ನವದೆಹಲಿ : ಭಾರತದಲ್ಲಿ 18ನೇ ಲೋಕಸಭಾ ಚುನಾವಣೆಗೆ ಮುಖ್ಯ ಚುನಾವಣಾ ಆಯೋಗ ದಿನಾಂಕವನ್ನ ಘೋಷಿಸಿದ್ದು, ದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಅದ್ರಂತೆ, ಏಪ್ರಿಲ್ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದೆ. ಇನ್ನು ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ದೆಹಲಿ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನ ಪ್ರಕಟಿಸಿದ್ದಾರೆ. ಅಂದ್ಹಾಗೆ, ದೇಶದ 543 ಕ್ಷೇತ್ರಗಳಲ್ಲಿ ಈ ಚುನಾವಣೆ ನಡೆಯಿದೆ. ಅದ್ರಂತೆ, ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲನೇ ಹಂತ ಏಪ್ರಿಲ್ 26ಕ್ಕೆ ಮತ್ತು 2ನೇ ಹಂತದ ಚುನಾವಣೆ ಮೇ 7ರಂದು ನಡೆಯಲಿದೆ.
ಮಧ್ಯಮಗಳೊಂದಿಗೆ ಮಾತನಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಈ ಬಾರಿಯ ಚುನಾವಣೆಯನ್ನ ನಡೆಸಲು ಆಯೋಗ ಸಕಲ ರೀತಿಯಲ್ಲಿ ಸಿದ್ದವಾಗಿದೆ ಎಂದರು. ಇನ್ನು 10.5 ಲಕ್ಷ ಮತಗಟ್ಟೆಗಳು, 55 ಲಕ್ಷ ಇವಿಎಂಗಳನ್ನ ಸಿದ್ದಪಡೆಸಲಾಗಿದೆ ಎಂದು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತನಾಡಿ, ಚುನಾವಣೆ ಹಬ್ಬ ದೇಶದ ಹಬ್ಬ. ಚುನಾವಣಾ ಹಬ್ಬವು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಈ ಬಾರಿ ದೇಶದಲ್ಲಿ ಸುಮಾರು 97 ಕೋಟಿ ಮತದಾರರಿದ್ದಾರೆ. ದೇಶದ ಚುನಾವಣೆಗಳ ಮೇಲೆ ಜಗತ್ತು ಕಣ್ಣಿಟ್ಟಿದೆ. ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳನ್ನು ನಡೆಸುವುದು ನಮಗೆ ದೊಡ್ಡ ಸವಾಲಾಗಿದೆ ಎಂದರು.
2024 ವಿಶ್ವದಾದ್ಯಂತ ಚುನಾವಣೆಗಳ ವರ್ಷ.!
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತನಾಡಿ, 2024ನೇ ಇಸವಿಯು ವಿಶ್ವದಲ್ಲಿ ಚುನಾವಣೆಗಳ ವರ್ಷವಾಗಲಿದೆ. ನಮ್ಮ ತಂಡ ಚುನಾವಣೆಗೆ ಸಂಪೂರ್ಣ ಸಜ್ಜಾಗಿದೆ. ಸಂಪೂರ್ಣ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ ಎಂಬ ವಿಶ್ವಾಸ ನಮಗಿದೆ ಎಂದರು.
ದೇಶದಲ್ಲಿ 97 ಕೋಟಿ ಮತದಾರರು.!
“2024ರ ಚುನಾವಣೆಗೆ ದೇಶದಲ್ಲಿ 96.8 ಕೋಟಿ ಮತದಾರರಿದ್ದು, ಅದರಲ್ಲಿ ಪುರುಷ ಮತದಾರರ ಸಂಖ್ಯೆ 49.7 ಕೋಟಿ ಮತ್ತು ಮಹಿಳಾ ಮತದಾರರ ಸಂಖ್ಯೆ 47.1 ಕೋಟಿಗಿಂತ ಹೆಚ್ಚಾಗಿದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ 1.82 ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ” ಎಂದು ತಿಳಿಸಿದರು.
ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳನ್ನ ಮೊಬೈಲ್ ಆ್ಯಪ್ ಮೂಲಕ ಗುರುತಿಸಬಹುದು ಎಂದು ಆಯುಕ್ತರು ಹೇಳಿದರು.