ತುಮಕೂರು: ಗುಬ್ಬಿ ಶಾಸಕ ಶ್ರೀನಿವಾಸ್‌ರಿಂದ ಕಾಂಗ್ರೆಸ್ ಕಾರ್ಯಕರ್ತ ರಾಯಸಂದ್ರ ರವಿಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ತಮ್ಮ ಫೇಸ್‌ಬುಕ್‌ನಲ್ಲಿ ರಾಯಸಂದ್ರ ರವಿ ಕುಮಾರ್ ಬರೆದುಕೊಂಡಿರುವ ವಿವರ ಈ ಕೆಳಕಂಡತಿದೆ.
ೃ
ಟ2024ರ ಮಾರ್ಚಿ 14ರ ಮಧ್ಯರಾತ್ರಿ 11.15ರಲ್ಲಿ ತುಮಕೂರು ನಗರದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ನಮ್ಮ ಕಣ್ಣೆದುರೇ ಸಾರ್ವಜನಿಕವಾಗಿ ನಡೆದ ಘಟನೆ ಶಾಸಕರು, ಸಂಸದರು ಗೂಂಡಾಗಳಂತೆ ಕೈ ಎತ್ತಿ ಹೊಡೆಯತ್ತಾರೆ, ಅಶ್ಲೀಲ ಪದಗಳಿಂದ ಬಯ್ಯುತ್ತಾರೆ ಎಂಬುದು ಸಿನಿಮಾಗಳಲ್ಲಿ ಮಾತ್ರ ಎಂಬುದನ್ನು ಸುಳ್ಳು ಮಾಡಿತು.
ೃ
ಕೆಎಸ್ ಆರ್ ಟಿಸಿ ಅಧ್ಯಕ್ಷರೂ ಆಗಿರುವ ಗುಬ್ಬಿ ವಿಧಾನ ಸಭಾ ಕ್ಷೇತ್ರದ ಚುನಾಯಿತ ಪ್ರತಿನಿಧಿ ಕಾಂಗ್ರೆಸ್ ನ ಎಸ್.ಆರ್.ಶ್ರೀನಿವಾಸ್ ಹಾಗೂ ಅವರ ಜೊತೆ ಬಂದಿದ್ದ ಕೆಲ ಯುವಕರು, ಲೋಕೋಪಯೋಗಿ ಇಲಾಖೆ ಆವರಣದಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಮುಂಭಾಗದ ಪೋರ್ಟಿಕೋದಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್ ಅವರನ್ನು ಅತ್ಯಂತ ಕೆಟ್ಟ ಮಾತುಗಳಿಂದ ನಿಂದಿಸಿ, ಕೈಗಳಿಂದ ಹಲ್ಲೆ ಮಾಡಿದರು.
ವಿಜಯ ಕರ್ನಾಟಕ ದಿನಪತ್ರಿಕೆಯ ತುಮಕೂರು ಜಿಲ್ಲಾ ವರದಿಗಾರ ಶಶಿಧರ್ ದೋಣಿ ಹಕ್ಲು, ವಿಜಯವಾಣಿ ವರದಿಗಾರ ಶ್ರೀ ಹರ್ಷ ಸೋರಲಮಾವು, ಪ್ರಾದೇಶಿಕ ಪತ್ರಿಕೆಗಳ ಇಬ್ಬರು ವರದಿಗಾರರಾದ ಹಬೀಬ್ ಖಾದರ್ ಹಾಗೂ ಯೂಸೂಫ್ ಮತ್ತು ‘ಬೆವರ ಹನಿ ‘ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕ ಕುಚ್ಚಂಗಿ ಪ್ರಸನ್ನ ಆದ ನಾನು, ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪೇದೆ ಶ್ರೀಶೈಲ ಹಡಪದ ಮತ್ತು ಅವರ ಜೊತೆ ಇದ್ದ ಒಬ್ಬ ಗೃಹ ರಕ್ಷಕ ದಳದ ಸಿಬ್ಬಂದಿ, ದಲಿತ ಮುಖಂಡ ಕೊಟ್ಟ ಶಂಕರ್, ಕಾಂಗ್ರೆಸ್ ಕಾರ್ಯಕರ್ತ ಕುಚ್ಚಂಗಿ ರಮೇಶ್ ಹಾಗೂ ಇನ್ನಿತರ ಕೆಲವರು ಗುಬ್ಬಿ ಶಾಸಕರು ರಾಯಸಂದ್ರ ರವಿಕುಮಾರ್ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದನ್ನು ಕಣ್ಣಾರೆ ಕಂಡವರು.
