ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಂಬರುವ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಮತ್ತು ಐದನೇ ನ್ಯಾಯ್ ಭರವಸೆಗಳನ್ನು ಘೋಷಣೆ ಮಾಡಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು ಶ್ರಮಿಕ ನ್ಯಾಯ್, ಭಾಗೀದಾರರ (ಹಿಸ್ಸೇದಾರ್) ನ್ಯಾಯ್ ಅನ್ನು ಶನಿವಾರ ಘೋಷಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಖರ್ಗೆ ವಕರು ಹೇಳಿದ್ದಿಷ್ಟು;
“ರಾಹುಲ್ ಗಾಂಧಿ ಅವರು ಮಣಿಪುರದ ಮುಂಬೈವರೆಗಿನ ನ್ಯಾಯ ಯಾತ್ರೆ ನಾಳೆ ಅಂತಿಮವಾಗಲಿದೆ. ಈ ಸುದೀರ್ಘ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಕಿಸಾನ್ ನ್ಯಾಯ, ಯುವ ನ್ಯಾಯ್, ಮಹಿಳಾ ನ್ಯಾಯ್ ವರ್ಗಗಗಳಲ್ಲಿ 15 ಗ್ಯಾರಂಟಿ ಭರವಸೆಗಳನ್ನು ಘೋಷಣೆ ಮಾಡಿದ್ದಾರೆ. ಇಂದು ನಮ್ಮ ಪಕ್ಷದ ವತಿಯಿಂದ ನಾಲ್ಕನೆಯ ಶ್ರಮಿಕ ನ್ಯಾಯ್ ಹಾಗೂ ಐದನೆಯ ಭಾಗೀದಾರರ ನ್ಯಾಯ್ ಅನ್ನು ಘೋಷಣೆ ಮಾಡುತ್ತಿದ್ದೇವೆ.
ದೇಶದಲ್ಲಿ ಎಲ್ಲಾ ಭಾರತೀಯರಿಗೆ ನ್ಯಾಯ ಒದಗಿಸುವುದು ಈ ಯಾತ್ರೆ ಹಾಗೂ ನಮ್ಮ ಉದ್ದೇಶವಾಗಿದೆ. ಕಾರ್ಮಿಕರ ರಕ್ಷಣೆಗಾಗಿ ಕಾಂಗ್ರೆಸ್ ಸರ್ಕಾರವು ಈವರೆಗೂ ಕನಿಷ್ಠ ವೇತನ ಕಾಯ್ದೆಯಿಂದ, ಆರೋಗ್ಯ ಮಿಮಾ ಕಾಯ್ದೆ. ಕಾರ್ಮಿಕ ಭವಿಷ್ಯ ನಿಧಿ (ಪಿಎಫ್) ಕಾಯ್ದೆ, ಗ್ರಾಮೀಣ ಉದ್ಯೋಗ ಖಾತ್ರಿ ಸೇರಿದಂತೆ ಅನೇಕ ಕಾನೂನು ಜಾರಿಗೆ ತಂದಿದೆ. ಆದರೆ ಮೋದಿ ಅವರ ಕಳೆದ 10 ವರ್ಷಗಳ ಆಡಳಿತದಲ್ಲಿ ಕಾರ್ಮಿಕರ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. ಮೋದಿ ಸರ್ಕಾರ ನರೇಗಾ ಯೋಜನೆ ಕಾರ್ಮಿಕರ ವೇತನದ ಹಣವನ್ನು ರಾಜ್ಯಗಳಿಗೆ ಈವರೆಗೂ ನೀಡಿಲ್ಲ.
