ಬೆಂಗಳೂರು : ಕೇಂದ್ರ ಸರ್ಕಾರ ‘ಮೇಕೆದಾಟು ಯೋಜನೆ’ಗೆ ಅನುಮತಿ ನೀಡಿದರೆ ತಕ್ಷಣವೇ ಅಣೆಕಟ್ಟು ಕೆಲಸ ಆರಂಭ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ನಮ್ಮ ಮೇಲೆ ಮೊಕದ್ದಮೆ ದಾಖಲಿಸಿದವರು ನೀವೇ, ಕಾವೇರಿ ನೀರು ಹಂಚಿಕೆಯಲ್ಲಿ ನಾಡಿಗೆ ಅನ್ಯಾಯ ಆಗುತ್ತಿದ್ದಾಗ ಹಲವು ಬಾರಿ ಮನವಿ ಮಾಡಿದರೂ ಮಧ್ಯಪ್ರವೇಶಿಸದೆ ಕನ್ನಡಿಗರನ್ನು ಸಂಕಷ್ಟಕ್ಕೆ ತಳ್ಳಿದವರು ನಿಮ್ಮದೇ ಪ್ರಧಾನಿಗಳು,
ನಿಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಾರೆ, ಮೇಕೆದಾಟು ಯೋಜನೆ ವಿರುದ್ಧ ಉಪವಾಸ ಸತ್ಯಾಗ್ರಹ ಕೂರುತ್ತಾರೆ ಎಂದು ಕಿಡಿಕಾರಿದ್ದಾರೆ.
ಮೇಕೆದಾಟು ಯೋಜನೆಯ ಜಾರಿಗೆ ನಾವು ಎಂ.ಕೆ ಸ್ಟಾಲಿನ್ ಅವರ ಅನುಮತಿಗಾಗಿ ಕಾದು ಕುಳಿತಿಲ್ಲ, ನಮಗೆ ಅನುಮತಿ ಬೇಕಿರುವುದು ಕೇಂದ್ರ ಸರ್ಕಾರದ್ದು. ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ ನಾಳೆಯಿಂದಲೇ ಅಣೆಕಟ್ಟು ಕೆಲಸ ಆರಂಭ ಮಾಡಲು ನಾವು ತಯಾರಿದ್ದೇವೆ.. ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಯ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.