ನವದೆಹಲಿ: ಲೋಕಸಭಾ ಚುನಾವಣೆ ಮುಗಿಯುವವರೆಗೂ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದಿಂದ ಏನನ್ನೂ ವಸೂಲಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಐಟಿ ಇಲಾಖೆಯ ಕಾರ್ಯಕಲಾಪಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ಉನ್ನತ ನ್ಯಾಯಪೀಠ ವಿಚಾರಣೆ ನಡೆಸಿತು. 1,823 ಕೋಟಿ ರೂ.ಗಳ ದಂಡದ ಜೊತೆಗೆ ಇನ್ನೂ ಎರಡು ನೋಟಿಸ್ಗಳನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ಹೇಳಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ನಾನು ಈ ವಿಷಯದಲ್ಲಿ ಹೇಳಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿದೆ ಮತ್ತು ಚುನಾವಣೆಗಳು ನಡೆಯುತ್ತಿರುವುದರಿಂದ, ನಾವು ಪಕ್ಷದ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಲು ಹೋಗುವುದಿಲ್ಲ” ಎಂದು ಅವರು ಹೇಳಿದರು.