ಬೆಂಗಳೂರು : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಇಟಿ ಮರುಪರೀಕ್ಷೆಯನ್ನು ನಡೆಸುವುದಿಲ್ಲ. ಪರೀಕ್ಷೆಯಲ್ಲಿ ಕೇಳಲಾದ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಹೊರತುಪಡಿಸಿ, ಉಳಿದ ಪ್ರಶ್ನೆಗಳನ್ನು ಪರಿಗಣಿಸಿ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುತ್ತದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.
ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಬರೋಬ್ಬರಿ 50 ಪಠ್ಯತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಠೇತರ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯ ಮಾಪನಕ್ಕೆ ಪರಿಗಣಿಸಿ ಅದರ ಫಲಿತಾಂಶ ಆಧರಿಸಿ ಅಂಕ ನೀಡಬೇಕು ಎಂದು ತಿಳಿಸಿದೆ.
ಪಠ್ಯತರ ಪ್ರಶ್ನೆಗಳ ಖಚಿತತೆಗೆ ವಿಷಯವಾರು ರಚಿಸಿದ್ದ ತಜ್ಞರ ಸಮಿತಿಯು ಭೌತಶಾಸ್ತ್ರ-9, ರಸಾಯನ ಶಾಸ್ತ್ರ- 15, ಗಣಿತ-15 ಮತ್ತು ಜೀವಶಾಸ್ತ್ರ ವಿಷಯದಲ್ಲಿ 11 ಪಠ್ಯತರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿಸಿದೆ. ಈ ಪ್ರಶ್ನೆಗಳನ್ನು ಮೌಲ್ಯ ಮಾಪನದಿಂದ ಕೈ ಬಿಡಲಾಗುತ್ತದೆ. ಇದರ ಜೊತೆಗೆ 2 ತಪ್ಪು ಪ್ರಶ್ನೆಗಳಿದ್ದು ಅವುಗಳಿಗೆ ಕೃಪಾಂಕ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.
ಭೌತಶಾಸ್ತ್ರದಲ್ಲಿ 9, ರಸಾಯನಶಾಸ್ತ್ರದಲ್ಲಿ 15, ಗಣಿತದಲ್ಲಿ 15, ಜೀವಶಾಸ್ತ್ರದಲ್ಲಿ 11 ಪ್ರಶ್ನೆಗಳನ್ನು ಪಠ್ಯಕ್ರಮದ ಹೊರತಾಗಿ ಪರೀಕ್ಷೆಯಲ್ಲಿ ಕೇಳಲಾಗಿತ್ತು. ಹೀಗಾಗಿ ಈ ಪ್ರಶ್ನೆಗಳನ್ನು ಪರಿಗಣಿಸುತ್ತಿಲ್ಲ. ಆದರೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎರಡು ತಪ್ಪಾದ ಪ್ರಶ್ನೆಗಳಿಗೆ ಮಾತ್ರ ಅಂಕಗಳನ್ನು ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.