ನವದೆಹಲಿ: ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಶುಕ್ರವಾರ ಶೇಕಡಾ 40 ರಷ್ಟು ಸುಂಕ ವಿಧಿಸಿದೆ. ಮಾರ್ಚ್ 31, 2025 ರವರೆಗೆ ದೇಸಿ ಕಡಲೆ ಆಮದಿನ ಮೇಲಿನ ಸುಂಕವನ್ನು ವಿನಾಯಿತಿ ನೀಡಿದೆ. ಇದಲ್ಲದೆ, ಅಕ್ಟೋಬರ್ 31, 2024 ರಂದು ಅಥವಾ ಅದಕ್ಕೂ ಮೊದಲು ನೀಡಲಾದ ಪ್ರವೇಶ ಬಿಲ್ ಅಡಿಯಲ್ಲಿ ಬರುವ ಹಳದಿ ಬಟಾಣಿಗಳ ಆಮದಿನ ಮೇಲಿನ ಸುಂಕ ವಿನಾಯಿತಿಯನ್ನು ವಿಸ್ತರಿಸಿದೆ.
ಈ ಬದಲಾವಣೆಗಳು ಮೇ 4 ರಿಂದ ಜಾರಿಗೆ ಬರಲಿವೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಪ್ರಸ್ತುತ, ಈರುಳ್ಳಿ ರಫ್ತನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಭಾರತದ ಸ್ನೇಹಪರ ರಾಷ್ಟ್ರಗಳಿಗೆ ಸಾಗಣೆಗೆ ಸರ್ಕಾರ ಅನುಮತಿಸುತ್ತದೆ. ಯುಎಇ ಮತ್ತು ಬಾಂಗ್ಲಾದೇಶಕ್ಕೆ ನಿರ್ದಿಷ್ಟ ಪ್ರಮಾಣದ ಈರುಳ್ಳಿ ರಫ್ತು ಮಾಡಲು ಅನುಮತಿ ನೀಡಿದೆ.
ಕೇಂದ್ರ ಸರ್ಕಾರ ಈರುಳ್ಳಿ ಮೇಲಿನ ರಫ್ತು ಮೇಲಿದ್ದ ನಿಷೇಧ ಹಿಂಪಡೆದ ಬೆನ್ನಲ್ಲೇ ಈರುಳ್ಳಿ ದರ ಏರಿಕೆ ಕಂಡಿದೆ. ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಈರುಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ. ಭಾರತದ ಅತಿ ದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ನಾಸಿಕ್ ಜಿಲ್ಲೆಯ ಲಾಸಲ್ ಗಾಂವ್ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿ ದರ ಸರಾಸರಿ 200 ರೂಪಾಯಿ ಏರಿಕೆಯಾಗಿದೆ. ಗುಣಮಟ್ಟದ ಆಧಾರದ ಮೇಲೆ ಕ್ವಿಂಟಲ್ ಈರುಳ್ಳಿ ದರ 800 ರೂ., 2551 ರೂ., 2100 ರೂ.ಗೆ ಮಾರಾಟವಾಗುತ್ತಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ, ಭಾರತವು ಡಿಸೆಂಬರ್ 31, 2023 ರವರೆಗೆ ಈರುಳ್ಳಿಯ ಮೇಲೆ ಶೇಕಡಾ 40 ರಷ್ಟು ರಫ್ತು ಸುಂಕವನ್ನು ವಿಧಿಸಿತ್ತು.







