ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಸಿಡಿಲಬ್ಬರಕ್ಕೆ ರಾಜ್ಯದ ವಿವಿಧೆಡೆ ಮತ್ತೆ ಐವರು ಬಲಿಯಾಗಿದ್ದಾರೆ. ಈ ಮೂಲಕ ಕಳೆದ ನಾಲ್ಕು ದಿನಗಳಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗ, ಕೊಪ್ಪಳ, ಧಾರವಾಡ, ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಬೀದರ್, ವಿಜಯಪುರ, ಯಾದಗಿರಿ, ದಕ್ಷಿಣ ಕನ್ನಡ, ಉಡುಪಿ, ವಿಜಯನಗರ, ಬಳ್ಳಾರಿ, ಗದಗ ಸೇರಿ ೧೫ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ತಿಪ್ಪನಟಗಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಂಜುನಾಥ್ (೨೨) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಮಲ್ಕಾಪುರದಲ್ಲಿ ಕುರಿ ಮೇಯಿಸುತ್ತಿದ್ದ ಬಾಲಕ ಶಾಂತಕುಮಾರ ಬಸವರಾಜ (೧೬), ಚಿಕ್ಕಮಗಳೂರು ಜಿಲ್ಲೆಯ ಎನ್ .ಆರ್. ಪುರ ತಾಲೂಕಿನ ಅರಳಿಕೊಪ್ಪದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಶಂಕರ್ (೫೦), ವಿಜಯಪುರದಲ್ಲಿ ಲಕ್ಷ್ಮಣ ಸೋಮಲು ರಾಠೋಡ (೭೨), ಬೀದರ್ ನ ಔರಾದ್ ತಾಲೂಕು ರಾಯಪಳ್ಳಿಯಲ್ಲಿ ರಾಮಲು (೩೬) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.