ಬೆಂಗಳೂರು : “ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ಸಿಎಸ್ಆರ್ ನಿಧಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದು, ರಾಮನಗರ ಜಿಲ್ಲೆಯಲ್ಲಿ 20 ಶಾಲೆಗಳ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೆಪಿಎಸ್ ಶಾಲೆಗಳ ನಿರ್ಮಾಣ ಸಂಬಂಧ ರಾಮನಗರದಲ್ಲಿ ಖಾಸಗಿ ಸಂಸ್ಥೆಗಳ ಜತೆ ಶಿವಕುಮಾರ್ ಅವರು, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಜಿಲ್ಲೆಯ ಶಾಸಕರು ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು “ಇಂದು ರಾಮನಗರ ಜಿಲ್ಲೆ ಹಾಗೂ ನನ್ನ ರಾಜಕೀಯ ಬದುಕಿಗೆ ಅತಿ ಹೆಚ್ಚು ಸಂತೋಷ ತಂದ ದಿನ. ರಾಜ್ಯದಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಳ್ಳಿಗಳಿಂದ ಬೆಂಗಳೂರು ಹಾಗೂ ಇತರೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ನಮ್ಮ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಿದೆ ಎಂದರು.
ಈ ಶಾಲೆಗಳ ನಿರ್ಮಾಣಕ್ಕೆ ಸರ್ಕಾರದ ಹಣವನ್ನು ಬಳಸದೇ, ಸಿಎಸ್ಆರ್ ನಿಧಿಯಿಂದ ನಿರ್ಮಿಸಲಾಗುತ್ತಿದೆ. ಪ್ರತಿ ಶಾಲೆಗೆ 7ರಿಂದ 10 ಕೋಟಿ ರೂಪಾಯಿಯಷ್ಟು ವೆಚ್ಚ ಮಾಡಲಾಗುವುದು. ಈ ಶಾಲೆಯಲ್ಲಿ 800ರಿಂದ 1200 ಮಕ್ಕಳು ವ್ಯಾಸಂಗ ಮಾಡಬಹುದು. ಇದರ ಪ್ರಾಯೋಗಿಕವಾಗಿ ನಮ್ಮ ರಾಮನಗರ ಜಿಲ್ಲೆಯಲ್ಲಿ 20 ಶಾಲೆಗಳ ಆರಂಭಕ್ಕೆ ಇಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಎಲ್ಲೆಲ್ಲಿ ಈ ಶಾಲೆಗಳು ನಿರ್ಮಾಣವಾಗಲಿದೆ ಎಂಬ ಪಟ್ಟಿಯನ್ನು ಸಧ್ಯದಲ್ಲೇ ನೀಡುತ್ತೇವೆ. ಇದು ದೇಶದಲ್ಲೇ ಒಂದು ಮಾದರಿ ಪರಿಕಲ್ಪನೆಯಾಗಿದೆ ಹೇಳಿದರು.
ಇದನ್ನು ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಹೇಳಿದ್ದೆವು. ನಮ್ಮ ಬಜೆಟ್ ನಲ್ಲೂ ಸಿದ್ದರಾಮಯ್ಯ ಅವರು ಈ ಶಾಲೆಗಳ ನಿರ್ಮಾಣದ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 2 ಸಾವಿರ ಶಾಲೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಇದನ್ನು ನಮ್ಮ ಜಿಲ್ಲೆಯಿಂದ ಪ್ರಾರಂಭ ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಚರ್ಚೆ ಮಾಡಿದ್ದು ಅವರು ಬೋಧಕ ಸಿಬ್ಬಂದಿ ನೀಡಲಿದ್ದಾರೆ. ನಾನು 3 ಶಾಲೆಗಳನ್ನು ನಡೆಸುತ್ತಿದ್ದು, ಅವುಗಳ ಮೂಲಕ ನಾನೂ ಮೂರು ಪಬ್ಲಿಕ್ ಶಾಲೆಗಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಕೊರತೆ ಇರುವ ಶಿಕ್ಷಕರ ನೇಮಕಾತಿ ಮಾಡಿ ಅವರಿಗೆ ವೇತನ ನೀಡಲಾಗುವುದು. ಆಮೂಲಕ ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ ನೀಡಲಾಗುವುದು ತಿಳಿಸಿದರು.
ಈ ಶಾಲೆಗಳು ಸರ್ಕಾರಿ ಶಾಲೆಗಳೇ ಆಗಿದ್ದು, ಸರ್ಕಾರಿ ಆಡಳಿತ ಮಂಡಳಿಗಳೇ ಶಾಲೆಗಳನ್ನು ನಿರ್ವಹಣೆ ಮಾಡಲಿವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು. ನಗರದಲ್ಲಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ವರ್ಷಕ್ಕೆ 80 ಸಾವಿರದಿಂದ 1.50 ಲಕ್ಷದವೆರಗೂ ಶುಲ್ಕ ಪಾವತಿಸಬೇಕಿದೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಇಷ್ಟು ಶುಲ್ಕ ಪಾವತಿ ಮಾಡಲು ಆಗುವುದಿಲ್ಲ. ಹೀಗಾಗಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಿದೆ ಎಂದರು.
ಮೊದಲ ಹಂತದಲ್ಲಿ ರಾಮನಗರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಐದು ಶಾಲೆಗಳ ನಿರ್ಮಾಣಕ್ಕೆ ಚರ್ಚೆ ಮಾಡಿ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಶಾಲೆಗಳ ನಿರ್ಮಾಣಕ್ಕೆ ಜಾಗಗಳನ್ನು ಗುರುತಿಸಲಾಗಿದ್ದು, ಸಿಎಸ್ಆರ್ ಹಣವನ್ನು ಸರ್ಕಾರ ಪಡೆಯುವುದಿಲ್ಲ. ಖಾಸಗಿ ಸಂಸ್ಥೆಗಳಿಗೆ ಜಾಗ ಯಾವುದು ಎಂದು ತೋರಿಸುತ್ತೇವೆ. ಅವರು ಆ ಜಾಗದಲ್ಲಿ ಶಾಲೆಯನ್ನು ಕಟ್ಟಿಕೊಡುತ್ತಾರೆ. ಇನ್ನು ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ತರಬೇತಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಕಾರ್ಯಕ್ರಮ ಮಾಡಲಾಗಿದೆ ಎಂದರು.
ರಾಮನಗರವನ್ನು ಮಾದರಿ ಜಿಲ್ಲೆ ಮಾಡಲು ಪಣತೊಟ್ಟಿದ್ದೇವೆ
ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲು ನಾವು ಪಣ ತೊಟ್ಟಿದ್ದೇವೆ. ನೀರಾವರಿ ಇಲಾಖೆಯಿಂದಲೇ ಅರ್ಕಾವತಿ ನದಿ ಭಾಗದಲ್ಲಿ ಅಭಿವೃದ್ಧಿಗೆ 165 ಕೋಟಿ ಮೀಸಲಿಟ್ಟಿದ್ದೇವೆ. 125 ಕೋಟಿ ಅನುದಾನವನ್ನು ಸೇತುವೆಗಳು, ರಸ್ತೆ ಅಭಿವೃದ್ಧಿಗೆ ನೀಡಿದ್ದೇವೆ. ಚೆಕ್ ಡ್ಯಾಂ ನಿರ್ಮಾಣಕ್ಕೂ ಮುಂದಾಗಿದ್ದೇವೆ. ಇವುಗಳಿಗಾಗಿ 290 ಕೋಟಿ ಅನುದಾನ ನೀಡಲಾಗಿದೆ. ಮಂಡಳಿಗಳಲ್ಲಿ ಇದಕ್ಕೆ ಅಗತ್ಯವಾದ ಅನುಮತಿ ಪಡೆಯಲಾಗಿದೆ. ರಾಮನಗರ ಪಟ್ಟಣದಲ್ಲಿ ಕಾಂಕ್ರೀಟ್ ರಸ್ತೆಗೆ 82 ಕೋಟಿ ಮೀಸಲಿಡಲಾಗಿದೆ. ಅಲ್ಪಸಂಖ್ಯಾತ ಇಲಾಖೆಯಿಂದ 12.50 ಕೋಟಿ ನೀಡಲಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ನೀಡಿದವರಿಗೆ ಖಾತೆ ಹಾಗೂ ನೋಂದಣಿ ಮಾಡಿಕೊಳ್ಳಲು ಆಗಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ 1625 ಕಡೆಗಳಲ್ಲಿ ವಸತಿ ಬಡಾವಣೆಗಳಿಗೆ ಅವಕಾಶ ನೀಡಲಾಗಿದೆ. ಅಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಿದ್ದೇವೆ. ಮಾಗಡಿಗೆ ಪ್ರತ್ಯೇಕವಾಗಿ ಹೇಮಾವತಿ ನೀರನ್ನು ಕುಡಿಯಲು ಪೂರೈಸಲು ಮುಂದಾಗಿದ್ದೇವೆ. ನನ್ನ ಇಲಾಖೆ ವತಿಯಿಂದ ನೀರಾವರಿ ಇಲಾಖೆಯಿಂದ ರಾಮನಗರ ಜಿಲ್ಲೆಗೆ 700 ಕೋಟಿಗೂ ಹೆಚ್ಚು ಅನುದಾನ ನೀಡಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.
