ಬಳ್ಳಾರಿ: 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಬಿಳಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ಬಳ್ಳಾರಿ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ತೀರ್ಮಾನಿಸಿದ್ದು, ಎಫ್.ಎ.ಕ್ಯೂ. ಗುಣಮಟ್ಟದ ಜೋಳವನ್ನು ರೈತರಿಂದ ಖರೀದಿಸಲಾಗುವುದು. ಜಿಲ್ಲೆಯಲ್ಲಿ 05 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಸರ್ಕಾರವು ರಾಜ್ಯದಲ್ಲಿ 1 ಲಕ್ಷ ಮೆ.ಟನ್ ಗುರಿಯನ್ನು ತಲುಪುವ ವರೆಗೆ ಖರೀದಿಸಲು ಸೂಚಿಸಿದ್ದರಿಂದ ರೈತರು ತಕ್ಷಣವೇ ನೋಂದಣಿ ಮತ್ತು ಖರೀದಿಯ ಉಪಯೋಗವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದಿದ್ದಾರೆ.
*ಖರೀದಿಸುವ ಉತ್ಪನ್ನ ಮತ್ತು ನಿಗದಿಯಾದ ಬೆಂಬಲ ಬೆಲೆ:*
ಬಿಳಿ ಜೋಳ. ಮಾಲ್ದಂಡಿ ಬಿಳಿ ಜೋಳಕ್ಕೆ ರೂ.3,225 (ಪ್ರತಿ ಕ್ವಿಂಟಾಲ್ಗೆ) ಮತ್ತು ಹೈಬ್ರಿಡ್ ಬಿಳಿ ಜೋಳಕ್ಕೆ ರೂ.3,180 (ಪ್ರತಿ ಕ್ವಿಂಟಾಲ್ಗೆ) ಇರುತ್ತದೆ.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು. ಇವರು ಖರೀದಿಸುವ ಏಜೆನ್ಸಿಯಾಗಿರುತ್ತಾರೆ. ಹಿಂಗಾರು ಋತುವಿನ ರೈತರ ನೊಂದಣಿ ಪ್ರಾರಂಭವು ಮಾ.11 ರಿಂದ ಮೇ.31 ವರೆಗೆ ಮತ್ತು ಹಿಂಗಾರು ಋತುವಿನ ಖರೀದಿ ಪ್ರಾರಂಭ ಮತ್ತು ಮುಕ್ತಾಯದ ದಿನವು ಏ.01 ರಿಂದ ಮೇ.31 ರ ವರೆಗೆ ಇರುತ್ತದೆ.
*ಜಿಲ್ಲೆಯಲ್ಲಿ ತೆರೆದಿರುವ ಖರೀದಿ ಕೇಂದ್ರ ಮತ್ತು ಅಧಿಕಾರಿ ಸಂಪರ್ಕ ವಿವರ:*
ಬಳ್ಳಾರಿ ತಾಲ್ಲೂಕಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಬಳ್ಳಾರಿ ಘಟಕ-1&2 ರ ನರಸಿಂಹ ಅವರ ಮೊ.9900677875, ಕಂಪ್ಲಿಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ರಂಗಪ್ಪ ಅವರ ಮೊ.9740838910, ಸಿರುಗುಪ್ಪದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಮೋಹನ ಕುಮಾರ ಅವರ ಮೊ.9731421918, ಕುರುಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಎ.ಪಿ.ಎಮ್.ಸಿಯ ಹುಸೇನ್ ಸಾಹೆಬ್ ಅವರ ಮೊ.8951307333, ಸಂಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಎ.ಪಿ.ಎಮ್.ಸಿಯ ಶಿವಲಿಂಗಪ್ಪ ಅವರ ಮೊ.9945940350.
*ಷರತ್ತುಗಳು:*
ನೋಂದಣಿ ಮಾಡುವ ರೈತರು ಸ್ವತಃ ಖರೀದಿ ಕೇಂದ್ರಗಳಿಗೆ ಬಂದು ಬಯೋಮೆಟ್ರಿಕ್ ಮುಖಾಂತರ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಬಿಳಿ ಜೋಳ ನೋಂದಾಯಿಸಿಕೊಂಡ ಪ್ರತಿ ರೈತರಿಂದ ಪ್ರತಿ ಎಕರೆಗೆ 20 ಕ್ವಿಂಟಾಲ್ನಂತೆ ರೈತನ ಜಮೀನಿಗನುಗುಣವಾಗಿ ಬಿಳಿ ಜೋಳವನ್ನು ಖರೀದಿಸಲಾಗುವುದು. ರೈತರಿಗೆ ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಐ.ಡಿ. ಯನ್ನು (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ನೋಂದಣಿ ಅಥವಾ ಖರೀದಿ ಕೇಂದ್ರಕ್ಕೆ ತಂದು ಬೆಂಬಲ ಬೆಲೆ ಯೋಜನೆಯಡಿ ಜೋಳ ಮಾರಾಟ ಮಾಡಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
ರೈತರು ಸರಬರಾಜು ಮಾಡುವ ಜೋಳ ಗುಣಮಟ್ಟವನ್ನು ಕೃಷಿ ಇಲಾಖೆಯು ನಿಯೋಜಿಸಿದ ಗುಣಮಟ್ಟ ಪರಿವೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ನಂತರವೇ ಜೋಳ ಖರೀದಿಸಲಾಗುವುದು. ರೈತರು ತಮ್ಮ ಸ್ವಂತ ಖರ್ಚಿನಲ್ಲಿ ನಿಗದಿಪಡಿಸಿದ ಖರೀದಿ ಕೇಂದ್ರಕ್ಕೆ ಬಿಳಿ ಜೋಳ ಉತ್ಪನ್ನಗಳನ್ನು ಸರಬರಾಜು ಮಾಡಬೇಕು. ರೈತರಿಂದ ಖರೀದಿಸುವ ಜೋಳ ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸಲಾಗುವುದು. ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಖರೀದಿ ಕೇಂದ್ರಗಳಿಗೆ ಜೋಳ ತಂದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಖರೀದಿ ಏಜೆನ್ಸಿಯಾದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ಕಚೇರಿಯ ಜಿಲ್ಲಾ ವ್ಯವಸ್ಥಾಪಕ ಆಶಿಕ್ ಅಲಿ ಅವರ ಮೊ.9686935278 ಅಥವಾ ಆಯಾ ತಾಲ್ಲೂಕಿನ ಖರೀದಿ ಕೇಂದ್ರಗಳ ಖರೀದಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ ಅವರು ತಿಳಿಸಿದ್ದಾರೆ.