ಬೆಂಗಳೂರು : ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ-2024ನ್ನು ಘೋಷಿಸಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಇದೇ ಏಪ್ರಿಲ್ 26ರ ಶುಕ್ರವಾರ ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮೇ 7 ರ ಮಂಗಳವಾರ ನಡೆಸುತ್ತಿದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ವಾಣಿಜ್ಯ ಉದ್ದಿಮೆಗಳಲ್ಲಿ, ಕೈಗಾರಿಕಾ ಘಟಕ ಸೇರಿದಂತೆ ಸಣ್ಣ ಮತ್ತು ದೊಡ್ಡ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕ ಹಾಗೂ ಸಿಬ್ಬಂದಿಗಳಿಗೆ ಮತದಾನದ ದಿನದಂದು ವೇತನ ಸಹಿತ ರಜೆಯನ್ನು ನೀಡುವಂತೆ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿಳಿಸಿದೆ.
ಮತ ಚಲಾಯಿಸುವ ಅರ್ಹ ಕಾರ್ಮಿಕರು ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಮಾಲೀಕರು ವೇತನ ಸಹಿತ ರಜೆ ನೀಡಬೇಕು. ಈ ಆದೇಶ ಉಲ್ಲಂಘನೆ ಮಾಡಿದರೆ ಸಂಬಂಧಪಟ್ಟ ಸಂಸ್ಥೆ, ನಿಯೋಜಕರು, ವ್ಯವಸ್ಥಾಪಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಯಾವುದೇ ಅರ್ಹ ಮತದಾರ ಮತದಾನದ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮತದಾನ ದಿನದಂದು ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದ್ದು, ಇದನ್ನು ತಪ್ಪದೆ ಎಲ್ಲರೂ ಪಾಲಿಸಬೇಕು.