ಬೆಂಗಳೂರು: ಬೆಲೆ ಏರಿಕೆ ತಡೆಯುವುದಾಗಿ ಭಾರತೀಯರನ್ನು ನಂಬಿಸಿ ಅಧಿಕಾರಕ್ಕೆ ಬಂದ ಮೋದಿಯವರೇ ವಿಪರೀತ ಬೆಲೆ ಏರಿಕೆ ಮಾಡಿದ್ದರಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು. ನಾವು ಗ್ಯಾರಂಟಿಗಳ ಮೂಲಕ ಸ್ಪಂದಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕೋಣನಕುಂಟೆ ಕ್ರಾಸ್ ನಲ್ಲಿ ನಡೆದ ಬೃಹತ್ ಪ್ರಜಾಧ್ವನಿ -2 ಜನಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬೆಲೆ ಏರಿಕೆ ಭಾರತೀಯರ ಶತ್ರು. ನಾನು ಪ್ರಧಾನಿಯಾದರೆ ಬೆಲೆ ಏರಿಕೆ ತಡೆಯುವುದಾಗಿ ಇಡಿ ಭಾರತೀಯರನ್ನು ಮೋದಿ ನಂಬಿಸಿದ್ದರು. ಆದರೆ ಇದೇ ಮೋದಿ ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಸೇರಿ ಎಲ್ಲದರ ಬೆಲೆಯನ್ನೂ ಗಗನಕ್ಕೆ ಏರಿಸಿದರು ಎಂದು ಬೆಲೆ ಏರಿಕೆಯ ಪಟ್ಟಿ ನೀಡಿದರು.
ಮೋದಿಯವರ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಮಧ್ಯಮ ವರ್ಗದ ಜನ ಮತ್ತು ದುಡಿಯುವ ವರ್ಗಗಳು ಹಾಗೂ ಬಡ ಜನರ ಬದುಕಿಗೆ ಸ್ಪಂದಿಸುವ ಉದ್ದೇಶದಿಂದ ನಾನು ಐದು ಗ್ಯಾರಂಟಿಗಳನ್ನು ರೂಪಿಸಿ ಐದನ್ನೂ ಜಾರಿ ಮಾಡಿದ್ದೇವೆ. ನಾವು ನುಡಿದಂತೆ ನಡೆದು ನಿಮ್ಮ ಮತಕ್ಕೆ ಗೌರವ ತಂದು ಘನತೆ ಹೆಚ್ಚಿಸಿದ್ದೇವೆ. ಈ ಅರ್ಹತೆಯಿಂದ ನಿಮ್ಮ ಎದುರಿಗೆ ನಿಂತು ಮತ ಕೇಳುತ್ತಿದ್ದೇವೆ ಎಂದರು.
ಬೆಂಗಳೂರಿನ ಕುಡಿಯುವ ನೀರಿಗೆ ಮೋದಿ ಅಡ್ಡಿ
ಬೆಂಗಳೂರಿನ ಕುಡಿಯುವ ನೀರಿನ ಮೇಕೆದಾಟು ಯೋಜನೆಗೆ ಅನುಮತಿ ಏಕೆ ಕೊಡುತ್ತಿಲ್ಲ ಮೋದಿಯವರೇ ಎಂದು ಪ್ರಶ್ನಿಸಿದ ಸಿ.ಎಂ. ಸಿದ್ದರಾಮಯ್ಯ ಅವರು, ನೀವೇ ಮೇಕೆದಾಟು ಯೋಜನೆಗೆ ಅನುಮತಿ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಡಿ.ಕೆ.ಸುರೇಶ್ ರಾಜ್ಯದ ಧ್ವನಿಯಾಗಿ ಹೋರಾಟ ನಡೆಸ್ತಾರೆ
ಮೋದಿಯವರಿಂದ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯವನ್ನು, ನಿಮ್ಮ ತೆರಿಗೆ ಹಣಕ್ಕೆ ಆಗುತ್ತಿರುವ ದ್ರೋಹವನ್ನು ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿ ಪ್ರಶ್ನಿಸಿದವರು ಡಿ.ಕೆ.ಸುರೇಶ್ ಮಾತ್ರ. ಇವರು ಗೆದ್ದರೆ ನಮ್ಮ-ನಿಮ್ಮೆಲ್ಲರ ಧ್ವನಿಯಾಗಿ ಹೋರಾಟ ಮಾಡ್ತಾರೆ: ಇವರಿಗೆ ಆಶೀರ್ವದಿಸಿ ಪಾರ್ಲಿಮೆಂಟಿಗೆ ಕಳುಹಿಸಿ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಕರೆ ನೀಡಿದರು.