ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಶನಿವಾರ ರಾತ್ರಿ ಎಂಟು ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ನಗರದ ಮೇಲೆ ರಾತ್ರೋರಾತ್ರಿ ನಡೆದ ಕ್ಷಿಪಣಿ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಗಾಯಗೊಂಡಿದ್ದಾರೆ ಎಂದು ಖಾರ್ಕಿವ್ ಪ್ರದೇಶದ ಗವರ್ನರ್ ಒಲೆಹ್ ಸಿನಿಹುಬೊವ್ ಹೇಳಿದ್ದಾರೆ. ದಾಳಿಯಲ್ಲಿ ವಸತಿ ಕಟ್ಟಡಗಳು, ಗ್ಯಾಸ್ ಸ್ಟೇಷನ್, ಶಿಶುವಿಹಾರ, ಕೆಫೆ, ಅಂಗಡಿ ಮತ್ತು ಕಾರುಗಳಿಗೆ ಹಾನಿಯಾಗಿದೆ.
ಶನಿವಾರ ಮಧ್ಯಾಹ್ನ, ಖಾರ್ಕಿವ್ನಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಇನ್ನೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಖಾರ್ಕಿವ್ ಮೇಯರ್ ಇಹೋರ್ ತೆರೆಖೋವ್ ತಿಳಿಸಿದ್ದಾರೆ. ದಕ್ಷಿಣ ಒಡೆಸಾ ಪ್ರದೇಶದಲ್ಲಿ ಮತ್ತೊಂದು ಕ್ಷಿಪಣಿ ದಾಳಿಯಲ್ಲಿ ನಾಗರಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅದರ ಗವರ್ನರ್ ಒಲೆಹ್ ಕಿಪರ್ ವರದಿ ಮಾಡಿದ್ದಾರೆ.
ಒಟ್ಟಾರೆಯಾಗಿ, ರಷ್ಯಾ ರಾತ್ರೋರಾತ್ರಿ ಉಕ್ರೇನ್ ಮೇಲೆ 32 ಇರಾನ್ ನಿರ್ಮಿತ ಶಹೀದ್ ಡ್ರೋನ್ಗಳು ಮತ್ತು ಆರು ಕ್ಷಿಪಣಿಗಳನ್ನು ಹಾರಿಸಿದೆ ಎಂದು ವಾಯುಪಡೆಯ ಕಮಾಂಡರ್ ತಿಳಿಸಿದ್ದಾರೆ. ಉಕ್ರೇನ್ ವಾಯು ರಕ್ಷಣಾ ಪಡೆಗಳು ಮೂರು ಕ್ರೂಸ್ ಕ್ಷಿಪಣಿಗಳು ಮತ್ತು 28 ಡ್ರೋನ್ಗಳನ್ನು ಹೊಡೆದುರುಳಿಸಿವೆ ಎಂದು ಲೆಫ್ಟಿನೆಂಟ್ ಜನರಲ್ ಮೈಕೋಲಾ ಒಲೆಶ್ಚುಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ರಷ್ಯಾದ ಹಂತಕರು ಉಕ್ರೇನಿಯನ್ನರನ್ನು ಭಯಭೀತಗೊಳಿಸುವುದನ್ನು ಮುಂದುವರಿಸಿದ್ದಾರೆ ಮತ್ತು ಖಾರ್ಕಿವ್ ಮತ್ತು ಇತರ ಶಾಂತಿಯುತ ನಗರಗಳ ಮೇಲೆ ದಾಳಿ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು.