ಬೆಂಗಳೂರು: ನಾನು ಏಪ್ರಿಲ್ 3ರಂದು ಮಂಡ್ಯ ಜಿಲ್ಲೆಗೆ ಬರುತ್ತೇನೆ. ಅಂದು ಎಲ್ಲರ ಸಭೆಯನ್ನು ನಡೆಸುತ್ತೇನೆ. ಅಂದಿನ ಬೆಂಬಲಿಗರ ಸಭೆಯಲ್ಲೇ ನನ್ನ ಮುಂದಿನ ನಿರ್ಧಾರ ಪ್ರಕಟಿಸೋದಾಗಿ ಸಂಸದೆ ಸುಮಲತಾ ಅಂಬರೀಶ್ ಅವರು ಘೋಷಣೆ ಮಾಡಿದರು.
ಇಂದು ಸುಮಲತಾ ಅಂಬರೀಶ್ ಅವರ ಜೆಪಿ ನಗರದ ನಿವಾಸದ ಬಳಿಯಲ್ಲಿ ಸುಮಲತಾ ಅಂಬರೀಶ್ ಅವರ ಬೆಂಬಲಿಗ ಹನೆಕೆರೆ ಶಶಿ ಎಂಬುವರು ಮಾತನಾಡಿ ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದರು. ನಾವು ಅಂದು ಬೆಂಬಲ ನೀಡಿದ್ದೇವೆ. ಮುಂದೆಯೂ ಬೆಂಬಲ ನೀಡುತ್ತೇವೆ ಎಂಬುದಾಗಿ ಘೋಷಣೆ ಮಾಡಿದರು.
ಈ ಬಳಿಕ ಮಾತನಾಡಿದಂತ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅವರು, ಕರ್ನಾಟಕದಲ್ಲಿ ಎಲ್ಲೇ ಹೋದ್ರೂ ಅಂಬರೀಶ್ ಅಣ್ಣನ ಮಗ ಅಂತ ಗುರುತು ಹಿಡಿಯುತ್ತಾರೆ. ಜನಾಭಿಪ್ರಾಯವಿಲ್ಲದೇ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಳೆದ ಬಾರಿ ಚುನಾವಣೆ ಇರಬಹುದು, ಈ ಬಾರಿಯ ಚುನಾವಣೆಯಲ್ಲೂ ಹಾಗೆ. ಮಂಡ್ಯ ಜಿಲ್ಲೆಯ ನಮ್ಮ ಕುಟುಂಬವಿದ್ದಂತೆ ಎಂದರು.
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಮಂಡ್ಯ ಜಿಲ್ಲೆಯ ಅಷ್ಟು ದೂರದಿಂದ ಬಂದಿದ್ದೀರಿ. ಎಲ್ಲಾ ನನ್ನ ಅಂಬರೀಶ್ ಅಭಿಮಾನಿಗಳಿಗೆ ಕೃತಜ್ಞತೆಗಳು. ಧನ್ಯವಾದಗಳನ್ನು ಸಲ್ಲಿಸಿದರು. ನನ್ನ ರಾಜಕೀಯ ಆರಂಭವಾಗಿರೋದೇ ಮಂಡ್ಯದ ನಿಮ್ಮೆಲ್ಲರ ಪ್ರೀತಿಯಿಂದಾಗಿದೆ ಎಂದರು.
ಇಂದು ಅಂಬರೀಶ್ ಜೊತೆಗೆ ಇದ್ದಂತ ಬೆಂಬಲಿಗರು ಇಲ್ಲಿಗೆ ಬಂದು ನನಗೆ ಬೆಂಬಲಿಸಿದ್ದಾರೆ. ಐದು ವರ್ಷಗಳ ಹಿಂದೆಯೂ ಇದೇ ಶಕ್ತಿ ನನ್ನೊಟ್ಟಿಗೆ ಇತ್ತು. ದೊಡ್ಡ ನಾಯಕರು ಯಾರೂ ನನ್ನ ಜೊತೆಗೆ ಕಾಣಿಸಿಕೊಳ್ಳಲಿಲ್ಲ. ಇಲ್ಲಿ ಯಾರೆಲ್ಲ ಇದ್ದಾರೋ ಅವರೇ ನನ್ನೊಟ್ಟಿಗೆ ಇದ್ದವರು ಎಂದರು.
ಸ್ವಾರ್ಥವನ್ನು ನೋಡಿಕೊಂಡು ನನ್ನ ಹೆಜ್ಜೆಯನ್ನು ನಾನು ಹಾಕಬಹುದಾಗಿತ್ತು. ರಾಜಕೀಯದಲ್ಲಿ ನನ್ನನ್ನು ನಾನು ಹೇಗೆ ಬೆಳೆಸಿಕೊಳ್ಳಬೇಕು ಎಂಬ ಯೋಚನೆ ಇದ್ದರೇ ನನ್ನ ನಡೆಯೇ ಬೇರೆಯಾಗುತ್ತಿತ್ತು. ನಾನು ಮೊದಲಿನಿಂದ ಏನು ಹೇಳಿಕೊಂಡು ಬಂದಿದ್ದೆನೋ ಅದೇ ಮಾತನ್ನು ಉಳಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ನನ್ನ ಚುನಾವಣೆ ಸಂದರ್ಭದಿಂದ ಇವತ್ತಿನವರೆಗೆ ಏನೇನು ಮಾತಾಡಿದ್ದೆನೋ ನುಡಿದಂತೆ ನಡೆದುಕೊಂಡು ಬಂದಿದ್ದೇನೆ. ನಾನು ಎಲ್ಲೂ ತಪ್ಪು ಹೆಜ್ಜೆ ಹಾಕಿಲ್ಲ. ಮಂಡ್ಯಕ್ಕೆ ನಾನು ಏನೆಲ್ಲ ಸೇವೆ ಮಾಡಬೇಕೋ ಅದನ್ನು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮಾಡಿದ್ದೇನೆ ಎಂಬುದಾಗಿ ಭಾವುಕರಾಗಿ ನುಡಿದರು.
ಎಲ್ಲಾ ಅವಕಾಶಗಳನ್ನು ಬಿಟ್ಟು, ನೀವೇ ಹೇಳಿ ಇವತ್ತಿನ ದಿನಕ್ಕೆ ಯಾರಾದರೂ ರಾಜಕಾರಣ ಮಂಡ್ಯ ಕೊಡಲ್ಲ, ಬೇರೆ ಕಡೆ ನಿಂತ್ಕೊಳ್ಳಿ ಅಂದ್ರೆ ಯಾರಾದ್ರೂ ಅವಕಾಶ ಬಿಡ್ತಾರಾ? ನಾನ್ಯಾಕೆ ಬೇಡೆ ಅಂದೆ ಅದು ನನ್ನ ಇದ್ರೂ, ಗೆದ್ರೂ, ಸೋತ್ರು ಅಂದು ಮಂಡ್ಯದಲ್ಲೇ ಎಂಬುದಾಗಿ ನಿರ್ಧಾರ ಕೈಗೊಂಡಿದ್ದೇನೆ. ಮಂಡ್ಯ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ. ಮಂಡ್ಯ ಅಂದ್ರೆ ಅದೊಂದು ಭಾವನೆ. ಪ್ರೀತಿಯಾಗಿದೆ ಎಂಬುದಾಗಿ ಹೇಳಿದರು.
ನನಗೆ ಸ್ವಾರ್ಥ ಇದೆ ಅಂದ್ರೆ ಅದು ಮಂಡ್ಯನೇ ಬೇಕು. ಅದು ಬಿಟ್ಟು ಬೇರೆ ಬೇಡ. ಇಂದು, ಮುಂದು, ಏನೇ ಆದ್ರೂ ಅದೇ ಬೇಕು. ಆದ್ರೇ ಇವತ್ತು ಬದಲಾದ ರಾಜಕೀಯದಲ್ಲಿ ಚುನಾವಣೆ ಬಂದಿದೆ. ನಾನು ಅಂದು ಯಾವೆಲ್ಲಾ ಸವಾಲುಗಳನ್ನು ಎದುರಿಸಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ. ನಿಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಯಾವುದೇ ನಿರ್ಧಾರ ಸುಮಲತಾ ಅಂಬರೀಶ್ ತಗೊಳ್ಳೋದಿಲ್ಲ ಎಂದರು.
ನಾನು ಏನೇ ನಿರ್ಧಾರ ಕೈಗೊಂಡರೂ, ನಿಮ್ಮನ್ನು ನೋಯಿಸುವಂತ ನಿರ್ಧಾರ ತೆಗೆದುಕೊಳ್ಳೋದಿಲ್ಲ. ನನ್ನ ನಂಬಿಕೊಂಡು ಲಕ್ಷಾಂತರ ಜನರಿದ್ದಾರೆ. ನನ್ನ ನಿರ್ಧಾರ ಇನ್ನೂ ಕೆಲವೇ ದಿನಗಳಲ್ಲಿ ಮಂಡ್ಯದಲ್ಲೇ ಸಭೆ ಕರೆದು, ನಿಮ್ಮೆಲ್ಲರ ಸಮ್ಮುಖದಲ್ಲೇ ಸ್ಪಷ್ಟನೆ ಕೊಡ್ತೀನಿ. ಒಂದು ಎರಡು ದಿನ ಕಾಲಾವಕಾಶ ಕೊಡಿ ಎಂಬುದಾಗಿ ಕೋರಿದರು.
ಮಂಡ್ಯ ಜಿಲ್ಲೆಗೆ ಏಪ್ರಿಲ್ 3ನೇ ತಾರೀಕು ಬರುತ್ತೇನೆ. ಅಲ್ಲಿ ಸಭೆ ನಡೆಸುತ್ತೇನೆ. ಅಂದೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸವೇ ನನಗೆ ಆಶೀರ್ವಾದ. ನಿಮ್ಮೆಲ್ಲರ ಆಶೀರ್ವಾದ ಎಂದೆಂದಿಗೂ ನನಗೆ ಇರಲಿ ಎಂದರು.
ಲೋಕಸಭಾ ಚುನಾವಣೆ: ‘ರಾಜನಾಥ್ ಸಿಂಗ್’ ಅಧ್ಯಕ್ಷತೆಯಲ್ಲಿ ‘ಬಿಜೆಪಿ ಪ್ರಣಾಳಿಕೆ ಸಮಿತಿ’ ರಚನೆ
BREAKING : ಡಿಸಿಎಂ ಡಿಕೆ ಶಿವಕುಮಾರ್ ಗೆ ಮತ್ತೊಂದು ಸಂಕಷ್ಟ : ‘IT’ ಇಲಾಖೆಯಿಂದ ನೋಟಿಸ್ ಜಾರಿ