ಮಂಡ್ಯ: ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಗೆ ನೀಡಿರುವ ಕೊಡುಗೆಯಾದರು ಏನು? ಎಂದು ಶಾಸಕ ಕೆ.ಎಂ.ಉದಯ್ ಪ್ರಶ್ನಿಸಿದರು.
ಮದ್ದೂರು ತಾಲೂಕಿನ ಕದಲೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಜನತೆಯ ಆಶೀರ್ವಾದದಿಂದ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು ಆದರೆ, ಜಿಲ್ಲೆಗೆ ಅವರು ಯಾವುದೇ ಶಾಶ್ವತ ಯೋಜನೆಗಳನ್ನು ನೀಡಿಲ್ಲ ಎಂದು ಕಿಡಿಕಾರಿದರು.
ಕಳೆದ ಲೋಕಸಭಾ ಚುನಾವಣೆ ವೇಳೆ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ರೂಪಾಯಿ ಬಜೆಟ್ ಮಂಡನೆ ಮಾಡಿದ್ದರು. ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತರು ಎಂಬ ಕಾರಣಕ್ಕೆ 8 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡದೆ ಜಿಲ್ಲೆಯ ಜನತೆಗೆ ದ್ರೋಹ ಬಗೆದು ಪಲಾಯನ ಮಾಡಿದ ಕುಮಾರಸ್ವಾಮಿ ಅವರು 5 ವರ್ಷಗಳ ನಂತರ ಈಗ ನಾನೇ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂದು ಕಣಕ್ಕಿಳಿಯಲು ಸಿದ್ದರಾಗಿದ್ದಿರಿ. ಯಾವ ಮುಖ ಇಟ್ಟುಕೊಂಡು ಜನತೆಯ ಬಳಿ ಮತ ಕೇಳಲು ಬರುತ್ತಿದ್ದಿರಿ ಎಂದು ಕಿಡಿಕಾರಿದರು.
ಪ್ರತಿ ಬಾರಿಯೂ ಜಿಲ್ಲೆಯ ಜನತೆಗೆ ಮಂಕು ಬೂದಿ ಎರಚಲು ಆಗಲ್ಲ. ಜಿಲ್ಲೆಯ ಜನತೆ ಅಭಿವೃದ್ಧಿಯತ್ತ ಮುಖ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ 6 ಸ್ಥಾನಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಈ ಬಾರಿ ಕುಮಾರಸ್ವಾಮಿಯವರ ಆಟ ಜಿಲ್ಲೆಯಲ್ಲಿ ನಡೆಯಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುರವರು ಸಮಾಜ ಮುಖಿ ವ್ಯಕ್ತಿತ್ವ ಹಾಗೂ ಸೇವಾ ಮನೋಭಾವ ಉಳ್ಳವರಾಗಿದ್ದು, ಅವರನ್ನು ಗೆಲ್ಲಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುತ್ತದೆ ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಅವರ ಗೆಲುವು ಶತಸಿದ್ಧ ಎಂದು ಭವಿಷ್ಯ ನುಡಿದರು.
ಜಿಲ್ಲೆಗೆ ಶಾಶ್ವತ ಕೊಡುಗೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾವುದೇ ಸರ್ಕಾರ ಕೊಡದ ಕೊಡುಗೆಗಳನ್ನು ನಮ್ಮ ಸರ್ಕಾರ ಜಿಲ್ಲೆಗೆ ನೀಡಿದೆ. ಮೊದಲ ಕ್ಯಾಬಿನೆಟ್ ಸಭೆಯಲ್ಲೆ ಮೈಷುಗರ್ ಆರಂಭಕ್ಕೆ 50 ಕೋಟಿ ನೀಡಿದೆ. ಹೊಸ ಕಾರ್ಖಾನೆ ನಿರ್ಮಾಣಕ್ಕೆ 500 ಕೋಟಿ ನೀಡಲು ಸಿದ್ಧವಿದೆ. ವಿ.ಸಿ ಫಾರಂ ಅನ್ನು ವಿಶ್ವ ವಿದ್ಯಾನಿಲಯವಾಗಿ ಮೇಲ್ದರ್ಜೆ ಮಾಡಲಾಗುತ್ತಿದೆ. ನಾಲಾ ಆಧುನೀಕರಣಕ್ಕೆ 800 ಕೋಟಿ ಕೊಟ್ಟಿದೆ. ಚುನಾವಣೆ ನಂತರ ಮತ್ತಷ್ಟು ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ನಮ್ಮ ಗ್ಯಾರೆಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದೇವೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡ್ತೇವೆ. ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ನನ್ನ ಕ್ಷೇತ್ರದ ಜನತೆ ನಿರೀಕ್ಷೆಗೂ ಮೀರಿ ಬಹುಮತ ನೀಡುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಹಿಂದಿನಿಂದಲೂ ಮಂಡ್ಯ ಜನಕ್ಕೆ ಅನ್ಯಾಯ ಆಗಿದೆ. ಜೆಡಿಎಸ್ಗೆ ಬೆಂಬಲ ಕೊಟ್ಟಿದ್ರು, ಕಾಂಗ್ರೆಸ್ ಪಕ್ಷವನ್ನ ಸಂಪೂರ್ಣವಾಗಿ ಸೋಲಿಸಿದ್ರು. ಜೆಡಿಎಸ್ ಅವರು ಗೆದ್ರು ಮುಖ್ಯಮಂತ್ರಿಯಾದ್ರು, ಮೂರ್ನಾಲ್ಕು ಜನ ಮಂತ್ರಿಗಳು ಕೂಡ ಆದ್ರು. ಯಾವ ಶಾಸಕ, ಮಂತ್ರಿಯಾದರು ಏನಾದ್ರು ಕೆಲಸ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಯಾರು? ಮಂಡ್ಯ ಜಿಲ್ಲೆಯ ಜನರು ಘಟಾನುಘಟಿ ನಾಯಕರನ್ನೇ ಚುನಾವಣೆಗಳಲ್ಲಿ ಸೋಲಿಸಿದ್ದಾರೆ. ಜಿ.ಮಾದೇಗೌಡ, ರೆಬಲ್ ಸ್ಟಾರ್ ಅಂಬರೀಶ್ ಅವರಂತ ನಾಯಕರೇ ಇಲ್ಲಿ ಸೋತಿದ್ದಾರೆ. ಇನ್ನು ಕುಮಾರಸ್ವಾಮಿ ಅವರು ಯಾವ ಲೆಕ್ಕ. ಕುಮಾರಸ್ವಾಮಿ ಅವರು ಬೇರೆ ಜಿಲ್ಲೆಯಿಂದ ಬಂದು ಇಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಜಿಲ್ಲೆಯ ಜನ ಪ್ರಜ್ಞಾವಂತರಾಗಿದ್ದು ಜಿಲ್ಲೆಯ ನಾಯಕತ್ವವನ್ನು ಸ್ಥಳಿಯರಿಗೆ ನೀಡುತ್ತಾರೆ ಹೊರತು ಹೊರಗಿನವರಿಗಲ್ಲ ಎಂದರು.
ವರದಿ : ಗಿರೀಶ್ ರಾಜ್, ಮಂಡ್ಯ
ಲೋಕಸಭಾ ಚುನಾವಣೆ: ನಾಳೆಯಿಂದ ಬೆಂಗಳೂರಿನ ಈ ಸ್ಥಳಗಳಲ್ಲಿ ‘ನಾಮಪತ್ರ’ ಸ್ವೀಕಾರ
ಕರ್ನಾಟಕದಲ್ಲಿ ಭಯದಿಂದ ಬಿಜೆಪಿ-ಜೆಡಿಎಸ್ ಒಂದಾಗಿದೆ, ಇವರನ್ನು ಜನತೆ ಸೋಲಿಸಬೇಕು- ಸಿಎಂ ಸಿದ್ದರಾಮಯ್ಯ ಕರೆ