ಕೋಲಾರ : ಮೊದಲಿಗೆ ಗ್ಯಾರಂಟಿಗಳ ಜಾರಿ ಸಾಧ್ಯವೇ ಇಲ್ಲ ಎನ್ನುವ ಸುಳ್ಳನ್ನು ಬಿಜೆಪಿ ಹುಟ್ಟಿಸಿತು. ಗ್ಯಾರಂಟಿಗಳು ಜಾರಿಯಾದ ಬಳಿಕ ಗ್ಯಾರಂಟಿಗಳು ನಿಂತು ಹೋಗುತ್ತವೆ ಎನ್ನುವ ಹೊಸ ಸುಳ್ಳು ಸೃಷ್ಟಿಸಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿಗಳು ನಿಲ್ಲುವುದಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಐದು ವರ್ಷ ವಾರಂಟಿ ಇದೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರದಲ್ಲಿ ಇಂದು ಆಯೋಜಿಸಿದ್ದ ಬೃಹತ್ ರೋಡ್ ಶೋ ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ಅಭ್ಯರ್ಥಿ ಗೌತಮ್ ಸಜ್ಜನರು. ಸಾಮಾನ್ಯ ಕಾರ್ಯಕರ್ತರಾಗಿ ತಳಮಟ್ಟದಿಂದ ಬೆಳೆದು ಈಗ ಈ ಹಂತಕ್ಕೆ ಬಂದಿದ್ದಾರೆ. ಇವರು ಬಹುಮತದಿಂದ ಗೆಲ್ಲುತ್ತಾರೆ ಎಂಬ ಪೂರ್ಣ ವಿಶ್ವಾಸವಿದೆ. ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಗೌತಮ್ ಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇರಲಿ ಎಂದರು.
ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಗ್ಯಾಸ್ ಸಿಲಿಂಡರ್, ರಸಗೊಬ್ಬರ, ಅಡುಗೆ ಎಣ್ಣೆ, ಬೇಳೆ-ಕಾಳು, ತರಕಾರಿ ಸೇರಿ ಪ್ರತಿಯೊಂದರ ಬೆಲೆಯನ್ನು ವಿಪರೀತ ಏರಿಸಿತ್ತು. ಇದರಿಂದ ನಾಡಿನ ಪ್ರತೀ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಸಂಕಷ್ಟಕ್ಕೆ ಸ್ಪಂದಿಸಿ ಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ಐದು ಗ್ಯಾರಂಟಿ ಭರವಸೆಗಳನ್ನು ಘೋಷಿಸಿದೆವು. ಅಧಿಕಾರಕ್ಕೆ ಬಂದು ಐದಕ್ಕೆ ಐದನ್ನೂ ಜಾರಿ ಮಾಡಿದೆವು ಎಂದು ತಿಳಿಸಿದರು.
ಸೋಲುವ ಭೀತಿಯಿಂದ ಬಿಜೆಪಿ ಸೃಷ್ಟಿಸುವ ಸುಳ್ಳುಗಳಿಗೆ ಸೊಪ್ಪಾಕಬೇಡಿ. ಬಿಜೆಪಿ ಸುಳ್ಳಿನ ಕಾರ್ಖಾನೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಮತಕ್ಕೆ ಘನತೆ ತಂದಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಿಸಿ ನಿಮ್ಮ ಮತಕ್ಕೆ ಮೌಲ್ಯ ತಂದು ಕೊಡುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದರು.