ಮಾಸ್ಕೋ: ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ, ಚೀನಾ ರಷ್ಯಾಕ್ಕೆ ತನ್ನ ರಕ್ಷಣಾ ಕೈಗಾರಿಕಾ ನೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಸಹಾಯ ಮಾಡುತ್ತಿದೆ, ಮಾಸ್ಕೋ ಈಗ ಸೋವಿಯತ್ ಯುಗದ ನಂತರ ಮಿಲಿಟರಿ ಉತ್ಪಾದನೆಯಲ್ಲಿ ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ವಿಸ್ತರಣೆಯನ್ನು ಕೈಗೊಳ್ಳುತ್ತಿದೆ ಎಂದು ಬೈಡನ್ ಆಡಳಿತದ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ ಎನ್ ವರದಿ ಮಾಡಿದೆ.
ರಷ್ಯಾದೊಳಗೆ ಡ್ರೋನ್ಗಳನ್ನು ಉತ್ಪಾದಿಸಲು ಚೀನಾ ಮತ್ತು ರಷ್ಯಾದ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಚೀನಾದ ಬೆಂಬಲವು ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರಿಸುವ ರಷ್ಯಾದ ಸಾಮರ್ಥ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದೆ, ಆದರೆ ಉಕ್ರೇನ್ ಮಿಲಿಟರಿ ಉಪಕರಣಗಳು ಮತ್ತು ಶಸ್ತ್ರಾಸ್ತ್ರ ಕೊರತೆಯಿಂದ ಬಳಲುತ್ತಿದೆ. ಯುಎಸ್ ಕಾಂಗ್ರೆಸ್ನಲ್ಲಿ ರಿಪಬ್ಲಿಕನ್ನರು ಕೀವ್ಗೆ ಹೊಸ ಅಮೆರಿಕನ್ ಮಿಲಿಟರಿ ನೆರವು ಪ್ಯಾಕೇಜ್ ಕುರಿತ ಮತದಾನವನ್ನು ತಡೆಯುವುದನ್ನು ಮುಂದುವರಿಸಿದ್ದರಿಂದ ಉಕ್ರೇನ್ಗೆ ಸವಾಲು ಉಲ್ಬಣಗೊಂಡಿದೆ.