ನವದೆಹಲಿ: ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಎರಡನೇ ಹಂತಕ್ಕೆ 1,210 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ. ಎರಡನೇ ಹಂತದಲ್ಲಿ ಕೇರಳದ 20 ಲೋಕಸಭಾ ಕ್ಷೇತ್ರಗಳಿಂದ ಗರಿಷ್ಠ 500 ನಾಮಪತ್ರಗಳು, ಕರ್ನಾಟಕದ 14 ಸ್ಥಾನಗಳಿಂದ 491 ನಾಮಪತ್ರಗಳು ಸಲ್ಲಿಕೆಯಾಗಿವೆ.
ತ್ರಿಪುರಾದ ಒಂದು ಕ್ಷೇತ್ರದಿಂದ ಕನಿಷ್ಠ 14 ನಾಮಪತ್ರಗಳು ಸ್ವೀಕೃತವಾಗಿದ್ದರೆ, ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ಗರಿಷ್ಠ 92 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಪ್ರಾಧಿಕಾರ ತಿಳಿಸಿದೆ.
ಎರಡನೇ ಹಂತದಲ್ಲಿ ನಡೆಯಲಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಕ್ಷೇತ್ರಗಳಿಗೆ ಒಟ್ಟು 2,633 ನಾಮಪತ್ರಗಳು ಸಲ್ಲಿಕೆಯಾಗಿವೆ.
2,633 ನಾಮಪತ್ರಗಳ ಪರಿಶೀಲನೆಯ ನಂತರ, 1,428 ನಾಮಪತ್ರಗಳು ಕ್ರಮಬದ್ಧವೆಂದು ಕಂಡುಬಂದಿದೆ.
ಆದರೆ ಕೆಲವು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡ ನಂತರ, 1,210 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.ಚುನಾವಣಾ ಕಣದಿಂದ ಹಿಂದೆ ಸರಿಯಲು ಸೋಮವಾರ ಕೊನೆಯ ದಿನವಾಗಿತ್ತು.
ಮಣಿಪುರ ಲೋಕಸಭಾ ಕ್ಷೇತ್ರದ 15 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಲೋಕಸಭಾ ಕ್ಷೇತ್ರದ 13 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಹೊರ ಮಣಿಪುರ ಕ್ಷೇತ್ರದಿಂದ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.ಎರಡನೇ ಹಂತದಲ್ಲಿ ರಾಹುಲ್ ಗಾಂಧಿ (ಕಾಂಗ್ರೆಸ್), ಅನ್ನಿ ರಾಜಾ (ಎಲ್ಡಿಎಫ್) ಮತ್ತು ಕೆ ಸುರೇಂದ್ರನ್ (ಬಿಜೆಪಿ) ಕೇರಳದ ವಯನಾಡ್ನಿಂದ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ. ತಿರುವನಂತಪುರಂನಿಂದ ಶಶಿ ತರೂರ್ (ಕಾಂಗ್ರೆಸ್), ರಾಜೀವ್ ಚಂದ್ರಶೇಖರ್ (ಬಿಜೆಪಿ) ಮತ್ತು ಪನ್ನಿಯನ್ ರವೀಂದ್ರನ್ (ಎಲ್ಡಿಎಫ್) ಪರಸ್ಪರ ಎದುರಾಳಿಗಳಾಗಿದ್ದಾರೆ.
ರಾಜಸ್ಥಾನದಲ್ಲಿ ನಿರ್ಗಮಿತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೋಟಾದಿಂದ ಸ್ಪರ್ಧಿಸುತ್ತಿದ್ದರೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೋಧಪುರದಿಂದ ಸ್ಪರ್ಧಿಸುತ್ತಿದ್ದಾರೆ. ಅಂತೆಯೇ, ಬಿಜೆಪಿ ರಾಜ್ಯ ಅಧ್ಯಕ್ಷ ಸಿ.ಪಿ.ಜೋಶಿ ಚಿತ್ತೋರ್ಗಢದಿಂದ ಸ್ಪರ್ಧಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ನಡೆಯಲಿದೆ.