ಇನ್ನು ಸರ್ಕಾರದ ಪುನಶ್ಚೇತ ಕಾರ್ಯಕ್ರಮದ ಅಡಿಯಲ್ಲಿ 10 ಕೋಟಿ ರೂಪಾಯಿ ವೆಚ್ಚದ 2 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ಇದು ಸಿಎಸ್ಆರ್ ನಿಧಿಯ ಶಾಲೆಯಲ್ಲಿ ಬರುವುದಿಲ್ಲ. ರಾಮನಗರ ಜಿಲ್ಲೆಯಲ್ಲಿ ನಿವೇಶನಕ್ಕಾಗಿ ಜನರು ಅಲೆದಾಡುವ ಪರಿಸ್ಥಿತಿ ಇದೆ. ಕನಕಪುರದಲ್ಲಿ 100 ಎಕರೆ ನೀಡಿದ್ದೆ. ಈಗ ರಾಮನಗರ ಜಿಲ್ಲೆಯಲ್ಲಿ 200 ಎಕರೆ ಜಾಗವನ್ನು ಗುರುತಿಸಿ ಜಿಲ್ಲಾಧಿಕಾರಿಗಳಿಗೆ ಅದನ್ನು ವರ್ಗಾವಣೆ ಮಾಡಿ ಬಡವರಿಗೆ ನಿವೇಷನ ಹಂಚಿಕೆ ಮಾಡಲಾಗುವುದು. ನಿವೇಶನ ಕುರಿತಾಗಿ ಶಾಸಕರಿಗೆ 13 ಸಾವಿರ ಅರ್ಜಿಗಳು ಬಂದಿದ್ದು, ಪಾರದರ್ಶಕವಾಗಿ ಹಂಚಿಕೆ ಮಾಡಲಾಗುವುದು.
ಬೆಂಗಳೂರಿನ ಹೊರವಲಯದ 110 ಹಳ್ಳಿಗಳಿಗೆ ಬಿಡಬ್ಲ್ಯೂಎಸ್ಎಸ್ ಬಿಯಿಂದ ಕಾವೇರಿ ನೀರು ಪೂರೈಸಲು ಜಿಓ (ಸರ್ಕಾರಿ ಆದೇಶ) ಕೂಡ ಹೊರಡಿಸಲಾಗಿದೆ. ಇನ್ನು ಈ ಭಾಗದಿಂದ ಬೆಂಗಳೂರಿಗೆ ನೀರು ಪೂರೈಕೆ ಮಾಡಲು ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದೇವೆ. ಇನ್ನು ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲು 1500 ಟ್ಯಾಂಕರ್ ಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.”
ಈ ಶಾಲೆಗಳ ನಿರ್ಮಾಣ ಹೇಗೆ ಮಾಡಲಿದ್ದಾರೆ ಎಂದು ಕೇಳಿದಾಗ, “ಸರ್ಕಾರದಿಂದ ನಾವು ಮಾದರಿ ಹಾಗೂ ನಕ್ಷೆಗಳನ್ನು ನೀಡುತ್ತೇವೆ. ಇದರಲ್ಲಿ ಏನಾದರೂ ಬದಲಾವಣೆ ಮಾಡುವುದಿದ್ದರೆ ಅವರು ಬದಲಾವಣೆ ಮಾಡಿ ಕಟ್ಟಬಹುದು. 2-3 ಪಂಚಾಯ್ತಿ ವ್ಯಾಪ್ತಿಯಲ್ಲಿ ಸೇರಿ ಒಂದು ಶಾಲೆ ನಿರ್ಮಾಣ ಮಾಡಲಿದ್ದಾರೆ” ಎಂದು ತಿಳಿಸಿದರು.
ಈ ಪಬ್ಲಿಕ್ ಶಾಲೆಗಳ ಪಠ್ಯಕ್ರಮ ಯಾವರೀತಿ ಇರಲಿದೆ ಎಂದು ಕೇಳಿದಾಗ, “ಪಬ್ಲಿಕ್ ಶಾಲೆಗಳಲ್ಲಿ ಇರುವಂತೆ ಸಿಬಿಎಸ್ ಸಿ, ಐಸಿಎಸ್ ಸಿ ಪಠ್ಯಕ್ರಮಗಳಿಗೆ ಸಮನಾಗಿಯೇ ಈ ಶಾಲೆಗಳಲ್ಲೂ ಪಠ್ಯಕ್ರಮ ಇರಲಿದೆ” ಎಂದು ತಿಳಿಸಿದರು.