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಆದರೆ ನರೇಗಾ ಯೋಜನೆ ಅನುದಾನ ಹಾಗೂ ಬರ ಪರಿಸ್ಥಿತಿಯಲ್ಲಿ ನರೇಗಾ ಯೋಜನೆಯಲ್ಲಿ ಕೂಲಿ ದಿನವನ್ನು 150ಕ್ಕೆ ಏರಿಸುತ್ತಿಲ್ಲ. ಈ ವಿಚಾರವಾಗಿ ನಮ್ಮ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಎಷ್ಟೇ ಮನವಿ ನೀಡಿ ಗೋಗರೆದರೂ ಮೋದಿ ಸರ್ಕಾರ ಸಹಕಾರ ನೀಡುತ್ತಿಲ್ಲ. ಕಾರ್ಮಿಕರ ರಕ್ಷಣೆಗಾಗಿ ಇರುವ ಈ ಕಾಯ್ದೆಗಳನ್ನು ಕಡ್ಡಾಯವಾಗಿ ಕಾರ್ಯವಹಿಸಲು ಹಾಗೂ ಕಾರ್ಮಿಕರ ರಕ್ಷಣೆಗೆ ಈ ಶ್ರಮಿಕ ನ್ಯಾಯ್ ಭರವಸೆ ನೀಡಲಾಗುತ್ತಿದೆ.
ಶ್ರಮಿಕ ನ್ಯಾಯದ ಐದು ಗ್ಯಾರಂಟಿಗಳು
• ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕಾರ್ಮಿಕರಿಗೆ ಆರೋಗ್ಯ ಹಕ್ಕು ಜಾರಿಗೆ ತಂದು ಕಾರ್ಮಿಕರಿಗೆ ಉಚಿತ ಔಷಧಿ, ಚಿಕಿತ್ಸೆ, ಡಯಾಗ್ನೋಸ್ಟಿಕ್ಸ್, ಶಸ್ತ್ರ ಚಿಕಿತ್ಸೆ ನೀಡಲಾಗುವುದು.
• ನರೇಗಾ ಯೋಜನೆ ಅಡಿಯಲ್ಲಿ ಕೂಲಿಗಾರರ ದಿನಗೂಲಿ ಮೊತ್ತವನ್ನು ದೇಶದಾದ್ಯಂತ 400ಕ್ಕೆ ಏರಿಕೆ ಮಾಡಲಾಗುವುದು.
• ನರೇಗಾ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ಆಮೂಲಕ ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣ ಹಾಗೂ ನಗರಗಳಲ್ಲಿ ಹವಾಮಾನ ವೈಪರಿತ್ಯದ ನಿಯಂತ್ರಣ, ಸಾಮಾಜಿಕ ಸೇವೆಗಳ ಅಂತರ ಕಡಿಮೆ ಮಾಡುವುದಾಗಿದೆ.
• ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ, ಅಪಘಾತ ವಿಮೆಗಳು ಸೇರಿದಂತೆ ಸಾಮಾಜಿಕ ಭದ್ರತೆ ಒದಗಿಸುವುದು.
• ಮೋದ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆದು ಕಾರ್ಮಿಕರ ಹಕ್ಕನ್ನು ಮರುಸ್ಥಾಪಿಸಲಾಗುವುದು.
ಭಾಗೀದಾರರ ನ್ಯಾಯದ ಐದು ಗ್ಯಾರಂಟಿಗಳು
• ರಾಷ್ಟ್ರ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ನಡೆಸುವ ಮೂಲಕ ದೇಶದ ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡುವುದು. ಆಡಳಿತದಲ್ಲಿ ಎಲ್ಲಾ ವರ್ಗದವರ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಲಾಗುವುದು.
• ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಅಡ್ಡಿಯಾಗಿರುವ ಶೇ.50ರಷ್ಟು ಮಿಸಲಾತಿ ಮಿತಿಯನ್ನು ತಿದ್ದುಪಡಿಗಳ ಮೂಲಕ ಏರಿಕೆ ಮಾಡಲಾಗುವುದು.
