ಬೆಂಗಳೂರು: ಚುನಾವಣೆ ನಡೆಸುವುದು ಹೇಗೆ ಎನ್ನುವುದು ನನಗೂ ಗೊತ್ತಿದೆ ಮಿಸ್ಟರ್ ಡಿ.ಕೆ.ಶಿವಕುಮಾರ್. 2002ರ ಚುನಾವಣೆಯನ್ನು ನಿಮಗೆ ನೆನಪು ಮಾಡಿಕೊಡುತ್ತೇನೆ. ಮೈಸೂರು, ಶಿಡ್ಲಘಟ್ಟ, ದೇವನಹಳ್ಳಿ ಕಡೆಯಿಂದ ನೀವು ಜನರನ್ನು ಕರೆದುಕೊಂಡು ಬಂದು ಕಳ್ಳ ವೋಟು ಹಾಕಿಸಿದ್ದು ಮರೆತಿದ್ದೀರಾ? ಕಳ್ಳ ಮತ ಹಾಕಿಸಲು ಕರೆದುಕೊಂಡು ಬಂದಾಗ ರಾಜರಾಜೇಶ್ವರಿ ನಗರದ ಹೆಬ್ಬಾಗಿಲಲ್ಲಿ ನಾನು ನಿಮ್ಮವರನ್ನು ಚಡ್ಡಿಯಲ್ಲಿ ಕೂರಿಸಿದ್ದನ್ನು ಮರೆಯಬೇಡಿ. ನನಗೆ ಚುನಾವಣೆ ಮಾಡುವುದು ಬರುವುದಿಲ್ಲ ಎಂದುಕೊಳ್ಳಬೇಡಿ. ಫೀಲ್ಡಿಗೆ ಇಳಿದರೆ ನಿಮಗಿಂತ ಚೆನ್ನಾಗಿ ಚುನಾವಣೆ ಮಾಡಬಲ್ಲೆ. ಆಗ ನೀವು ಅಧಿಕಾರದಲ್ಲಿ ಇದ್ದಿರಿ. ದೇವೇಗೌಡರನ್ನು ಸೋಲಿಸಲು ಪ್ತಯತ್ನ ಮಾಡಿದಿರಿ. ಆಸ್ಪತ್ರೆಯಿಂದ ನಾನು ವಾಪಸ್ ಬರ್ತಿನಿ, ಅದುವರೆಗೂ ನಿಮ್ಮ ಆಟ ನಡೆಯಲಿ ನೋಡೋಣ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೇರವಾಗಿಯೇ ಟಾಂಗ್ ಕೊಟ್ಟರು.
ನಿಮಗೆ ನಾಚಿಕೆ ಆಗಬೇಕು. ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ದಿನವೂ ಹೇಳಿದ್ದೇ ಹೇಳಿದ್ದು. ಮಿಸ್ಟರ್ ಸಿದ್ದರಾಮಯ್ಯ.. ನಿಮ್ಮ ಎರಡು ಸಾವಿರ ರೂಪಾಯಿ ಸಾಮಾನ್ಯ ಜನರ ಜೀವ ಉಳಿಸುತ್ತಿದೆ ಎಂದಾದರೆ ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಕ್ಕರ್ʼಗಳನ್ನು ಯಾಕೆ ಹಂಚಿಕೆ ಮಾಡುತ್ತಿದ್ದೀರಿ? ನಿಮ್ಮ ಪಕ್ಷಕ್ಕೆ, ನಿಮಗೆ ನಾಚಿಕೆ ಎನ್ನುವುದು ಏನಾದರೂ ಇದೆಯಾ? ಎಂದು ಮಾಜಿ ಮುಖ್ಯಮಂತ್ರಿಗಳು ತೀವ್ರ ಪ್ರಹಾರ ನಡೆಸಿದರು.
‘ಕಾಂಗ್ರೆಸ್ ಅಭ್ಯರ್ಥಿ’ಯಿಂದ ಚುನಾವಣಾ ಅಕ್ರಮ: ‘ಕುಕ್ಕರ್, ಹಣ ಹಂಚಿಕೆ’ ದಾಖಲೆ ಬಿಡುಗಡೆ ಮಾಡಿದ ‘HDK’