ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ನಿಮ್ಮ ಗಮನಕ್ಕೆ ಯಾವಾಗ ಬಂದಿತ್ತು ಕುಮಾರಸ್ವಾಮಿಯವರೇ ತಿಳಿಸಿ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥರಾದಂತ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕರ್ನಾಟಕದ ಸಂಸ್ಕೃತಿ, ರಾಜಕಾರಣಕ್ಕೆ ಮಸಿ ಬಳಿಯುವಂತಹ ಲೈಂಗಿಕ ಶೋಷಣೆಯ ಘಟನೆ ನಡೆದಿದ್ದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ ಇದಾಗಿದೆ. ಹಾಲಿ ಸಂಸದ ಹಾಗೂ ಎನ್ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ಶೋಷಣೆಯ ಆರೋಪ ಬಂದಿದೆ. ಕೇವಲ ಇವರ ಮೇಲೆ ಮಾತ್ರ ಆರೋಪ ಬಂದಿಲ್ಲ. ಇಡೀ ಕುಟುಂಬದ ಮೇಲೆ ಆರೋಪ ಬಂದಿದ್ದು, ಅವರ ತಂದೆಯ ಮೇಲೆಯೂ ದೂರು ದಾಖಲಾಗಿದೆ ಎಂದರು.
ಸತ್ಯಹರಿಶ್ಚಂದ್ರನ ಮನೆಯವರಂತೆ ಬಿಜೆಪಿಯವರು ಕಳೆದ 10 ವರ್ಷಗಳಿಂದ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು. ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವಂತೆ ಈ ಘಟನೆ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ. ಈ ದೇಶದ ಜನಕ್ಕೆ, ಮಹಿಳೆಯರಿಗೆ ಉತ್ತರ ನೀಡದೆ ತಲೆಮರೆಸಿಕೊಂಡಿದ್ದಾರೆ. ಮೋದಿ, ನಡ್ಡಾ ಅಮಿತ್ ಶಾ ಸೇರಿದಂತೆ ಇತರೇ ನಾಯಕರು ಪಲಾಯನವಾದ ಮಾಡಿದ್ದಾರೆ ಎಂದರು.
ಹೊಳೆನರಸಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ದೇವರಾಜೇಗೌಡ ಅವರು ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಪತ್ರವನ್ನು ಬರೆದು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಡಿ ಮಾಡಿಕೊಂಡರು ಈ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಬೇಡಿ ಏಕೆಂದರೆ ಲೈಂಗಿಕ ಹಗರಣದ ಆರೋಪ ಇವರುಗಳ ಮೇಲಿದೆ ಎಂದು ಗನಮಕ್ಕೆ ತಂದಿದ್ದರು ಎಂದು ಹೇಳಿದರು.
ದೇವರಾಜೇಗೌಡ ಎನ್ನುವ ವ್ಯಕ್ತಿ ಕುಮಾರಸ್ವಾಮಿ ಅವರ ಜೊತೆ ಇದೇ ಲೈಂಗಿಕ ಹಗರಣದ ವಿಡಿಯೋಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವಿಚಾರ ಕುಮಾರಸ್ವಾಮಿ ಅವರ ಮೂಲಕ ದೇವೇಗೌಡರ ಗಮನಕ್ಕೂ ಬಂದಿದೆ. ಬಿಜೆಪಿ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ನಾಯಕರಿಗೆ ಮಾಹಿತಿ ಇದ್ದರೂ ಟಿಕೆಟ್ ನೀಡಿದ್ದು ಏಕೆ ಎಂದು ಪ್ರಶ್ನಿಸಿದರು.
ಇದರಿಂದಾಗಿ ಬೀದಿ, ಬೀದಿಗಳಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಪರಿಸ್ಥಿತಿ ಉದ್ಬವವಾಗಿದೆ. ಇದಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಏಕೆ ಉತ್ತರ ಕೊಡುತ್ತಿಲ್ಲ. ಕಳೆದ 15 ದಿನಗಳ ಹಿಂದೆ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು. ಎಲ್ಲರಿಗೆ ವಿಚಾರ ಗೊತ್ತಿದ್ದರೂ ಏಕೆ ಬಹಿರಂಗ ಮಾಡಲಿಲ್ಲ. ಈಗ ಕುಮಾರಸ್ವಾಮಿ ಅವರು ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇದು ಅವರ ಕುಟುಂಬದ ವಿಚಾರ, ಪಕ್ಷದ ನಾಯಕನ ವಿಚಾರ ಇದಕ್ಕೆ ಉತ್ತರ ನೀಡುವುದು ಸಹ ಅವರ ಜವಾಬ್ದಾರಿಯಾಗಿದೆ ಎಂದರು.
ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ. ಶೋಷಿತ ಹಾಗು ದುರ್ಬಲ ವರ್ಗದ ಹೆಣ್ಣು ಮಕ್ಕಳ ಮಾನ ಹರಾಜಾಗುತ್ತಿದೆ. ಕುಮಾರಸ್ವಾಮಿ ಅವರೇ ನಿಮಗೆ ಉತ್ತರ ಕೊಡುವ ಶಕ್ತಿ ಇಲ್ಲದಿದ್ದರೇ ಈ ಪ್ರಕರಣ ಯಾವಾಗ ಗಮನಕ್ಕೆ ಬಂದಿತು ಎಂದು ತಿಳಿಸಿ. ದೇವರಾಜೇಗೌಡ, ಪ್ರೀತಂ ಗೌಡ ಅವರು ಯಾವಾಗ ಭೇಟಿ ಮಾಡಿದ್ದರು ತಿಳಿಸಿ. ಪ್ರಕರಣದ ಬಗ್ಗೆ ಅವರಿಗೆ ಗೊತ್ತಿದ್ದರೂ ಮುಚ್ಚಿಟ್ಟಿರುವುದು ಅಪರಾಧ. ಸತ್ಯವನ್ನು ಹೇಳಿ ಕುಮಾರಸ್ವಾಮಿ ಅವರೇ? ಎಂದು ಕೇಳಿದರು.
ಲೋಕಸಭಾ ಸ್ಪೀಕರ್ ಅವರು ಕ್ಷುಲ್ಲಕ ಕಾರಣಗಳಿಗಾಗಿ ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಏಕೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಏನಕ್ಕೆ ಪ್ರಜ್ವಲ್ ಅವರನ್ನು ಏಕೆ ಅಮಾನತು ಮಾಡಿಲ್ಲ ಎಂದರು.
ಹೆಣ್ಣು ಮಕ್ಕಳ ಬಗ್ಗೆ ಸಾಕಷ್ಟು ಗೌರವ ಹೊಂದಿರುವ ಬೇಟಿ ಬಚಾವೋ, ಪಡಾವೋ ಎಂದು ಹೇಳುವ ಪ್ರಧಾನಿಗಳು ಈ ಪ್ರಕಣದಲ್ಲಿ ಕಿವುಡುತನ ಬಂದಿದೆ. ಎರಡು ದಿನ ಕರ್ನಾಟಕದಲ್ಲಿ ಇದ್ದರೂ ಸಹ ಏಕೆ ಮಾತನಾಡಿಲ್ಲ. ಪ್ರಧಾನಿಗಳು ಸಹ ಪ್ರಜ್ವಲ್ ಅವರನ್ನು ರಕ್ಷಣೆ ಮಾಡುವ ಇರಾದೆ ಹೊಂದಿದ್ದಾರೆಯೇ? ಮೋದಿ ಅವರು ಯಾವುದೇ ಕಾರಣಕ್ಕೂ ಆರೋಪಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಬಾರದು. ಈ ಹಗರಣ ಹೊರಗೆ ಬಂದ ನಂತರ ಬಿಜೆಪಿ ಮೈತ್ರಿ ಅಭ್ಯರ್ಥಿ ದೇಶ ಬಿಟ್ಟು ಹೋಗಿದ್ದಾರೆ. ಆರೋಪಿಯನ್ನು ರಕ್ಷಿಸುವುದು ಪ್ರಧಾನಿ ಹುದ್ದೆಗೆ ಘನತೆ ತರುವುದಿಲ್ಲ ಎಂದು ತಿಳಿಸಿದರು.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ನಾಯಕರನ್ನು ಹುಡುಕಿ ನೋಟಿಸ್ ನೀಡುತ್ತಾರೆ. ಆದರೆ ಇವರು ತಮ್ಮ ದೋಸ್ತಿ ಪಕ್ಷದ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಆಯೋಗ ಮದ್ಯ ಪ್ರವೇಶ ಮಾಡಿ ಯಾರು, ಯಾರು ಭಾಗಿಯಾಗಿದ್ದಾರೆ ಅವರಿಗೆ ರಕ್ಷಣೆ ನೀಡಬೇಕು ಎಂದರು.
‘ಅಶ್ಲೀಲ ವಿಡೀಯೋ’ ಕೇಸ್: ‘ಪ್ರಜ್ವಲ್ ರೇವಣ್ಣ’ ಕೃತ್ಯ ನನ್ನ ಮನಸ್ಸನ್ನು ದಿಗ್ಭ್ರಮೆಗೊಳಿಸಿದೆ: ನಟ ಚೇತನ್
BREAKING : ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ : ಅಸ್ಸಾಂ ಪೊಲೀಸರಿಂದ ಮೊದಲ ಆರೋಪಿ ಬಂಧನ