗಳನ್ನ ಮುಚ್ಚಲಾಗುವುದು : ಗ್ರಾಹಕರಿಗೆ ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ ಎಚ್ಚರಿಕೆ