ಬೆಂಗಳೂರು: ರಾಜ್ಯದಲ್ಲಿ ನರೇಂದ್ರ ಮೋದಿಯವರ ಅಲೆ ಕಿಂಚಿತ್ತೂ ಇಲ್ಲ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕನಿಷ್ಠ ಪಕ್ಷ 20 ಸ್ಥಾನಗಳನ್ನಾದರೂ ಗೆಲ್ಲಲಿದೆ. 400 ಸ್ಥಾನ ಗೆಲ್ಲುತ್ತೇವೆ ಎಂದು ಬೀಗುತ್ತಿರುವ ಬಿಜೆಪಿ ದೇಶದಲ್ಲಿ 200 ಕ್ಷೇತ್ರಗಳನ್ನೂ ಗೆಲ್ಲುವುದಿಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ತಮ್ಮ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ವಿಜಯಪುರ, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಡೆ ಓಡಾಡಿದ್ದೇನೆ. ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುವುದು ನಮ್ಮ ಕರ್ತವ್ಯ. ಜನರು ಬಿಸಿಲನ್ನೂ ಲೆಕ್ಕಿಸದೆ ಕಾಂಗ್ರೆಸ್ ಪರವಾಗಿ ಸ್ಪಂದಿಸುತ್ತಿದ್ದಾರೆ. ಬೆಳಗಾವಿ, ಬೀದರ್, ಕಲಬುರಗಿ, ಹಾವೇರಿ ಮುಂತಾದ ಕಡೆಗಳಲ್ಲೆಲ್ಲ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಮೋದಿಯವರ 10 ವರ್ಷಗಳ ಆಡಳಿತ ಜನರಿಗೆ ಸಾಕಾಗಿ ಹೋಗಿದೆ’ ಎಂದರು.
ಮೋದಿ ಅಚ್ಛೇ ದಿನ್ ಬಗ್ಗೆ ಮಾತನಾಡಿದರು. ಆದರೆ ಅದು ಯಾವತ್ತೂ ಬರಲಿಲ್ಲ. ರಾಜ್ಯದ ಕಾಂಗ್ರೆಸ್ ಸರಕಾರ ಕೊಡುತ್ತಿರುವ ಐದು ಗ್ಯಾರಂಟಿಗಳು ಮಹಿಳೆಯರ ಮೇಲೆ ಸಕಾರಾತ್ಮಕ ಪ್ರಭಾವ ಬೀರಿವೆ. ಇದು ಮತವಾಗಿ ಪರಿವರ್ತನೆಯಾಗುವುದು ಗ್ಯಾರಂಟಿಯಾಗಿದೆ. ಇನ್ನೊಂದೆಡೆಯಲ್ಲಿ ಬಿಜೆಪಿಯಲ್ಲಿ ಅಂತಃಕಲಹ ನಡೆಯುತ್ತಿದೆ. ಅಲ್ಲಿ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಬಿಜೆಪಿ ಎಲ್ಲ ಕಡೆಗಳಲ್ಲೂ ಒಡೆದ ಮನೆಯಾಗಿದೆ. ಮೋದಿಯವರಂತೂ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ. ಆ ಪಕ್ಷದ ಸಹವಾಸ ಮಾಡಿ ಕುಮಾರಸ್ವಾಮಿ ಕೂಡ ದಾರಿ ತಪ್ಪಿದ್ದು, ಬೇಜವಾಬ್ದಾರಿಯುತ ಹೇಳಿಕೆಗಳನ್ನು ಕೊಡುವ ಚಾಳಿ ಬೆಳೆಸಿಕೊಂಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ನಿರ್ಜೀವವಾಗಿದೆ ಎಂದು ಅವರು ನುಡಿದರು.
ಕಾಂಗ್ರೆಸ್ಸಿನಲ್ಲಿ ಯಾವ ಸಮುದಾಯದವರು ಮುಖ್ಯಮಂತ್ರಿ ಆಗಬೇಕೆನ್ನುವುದು ನಮ್ಮ ಕೈಯಲ್ಲಿಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಸದ್ಯಕ್ಕೆ ಆ ಹುದ್ದೆಯೂ ಖಾಲಿ ಇಲ್ಲ. ಹೀಗಾಗಿ, ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತ ಚರ್ಚೆ ಅಪ್ರಸ್ತುತ. ಅಂತಹ ಸಂದರ್ಭ ಬಂದಾಗ ಅದನ್ನು ಚರ್ಚೆ ಮಾಡೋಣ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಣ, ಅಧಿಕಾರದ ಬಲದಿಂದ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಜನರಿಂದ ತಕ್ಕ ಉತ್ತರ: BY ವಿಜಯೇಂದ್ರ
BREAKING : ಪಾಟ್ನಾದಲ್ಲಿ ಭೀಕರ ರಸ್ತೆ ಅಪಘಾತ : ಜೆಸಿಬಿಗೆ ಆಟೋ ಡಿಕ್ಕಿಯಾಗಿ 7 ಮಂದಿ ಸ್ಥಳದಲ್ಲೇ ಸಾವು