ರಾಯಚೂರು: ಸಂಸದ ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಕ್ಷಣವೇ ವಿಶೇಷ ತನಿಖಾ ದಳ (SIT) ನೊಟೀಸ್ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಆಗ್ರಹಪಡಿಸಿದರು.
ಇಷ್ಟು ಕರಾರುವಕ್ಕಾಗಿ, ಅಂಕಿ ಅಂಶಗಳ ಸಮೇತ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ. ಈ ಸರಕಾರಕ್ಕೆ ಗಂಡಸ್ತನ, ತಾಕತ್ತು ಎನ್ನುವುದು ಇದ್ದರೆ ಈ ಕೂಡಲೇ ಆತನಿಗೆ ತನಿಖಾ ದಳದಿಂದ ಕೂಡಲೇ ನೋಟಿಸ್ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಎನ್ ಡಿಎ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ನಡೆಸುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು; ರಾಹುಲ್ ಗಾಂಧಿ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದರು.
“ದೇಶದ ಮಾಜಿ ಪ್ರಧಾನಮಂತ್ರಿಯ ಮಗನಾ ಇವನು? ಹಾಗಾದರೆ ಇವನ ಬಳಿ ಎಲ್ಲಾ ಮಾಹಿತಿಯೂ ಇದೆ ಎಂದಾಯಿತು. ಈತನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಕೊಟ್ಟಿರಬೇಕು ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರಬೇಕು, ತಪ್ಪದರೆ ಗೃಹ ಸಚಿವರೇ ತಿಳಿಸಿರಬಹುದು. ತನಿಖಾ ದಳಕ್ಕೆ ಜವಾಬ್ದಾರಿ ಎನ್ನುವುದಿದ್ದರೆ ರಾಹುಲ್ ಗಾಂಧಿಗೆ ತಕ್ಷಣವೇ ನೋಟೀಸ್ ಕೊಡಬೇಕು. ಕರೆದು ವಿಚಾರಣೆ ನಡೆಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವುದನ್ನು ರಾಹುಲ್ ಗಾಂಧಿ ಮಾಧ್ಯಮಗಳ ಮುಂದೆಯೂ ಹೇಳಿದ್ದಾರೆ, ಬಹಿರಂಗ ಸಭೆಯಲ್ಲೂ ಹೇಳಿದ್ದಾರೆ. ಕರೆದು ವಿಚಾರಣೆ ಮಾಡಿ. ಸತ್ಯ ಏನೆಂಬುದು ಹೊರಗೆ ಬರಲಿ ಎಂದು ತನಿಖಾ ದಳವನ್ನು ಮಾಜಿ ಮುಖ್ಯಮಂತ್ರಿಗಳು ಒತ್ತಾಯಿಸಿದರು.
ನರೇಂದ್ರ ಮೋದಿ ಅವರು ಬಂದು ಕ್ಷಮೆ ಕೇಳಬೇಕಿತ್ತಂತೆ ಇವನಿಗೆ. ಮೋದಿ ಅವರಿಗೇನು ಕನಸು ಬಿದ್ದಿತ್ತಾ? ಮೊದಲೇ ಮಾಹಿತಿ ಗೊತ್ತಿದ್ದವನು ಇವನ್ಯಾಕೆ ಹೇಳಲಿಲ್ಲ? ಮೊದಲೇ ಪ್ರಧಾನಿಗಳಿಗೆ ಕೊಡಬೇಕಿತ್ತು. ಯಾಕೆ ಕೊಡಲಿಲ್ಲ? ಇವರ ಸಿಎಂ, ಡಿಸಿಎಂ ಯಾಕೆ ಹೇಳಲಿಲ್ಲ? ನಿಮ್ಮ ಬಾಗಲಕೋಟೆಯ ಹೆಚ್.ವೈ.ಮೇಟಿ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಚುನಾವಣೆ ಪ್ರಚಾರ ಮಾಡುತ್ತೀರಲ್ಲಾ.. ಲಜ್ಜೆ ಆಗುವುದಿಲ್ಲವೇ ನಿಮಗೆ? ನಿಮ್ಮ ಬಳಿ ಎಲ್ಲಾ ವಿಷಯ ಇತ್ತು ಅಲ್ಲವೇ? ಏಪ್ರಿಲ್ 21ರವರೆಗೆ ಯಾಕೆ ಕಾದು ಕೂತಿದ್ದಿರಿ? ಮೇ 7ನೇ ತಾರೀಖು ಮತದಾನ ಮುಗಿದ ಮೇಲೆ ಈ ಪ್ರಕರಣ ಎಲ್ಲಿಗೆ ಹೋಗಿ ಮುಟ್ಟುತ್ತೆ? ನಿಮಗೆ ಬೇಕಿರುವುದು 7ನೇ ತಾರೀಕು ನಡೆಯುವ ಮತದಾನ ಮತ್ತು ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು. ಅಷ್ಟೇ ಅಲ್ಲವೇ ಎಂದು ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಟೆಂಟ್ ನಲ್ಲಿ ನೀಲಿಚಿತ್ರ ತೋರಿಸುತ್ತಿದ್ದವನೇ ಪೆನ್ ಡ್ರೈವ್ ಬಿಟ್ಟಿದ್ದಾರೆ: ಹೆಚ್.ಡಿ ಕುಮಾರಸ್ವಾಮಿ ಆರೋಪ