ಈ ಶಾಲೆಗಳ ಒಡೆತನ ಖಾಸಗಿ ಶಾಲೆಗಳದ್ದಾಗಿರುತ್ತದೆಯೇ ಎಂದು ಕೇಳಿದಾಗ, “ಈ ಶಾಲೆಗಳ ಒಡೆತನ ಖಾಸಗಿಯವರಿಗೆ ನೀಡಿದರೆ ಹಣ ವಸೂಲಿ ಮಾಡಲು ಆರಂಭಿಸುತ್ತಾರೆ. ಹೀಗಾಗಿ ಈ ಶಾಲೆಗಳ ಒಡೆತನ ಸರ್ಕಾರದ್ದಾಗಿರಲಿದೆ. ಸರ್ಕಾರಿ ಶಾಲೆಗಳಲ್ಲಿ ಪಬ್ಲಿಕ್ ಶಾಲೆಗಳ ಗುಣಮಟ್ಟವಿರಲಿದೆ” ಎಂದರು.
ರಾಜ್ಯದ ಇತರೆ ಕಡೆಗಳಲ್ಲಿ ಇಂತಹ ಶಾಲೆ ನಿರ್ಮಾಣದ ಬಗ್ಗೆ ಕೇಳಿದಾಗ, “ನಮ್ಮ ಸರ್ಕಾರ 2 ಸಾವಿರ ಶಾಲೆಗಳ ನಿರ್ಮಾಣದ ಗುರಿ ಹೊಂದಿದ್ದು, ಮುಂದಿನ ವರ್ಷದಿಂದ ಬೇರೆ ಬೇರೆ ಜಿಲ್ಲೆಗಳಲ್ಲೂ ಆರಂಭಿಸಲಿದ್ದೇವೆ. ಈ ಶಾಲೆಗಳ ನಿರ್ಮಾಣಕ್ಕೆ ಹಣ ನೀಡಲು ಅನೇಕ ಕೈಗಾರಿಕೆಗಳು ಮುಂದೆ ಬಂದಿದ್ದು, ಸಿಎಸ್ಆರ್ ನಿಧಿಯನ್ನು ಶಾಲೆಗಳ ನಿರ್ಮಾಣಕ್ಕೆ ಬಳಸಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು.
ಡಿ.ಕೆ ಸಹೋದರರ ದರ್ಪ ದೌರ್ಜನ್ಯ ನಡೆಯುವುದಿಲ್ಲ ಮಂಜುನಾಥ್ ಅವರು ಗೆಲ್ಲಲ್ಲಿದ್ದಾರೆ ಎಂಬ ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾಳೆ ಚುನಾವಣೆ ಘೋಷಣೆ ಆಗಲಿ. ಆಮೇಲೆ ಇವುಗಳಿಗೆ ಉತ್ತರ ನೀಡುತ್ತೇನೆ. ನಮಗೆ ಶಾಸಕರುಗಳನ್ನು ಕೊಟಟಿರುವ ಜನರ ಋಣ ತೀರಿಸುವ ಕೆಲಸ ಮಾಡೋಣ” ಎಂದು ತಿಳಿಸಿದರು.
ಸುರೇಶ್ ಅವರು ಸಂಸದರಾಗಲು ನಾವು ಕಾಣಿಕೆ ನೀಡಿದ್ದೇವೆ ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಾರಿಯೂ ಅವರ ಪಕ್ಷದವರು ಸಹಕಾರ ನೀಡುತ್ತಾರೆ. ಅವರು ಸ್ಪರ್ಧೆ ಮಾಡುತ್ತಿಲ್ಲ ಎಂದರೆ ಅವರು ಸಹಾಯ ಮಾಡಿದಂತೆ ಅಲ್ಲವೇ?” ಎಂದರು.
ಮೇಕೆದಾಟು ಯೋಜನೆ ವಿಚಾರದಲ್ಲಿ ನಿಮ್ಮ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಕೇಳಿದಾಗ, “ನಾನು ನೀರಾವರಿ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇ ಮೇಕೆದಾಟು ಯೋಜನೆ ಜಾರಿಗಾಗಿ. ಏನಾದರೂ ಮಾಡಿ ಅದನ್ನು ಮಾಡಲೇಬೇಕು ಎಂಬ ಹಠವಿದೆ” ಎಂದು ತಿಳಿಸಿದರು.
ಬಿಹಾರ ಸಚಿವ ಸಂಪುಟ ವಿಸ್ತರಣೆ : ಮಾಜಿ ಡಿಸಿಎಂ ‘ರೇಣು ದೇವಿ ಸೇರಿ 21 ನಾಯಕ’ರು ‘ನಿತೀಶ್ ಕುಮಾರ್’ ಪಡೆಗೆ ಸೇರ್ಪಡೆ
BREAKING: ರಾಜ್ಯ ಸರ್ಕಾರದಿಂದ ಜನನ-ಮರಣ ಉಪನೋಂದಣಾಧಿಕಾರಿಯಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ನೇಮಿಸಿ ಆದೇಶ