ಬಾಗಲಕೋಟೆ: ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಶಪಥ ಮಾಡಿದ್ದಾರೆ.
ಇಂದು ಬಾಗಲಕೋಟೆ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರಾದರೂ ಅಂತರರಾಷ್ಟ್ರೀಯ ಪ್ರಯಾಣ ಮಾಡುವಾಗ ಪಾಸ್ ಪೋರ್ಟ್, ವೀಸಾ ಚೆಕ್ ಆಗುತ್ತದೆ. ಕೇಂದ್ರ ಸರ್ಕಾರಕ್ಕೆ ತಿಳಿಯದಂತೆ ಯಾರೂ ದೇಶದ ಹೊರಗೆ ಹೋಗಲು ಸಾಧ್ಯವಿಲ್ಲ ಎಂದರು.
ರೇವಣ್ಣ ದುಬೈಗೆ ತೆರಳಿರುವ ಬಗ್ಗೆ ಮಾತನಾಡಿದ ಅವರು ಯಾವ ದೇಶದಲ್ಲಿದ್ದರೂ ಕರೆತರುತ್ತೇವೆ. ಅವರು ದೇಶಕ್ಕೆ ಬರಲೇಬೇಕು. ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ನ್ನು ರದ್ದು ಮಾಡಲು ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಪ್ರಜ್ವಲ್ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ ಎಂದರು.
ಪ್ರಜ್ವಲ್ ರೇವಣ್ಣ ಅವರ ಮೇಲೆ ಬಲಾತ್ಕಾರ ಮಾಡಿರುವ ಆರೋಪವಿದೆ
ಪ್ರಜ್ವಲ್ ರೇವಣ್ಣ ಅವರ ಮೇಲೆ ಬಲಾತ್ಕಾರ ಮತ್ತು ಲೈಂಗಿಕ ಶೋಷಣೆ ಮಾಡಿರುವ ಆರೋಪವಿದೆ. ಪ್ರಜ್ವಲ್ ರೇವಣ್ಣ ಅವರ ಬಗ್ಗೆ ತಿಳಿದೂ ಬಿಜೆಪಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದರು.
ಸಂತ್ರಸ್ತ ಮಹಿಳೆಗೆ ರಕ್ಷಣೆ
ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡಲು ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಕುಮಾರಸ್ವಾಮಿ ಹಾಗೂ ದೇವೇಗೌಡರು ತಮ್ಮ ಮನೆಗೆ ವಕೀಲರನ್ನು ಕರೆಸಿ ಚರ್ಚೆ ಯಾಕೆ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಹೋದಾಗ ನಾನು ಬೇರೆಯಲ್ಲ, ಪ್ರಜ್ವಲ್ ರೇವಣ್ಣ ಬೇರೆಯಲ್ಲ ಎಂದಿದ್ದಾರೆ. ರಾಜಕೀಯ ಹಾಗು ಕೃತ್ಯಗಳನ್ನು ಒಟ್ಟಿಗೆ ಮಾಡುತ್ತಾರೆ ಎಂದರು.
ಗಮನಿಸಿ: ಮೇ.6ರವರೆಗೆ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಹೆಸರು ಸೇರ್ಪಡೆಗೆ ಅವಕಾಶ