“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷದ ಹೊಸತು ಹೊಸತು ತರುತಿದೆ’ ಎಂದು ವರಕವಿ ದ.ರಾ.ಬೇಂದ್ರೆಯವರ ಯುಗಾದಿ ಬಗೆಗಿನ ಸುಂದರ ಗೀತೆಯನ್ನು ರಚಿಸಿದ್ದಾರೆ. ಪ್ರತಿ ಯುಗಾದಿ ಬಂದಾಗ ಈ ಹಾಡು ಮನಸಿನಲಿ ಗುನುಗುತ್ತದೆ. ಇದೀಗ ಮತ್ತೆ ಯುಗಾದಿ ಮನೆಮನೆಗಳಲ್ಲಿ ಬಂದಿದೆ…
ಯುಗಾದಿ ಅಥವಾ ಉಗಾದಿ ಎಂದರೆ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು ಅರ್ಥ. .
ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ.
ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧವಾದ ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ. ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಬೇವು ಬೆಲ್ಲದಂತೆ ನಮ್ಮ ಬಾಳಲ್ಲೂ ಸಹ ನೋವು -ನಲಿವು ಜೊತೆಯಾಗಿ ಜೀವನ ಸೊಗಸಾಗಿ ಇರಲಿ ಎಂಬುದೇ ಇದರ ಆಶಯ.