ಬೆಂಗಳೂರು: ಪ್ರಜ್ವಲ್ ರೇವಣ್ಣ ಇಷ್ಟೆಲ್ಲಾ ಅತ್ಯಾಚಾರಗಳನ್ನು ನಡೆಸುತ್ತಿದ್ದರೂ ತಂದೆ ಎಚ್.ಡಿ. ರೇವಣ್ಣ ಅವರೇನು ಮಾಡುತ್ತಿದ್ದರು? ಇಷ್ಟೆಲ್ಲಾ ಆಗುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದರೇ? ಅಥವಾ ಅಪ್ಪ ಮಗ ಇಬ್ಬರೂ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೇ? ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಎಲ್ಲಾ ಗೊತ್ತಿದ್ದರೂ ಸುಮ್ಮನಿದ್ದರೇ? ಪ್ರಜ್ವಲ್ ಕೃತ್ಯಗಳು ಬಿಜೆಪಿಗೆ ಗೊತ್ತಿದ್ದೂ ಮೈತ್ರಿ ಅಭ್ಯರ್ಥಿಯಾಗಿ ಹಾಸನದಿಂದ ಕಣಕ್ಕಿಳಿಸಿತೆ? ಬೇಲಿ ಎದ್ದು ಹೊಲ ಮೆಯ್ದರೆ ರಾಷ್ಟ್ರದ ಹೆಣ್ಣುಮಕ್ಕಳ ಪರಿಸ್ಥಿತಿಯೇನು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಸೆರಾವು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಹಿಳಾ ಸಂಘಟನೆಗಳ ಒಕ್ಕೂಟ ಹಾಗೂ ಆಮ್ ಆದ್ಮಿ ಪಾರ್ಟಿ ಸಹಯೋಗದೊಂದಿಗೆ ಮೇಣದ ಬತ್ತಿ ಹಚ್ಚುವ ಮೂಲಕ ಹಾಸನದ ಸಂಸದ ಪ್ರಜ್ವಲ್ ಪ್ರಕರಣದಲ್ಲಿ ನೊಂದಿರುವ ಸಾವಿರಾರು ಹೆಣ್ಣುಮಕ್ಕಳಿಗೆ ರಕ್ಷಣೆ, ಧೈರ್ಯ ಹಾಗೂ ಸಾಂತ್ವನ ನೀಡಲಾಯಿತು. ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ವೀಣಾ ಸೆರಾವು, ನಾವಿಲ್ಲಿ ಹೆಣ್ಣು ಮಕ್ಕಳಿಗೆ ಬೆಂಬಲ ಕೊಡಲು ಕ್ಯಾಂಡಲ್ ಹಚ್ಚಿದ್ದೇವೆ, ನೀವೇನು ಮಾಡಿದ್ದೀರಾ? ಎಂದು ಜೆಡಿಎಸ್ ನಾಯಕರನ್ನು ಪ್ರಶ್ನಿಸಿದರು. ನಾನು ಇಲ್ಲಿಗೆ ಬರುವುದಕ್ಕೆ ಮೊದಲು ನನ್ನ ಮಗಳು ಎಲ್ಲಿಗೆ ಹೋಗುತ್ತಿದ್ದೀರಾ? ಎಂದು ಕೇಳಿದಳು, ಅವಳಿಗೆ ನಾನು ಏನಂತ ಉತ್ತರ ಕೊಡಲಿ? ಯಾರೋ ಒಬ್ಬ ಸಾವಿರಾರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಿದ್ದಾನೆ, ಅದಕ್ಕೆ ಪ್ರತಿಭಟನೆಗೆ ಹೋಗುತ್ತಿದ್ದೇನೆ ಎಂದು ಹೇಳಲು ಆಗುತ್ತದೆಯೇ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಯಾಕೆ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ? ‘ಬೇಟಿ ಬಚಾವೋ, ಬೇಟಿ ಪಡಾವೋ’ ಎನ್ನುವ ಬಿಜೆಪಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರನ್ನು ತಮ್ಮ ಜೊತೆ ಸೇರಿಸಿಕೊಂಡು ಈಗ ‘ಬೇಟಿ ಪಠಾವೋ’ ಆಗಿದೆ ಎಂದು ಹೇಳಿದರು.
ಕುಮಾರಸ್ವಾಮಿ ಅವರೇ ನಿಮ್ಮ ಸಿಡಿ, ಪೆನ್‌ಡ್ರೈವ್ ಎಲ್ಲಿದೆ ತಗೊಂಡುಬನ್ನಿ ಇವಾಗ. ಹೆಣ್ಣು ಮಕ್ಕಳ ಮರ್ಯಾದೆ ಬೀದಿಯಲ್ಲಿ ಹರಾಜಾಗುತ್ತಿದೆ. ಈಗ ಯಾಕೆ ಮೌನವಾಗಿದ್ದೀರಾ ಬಂದು ಉತ್ತರ ಕೊಡಿ. ಮೊದಲು ಅವನು ನನ್ನ ಮಗ, ಕುಟುಂಬ ಎನ್ನುತ್ತಿದ್ದವರು, ಈಗ ಸಂಬಂಧವೇ ಇಲ್ಲ ಎನ್ನುತ್ತೀರಲ್ಲಾ ಎಂದು ಛೀಮಾರಿ ಹಾಕಿದರು.
ಯಾವ ಹೆಣ್ಣಿಗೆ ದೌರ್ಜನ್ಯವಾಗಿದೆ ಅವರ ಜೊತೆ ನಾವೆಲ್ಲಾ ಇದಿವಿ, ರಾಜಕೀಯ ಬಿಟ್ಟು ಎಲ್ಲರೂ ಅವರಿಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಚ್‌ಡಿ ರೇವಣ್ಣ ಅವರನ್ನು ಬಂಧಿಸಿದ ಸುದ್ದಿ ತಿಳಿದು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪ್ರಜ್ವಲ್ ರೇವಣ್ಣ ಬಂಧನವಾಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಆಮ್ ಆದ್ಮಿ ಪಾರ್ಟಿ ತಿಳಿಸಿದೆ.
ಈ ವೇಳೆ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ಬೆಂಗಳೂರು ನಗರಾಧ್ಯಕ್ಷ ಡಾ.ಸತೀಶ್ ಕುಮಾರ್, ಮಹಾಲಕ್ಷ್ಮಿ, ಅಂಜನಗೌಡ, ಬಾನುಪ್ರಿಯಾ, ಮುನೇಶ ಕುಮಾರ್, ವೇಣಿ ರೆಡ್ಡಿ, ಪುಷ್ಪ ಕೇಶವ್, ಜಗದೀಶ್ ಚಂದ್ರ, ಲೋಹಿತ್ ಹನುಮಾಪುರ, ಅಶೋಕ್ ಮೃತ್ಯುಂಜಯ, ಸುರೇಶ್ ರಾಥೋಡ್, ಸಾಶಾ ವಲಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
BIGG NEWS: ನಾಳೆ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ, ಪೋಲಿಸರಿಗೆ ಶರಣು ಸಾಧ್ಯತೆ !