ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ ಡಿಜಿಟಲ್ ಬಂಧನದ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಘಟನೆ ಸಂಬಂಧ ಇಬ್ಬರು ನ್ಯಾಯಾಧೀಶರ ನಿರ್ದೇಶನದ ಮೇರೆಗೆ ಹೈಕೋರ್ಟ್ ಭದ್ರತೆ ಪೊಲೀಸ್ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಎಸ್ ಜಿ ಪಂಡಿತ್ ಹಾಗೂ ಪ್ರದೀಪ್ ಸಿಂಗ್ ಹೆರೂರು ಅವರಿಗೆ ಸೈಬರ್ ಖದೀಮರು ಕರೆ ಮಾಡಿ ನಿಮ್ಮ ನಂಬರ್ನಿಂದ ಅಕ್ಷೇಪಾರ್ಹ ಸಂದೇಶ ಹಾಗೂ ಜಾಹೀರಾತು ಬರುತ್ತಿದೆ. ಮಹಾರಾಷ್ಟ್ರದ ಮುಂಬೈನ ಅಂದೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಮ್ಮನ್ನ ಬಂಧನ ಮಾಡುತ್ತೇವೆ. ಒಂದು ವೇಳೇ ನೀವು ಹಣ ನೀಡಿ, ಯಾವುದೇ ಪ್ರಕರಣಗಳು ದಾಖಲು ಆಗುವುದಿಲ್ಲ ಅಂತ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.