• ಆದಿವಾಸಿಗಳಿಗೆ ಅರಣ್ಯ ಹಕ್ಕು ರಕ್ಷಣೆ ಮಾಡಲಾಗುವುದು. ಒಂದು ವರ್ಷದಲ್ಲಿ ಬಾಕಿ ಇರುವ ಅರಣ್ಯ ಹಕ್ಕು ಕಾಯ್ದೆಯ ಬೇಡಿಕೆಯನ್ನು ಪೂರ್ಣಗೊಳಿಸಲಾಗುವುದು. ಇದರ ಜತೆಗೆ ಸಣ್ಣ ಅರಣ್ಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಸ್ತರಣೆ, ಅರಣ್ಯ ಸಂರಕ್ಷಣೆ ಕಾಯ್ದೆ ಹೆಸರಿನಲ್ಲಿ ಮಾಡಲಾಗಿರುವ ಬಡಕಟ್ಟು ವಿರೋಧಿ ತಿದ್ದುಪಡಿಗಳನ್ನು ರದ್ದು ಮಾಡಲಾಗುವುದು.
• ಆದಿವಾಸಿಗಳಿಗೆ ಸ್ವಯಂ ಆಡಳಿತ ಹಾಗೂ ಸಂಸ್ಕೃತಿ ರಕ್ಷಣೆ ಹಕ್ಕು ನೀಡಲಾಗುವುದು.
• ಇನ್ನು ಮಧ್ಯಪ್ರದೇಶ ಛತ್ತೀಸ್ ಗಡ, ಪಶಿಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದ ಜನ ಅರಣ್ಯ ಪ್ರದೇಶಗಳಿಂದ ವಲಸೆ ಹೋಗುತ್ತಿದ್ದು, ಇವರಿಗಾಗಿ ಜಲ, ಅರಣ್ಯ ಹಾಗೂ ಭೂಮಿಯನ್ನು ನಾವು ರಕ್ಷಣೆ ಮಾಡುತ್ತೇವೆ.
ದೊಡ್ಡ ಉದ್ಯಮಿಗಳು ಅರಣ್ಯ ಪ್ರದೇಶಕ್ಕೆ ಕಾಲಿಡುತ್ತಿದ್ದು ಅವರಿಂದ ಅರಣ್ಯ ರಕ್ಷಣೆ ಮಾಡಲಾಗುವುದು. ಇನ್ನು ಸರ್ಕಾರದಲ್ಲಿರುವ ಮೀಸಲಾತಿ ಹುದ್ದೆಗಳನ್ನು ನೇಮಕ ಮಾಡಲಾಗುವುದು. ಈ ವರ್ಗದವರಿಗೆ ಖಾಯಂ ಉದ್ಯೋಗ ಸಿಗಬಾರದು ಎಂಬ ಉದ್ದೇಶದಿಂದ ಮೋದಿ ಅವರ ಸರ್ಕಾರ ನೇಮಕಾತಿಗಳನ್ನು ಮಾಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದಾಗ ನೇಮಕಾತಿ ಮಾಡಲಾಗುವುದು.
ಈ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ನಮ್ಮ ಸರ್ಕಾರ ಜಾರಿಗೊಳಿಸಲಿದೆ. ನಾವು ಕೊಟ್ಟಿರುವ ಎಳ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ಅದಕ್ಕೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳೇ ಸಾಕ್ಷಿ. ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಘೋಷಣೆ ಮಾಡಿದ ಐದೂ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಸರ್ಕಾರ ಹಾಗೂ ಸಚಿವರುಗಳು ಜಾರಿಗೊಳಿಸಿದ್ದಾರೆ.
ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ, ರೈತರ ಆದಾಯ ದುಪ್ಪಟ್ಟು, ಬುಲೆಟ್ ರೈಲು, ಖಾತೆಗೆ 15 ಲಕ್ಷ ಎಂದು ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಲೇ ಬರುತ್ತಿದ್ದಾರೆ. ಮೋದಿ ಅವರು ಕೊಟ್ಟಿರುವ ಭರವಸೆಗಳಲ್ಲಿ ಶೇ.75ರಷ್ಟು ಬರೀ ಸುಳ್ಳು. ಮಾಧ್ಯಮಗಳು ಮೋದಿ ಅವರ ಈ ಸುಳ್ಳನ್ನು ಪ್ರಶ್ನಿಸುತ್ತಿಲ್ಲ. ಬದಲಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸಿ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿವೆ. ಮೋದಿ ಅವರು ಯಾವುದೇ ಹಿಂಜರಿಕೆ ಇಲ್ಲದೇ ಸುಳ್ಳು ಹೇಳುತ್ತಾರೆ. ಆದರೆ ನಮ್ಮ ನಾಯಕರು ಯಾವುದೇ ಘೋಷಣೆ ಮಾಡುವ ಮುನ್ನ ನಾಲ್ಕು ಬಾರಿ ಆಲೋಚಿಸುತ್ತಾರೆ. ಇದಕ್ಕೆ ಹಣ ಎಲ್ಲಿಂದ ತರುವುದು ಎಂಚು ಚಿಂತನೆ ನಡೆಸಿ ನಂತರ ಭರವಸೆಗಳನ್ನು ಘೋಷಿಸುತ್ತಾರೆ.
ಗ್ಯಾರಂಟಿ ಎಂಬ ಅಂಶವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಾರಿ ಮಾಡಿದ ನಂತರ ಅವರು ಬಳಸುತ್ತಿದ್ದಾರೆ. ನಮಗೂ ಮುಂಚೆ ಅವರಿಗೆ ಗ್ಯಾರಂಟಿ ಯೋಜನೆಯ ಪರಿಕಲ್ಪನೆ ಬಿಜೆಪಿ ಕಾರ್ಯಕರ್ತರು, ಆರ್ ಎಸ್ಎಸ್ ಕಾರ್ಯಕರ್ತರಲ್ಲಿ ಇತ್ತೇ? ಬಿಜೆಪಿಯವರು ನಮ್ಮ ಕಾರ್ಯಕ್ರಮಗಳನ್ನೇ ಅವರದ್ದು ಎಂದು ಹೇಳಿಕೊಂಡು ಹೋಗುತ್ತಾರೆ. ನಮ್ಮ ಆಲೋಚನೆ ಯೋಜನೆಗಳನ್ನು ಅವರು ಮುಂದುವರಿಸುವುದಾದರೆ ಮಾಡಲಿ.
ನಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಸಧ್ಯದಲ್ಲೇ ಬಿಡುಗಡೆ ಮಾಡುತ್ತೇವೆ. 1951ರ ಮೊದಲ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನೆಹರೂ ಅವರ ನಾಯಕತ್ವದಲ್ಲಿ ನಮ್ಮ ಪ್ರಣಾಳಿಕೆಯನ್ನು ಬೆಂಗಳೂರಿನಲ್ಲಿ ಅಂತಿಮಗೊಳಿಸಲಾಗಿತ್ತು. ಈ ಬಾರಿ ನಾವು ಐದು ನ್ಯಾಯ ಯೋಜನೆಗಳ ಮೂಲಕ ಪ್ರತಿ ನ್ಯಾಯ ಯೋಜನೆಯಲ್ಲಿ ಐದು ಗ್ಯಾರಂಟಿಗಳಂತೆ ಒಟ್ಟು 25 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಇದರ ಜತೆಗೆ ನಿರುದ್ಯೋಗ ಸಮಸ್ಯೆ, ಹಣದುಬ್ಬರ ಸಮಸ್ಯೆಗಳು ಪ್ರಮುಖ ವಿಷಯವಾಗಿದ್ದು ಅವುಗಳ ಮೇಲೂ ನಮ್ಮ ಪ್ರಣಾಳಿಕೆ ರೂಪಿಸಲಾಗುವುದು.
ಗಮನಿಸಿ: ಮೌಲಾನಾ ಆಜಾದ್ ಮಾದರಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಕಾಂಗ್ರೆಸ್ ಸರ್ಕಾರ ಲೂಟಿಯಲ್ಲಿ ತೊಡಗಿದೆ : ಪ್ರಧಾನಿ ಮೋದಿ ವಾಗ್ದಾಳಿ