ಬೆಂಗಳೂರು: ಬಹುದಿನಗಳ ಬೇಡಿಕೆಯಂತೆ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಹುದ್ದೆ ತುಂಬಲು ಸರ್ಕಾರ ಮುಂದಾಗಿದ್ದು ಅರ್ಹ ಅಭ್ಯರ್ಥಿಗಳ ನೇಮಕಾತಿ ಮಾಡಲು ಕೆಪಿಎಸ್ ಸಿ ಯಿಂದ ಅಧಿಸೂಚನೆ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀ್ಟ್ ಮಾಡಿದ್ದಾರೆ.
ನಾವು ಅಧಿಕಾರ ವಹಿಸಿಕೊಂಡಾಗ ನೂತನ ನೇಮಕಾತಿಗಳಿಗಾಗಿ ನಮ್ಮ ಇಲಾಖೆಯಲ್ಲಿದ್ದ ಹಲವಾರು ನಿರ್ಬಂಧನೆ ಹಾಗೂ ಅಡೆತಡೆಗಳನ್ನು ಈಗ ಸಂಪೂರ್ಣವಾಗಿ ನಿವಾರಿಸಿ ಎಲ್ಲಾ ನೂತನ ನೇಮಕಾತಿಗಳಿಗೆ ದಾರಿ ಮಾಡಿಕೊಡಲಾಗಿದೆ. ಅಗತ್ಯವಿದ್ದ ಸಿಬ್ಬಂದಿ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ ಕ್ಯಾಬಿನೆಟ್ ಅನುಮೋದನೆ ಪಡೆದು, ನೂತನ ನೇಮಕಾತಿಗಳನ್ನು ಶೀಘ್ರವಾಗಿ ನಡೆಸುವಂತೆ KPSCಗೆ ಸೂಚನೆ ನೀಡಲಾಗಿತ್ತು. ಅದರಂತೆ ಅಧಿಸೂಚನೆ ಹೊರಡಿಸಲಾಗಿದೆ.
ಇದೀಗ ರಾಜ್ಯಾದ್ಯಂತ 247 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (PDO) ಹುದ್ದೆಗಳ ನೇಮಕಾತಿಗೆ KPSC ಕರೆ ನೀಡಿದ್ದು ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಶುಭ ಕೋರುತ್ತೇನೆ. ಈ 247 ಹುದ್ದೆಗಳ ಪೈಕಿ 150 ಹುದ್ದೆಗಳು ಮಿಕ್ಕುಳಿದ ವೃಂದಕ್ಕೆ ಸೇರಿದ್ದರೆ, 97 ಹುದ್ದೆಗಳು ಕಲ್ಯಾಣ ಕರ್ನಾಟಕ ವೃಂದಕ್ಕೆ ಸೇರಿವೆ.
ಇದು ಕೇವಲ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ. ರಾಜ್ಯದ ಯುವಜನತೆಯ ಸ್ವಾವಲಂಬನೆಯ ಹಕ್ಕಿಗಾಗಿ ಹಾಗೂ ಅವರನ್ನು ಉದ್ಯಮಶೀಲರನ್ನಾಗಿಸಲು ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್ ಸೈಟ್ www.kpsc.kar.nic.in ಗೆ ಭೇಟಿ ನೀಡಿ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.