ಬೆಳಗಾವಿ : ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿಗಳು ನಿಲ್ಲುವುದಿಲ್ಲ. ಮುಂದಿನ ವರ್ಷಕ್ಕೆ ಬೇಕಾಗುವ ಹಣವನ್ನು ನಾನು ಈಗಾಗಲೇ ತೆಗೆದಿಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮೃಣಾಳ್ ಹೆಬ್ಬಾಳ್ಕರ್ ಅವರ ಪರವಾಗಿ ಆಯೋಜಿಸಿದ್ದ ಪ್ರಜಾಧ್ವನಿ- ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಮೊದಲು Bharatiya Janata Party (BJP) ಪಕ್ಷದ ನಾಯಕರು ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಅವಮಾನಿಸಿದರು. ಈಗ ಚುನಾವಣೆ ಬಳಿಕ ಗ್ಯಾರಂಟಿಗಳು ನಿಂತೋಗುತ್ತವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿಗಳು ನಿಲ್ಲುವುದಿಲ್ಲ. ಮುಂದಿನ ವರ್ಷಕ್ಕೆ ಬೇಕಾಗುವ ಹಣವನ್ನು ನಾನು ಈಗಾಗಲೇ ತೆಗೆದಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ, ಭರ್ಜರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ ಕೊಡಿ. ಹುಬ್ಬಳ್ಳಿಯಲ್ಲಿ ಸೋತಿದ್ದ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿಯಲ್ಲೂ ಸೋಲಿಸಿ ವಾಪಾಸ್ ಕಳುಹಿಸಿ.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಪುತ್ರನನ್ನು ಲೋಕಸಭೆಯಲ್ಲಿ ಗೆಲ್ಲಿಸಿದರೆ ಜಿಲ್ಲೆಯ ಅಭಿವೃದ್ಧಿ ವೇಗ ಹೆಚ್ಚುತ್ತದೆ ಎಂದರು.
ಮೋದಿ ಅವರು ಬೆಳಗಾವಿಗೆ ಬಂದು ಹಸಿ ಹಸಿ ಸುಳ್ಳು ಹೇಳಿ ಹೋಗಿದ್ದಾರೆ. ಪ್ರತೀ ಬಾರಿ ರಾಜ್ಯಕ್ಕೆ ಬರೋದು, ಸುಳ್ಳು ಹೇಳಿ ಹೋಗೋದೇ ಆಯ್ತು. ನಾವು ಶಿವಾಜಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ಅವರಿಗೆ ಅವಮಾನಿಸಿದ್ದೀವಿ ಎಂದು ಸುಳ್ಳು ಹೇಳಿ ಹೋಗಿದ್ದಾರೆ.
ರಾಣಿ ಚನ್ನಮ್ಮ ಜಯಂತಿ ಆರಂಭಿಸಿದ್ದು ನಮ್ಮ ಸರ್ಕಾರ. ಶಿವಾಜಿ ಮಹಾರಾಜರನ್ನು ಅತ್ಯಂತ ಗೌರವದಿಂದ ಕಾಣುವವರು ನಾವು. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಮಾಡಿದವರು ನಾವು. ಹೀಗಾಗಿ ಈ ಹಸಿ ಸುಳ್ಳುಗಾರ ಮೋದಿ ಮಾತನ್ನು ನಂಬಬೇಡಿ. ನಂಬಿ ಮೋಸ ಹೋಗಬೇಡಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಾಲ್ಕು ವರ್ಷ ಅಧಿಕಾರದಲ್ಲಿದ್ದ BJP Karnataka ಯಾವುದಾದರೂ ಒಂದು ಜನಪರ ಕಾರ್ಯಕ್ರಮ ಜಾರಿ ಮಾಡಿತ್ತಾ? ಅವರಿಗೆ ಬಡಜನರನ್ನು ಕಂಡರೆ ಆಗಲ್ಲ, ಅದೇ ಉದ್ಯಮಿಗಳಿಗೆ, ಧನಿಕರಿಗೆ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಾರೆ, ಅಪ್ಪಿಕೊಳ್ಳುತ್ತಾರೆ ಎಂದರು.