ಹಲ್ಲೆಯ ವಿಡಿಯೋ ತೆಗೆಯಲು ಮುಂದಾದ ಇಬ್ಬರ ಮೊಬೈಲ್ ಗಳನ್ನು ಶಾಸಕರ ಜೊತೆ ಬಂದಿದ್ದವರು ಕಿತ್ತುಕೊಂಡರು. ಹಲ್ಲೆ ನಡೆಯುತ್ತಿರುವುದನ್ನು ಠಾಣೆಗೆ ವರದಿ ಮಾಡಲು ಪ್ರಯತ್ನಿಸಿದ ಪೊಲೀಸ್ ಶ್ರೀಶೈಲ ಹಡಪದ ಅವರ ಕೈಯನ್ನು ತಿರುಚಿ ಪೋನ್ ಕಿತ್ತುಕೊಂಡರು. ವಾಸಣ್ಣ ಎಂದೇ ಜನಪ್ರಿಯರಾದ ನಿರಂತರ ಐದು ಚುನಾವಣೆಗಳಲ್ಲಿ ಜನರಿಂದ ಗೆದ್ದು ವಿಧಾನ ಸಭೆಯಲ್ಲಿ ಗುಬ್ಬಿ ತಾಲೂಕಿನ ಜನತೆಯನ್ನು ಪ್ರತಿನಿಧಿಸುತ್ತಿರುವ ಎಸ್.ಆರ್.ಶ್ರೀನಿವಾಸ್ ಹೀಗೆ ತಮ್ಮ ನಿಯಂತ್ರಣ ತಪ್ಪಿ ಗೂಂಡಾ ವರ್ತನೆ ಮಾಡಿದ್ದು ಸ್ಥಳದಲ್ಲಿದ್ದ ನಮಗೆ ಆಘಾತಕಾರಿಯಾಗಿದೆ.
ಶಾಸಕರು ತಮ್ಮ ಗುಂಪಿನೊಂದಿಗೆ ರಾಯಸಂದ್ರ ರವಿಕುಮಾರ್ ಮೇಲೆ ಏಕಾಏಕಿ ದಾಳಿ ಮಾಡಲು ಎಂತದ್ದೇ ಮಹತ್ವದ ಕಾರಣ ಇರಬಹುದಾಗಿತ್ತಾದರೂ ಅಂಥ ಮಹತ್ವವನ್ನು ಅವರ ಕೃತ್ಯ ಸಂಪೂರ್ಣವಾಗಿ ತೊಳೆದುಹಾಕಿಬಿಟ್ಟಿತು.
ಗುಬ್ಬಿ ತಾಲೂಕಿನಲ್ಲಿ ಗಣಿ ಬಾಧಿತ ಪ್ರದೇಶ ಅಭಿವೃದ್ಧಿ ನಿಗಮದಿಂದ ಮಂಜೂರಾಗಿದ್ದ ಎರಡು ಕಾಮಗಾರಿ ಗುತ್ತಿಗೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ತಿಮ್ಮರಾಯಪ್ಪ ರದ್ದುಪಡಿಸಿದ್ದಾರೆಂದು ಆರೋಪಿಸಿ ಪ್ರಥಮ ದರ್ಜೆ ಗುತ್ತಿಗೆದಾರರೂ ಆಗಿರುವ ರಾಯಸಂದ್ರ ರವಿಕುಮಾರ್ ಗುರುವಾರ ಸಂಜೆ ಅದೇ ಕಚೇರಿ ಮುಂದೆ ಧರಣಿ ಕುಳಿತಿರುವುದಾಗಿ ಸುದ್ದಿ ಬಂದಿತು. ವೃತ್ತಿ ಕಾರಣದಿಂದಾಗಿಯೇ ಕಳೆದ ಕೆಲವು ವರ್ಷಗಳಿಂದ ಪರಿಚಿತರಾಗಿರುವ ಅವರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆ ದಿನದ ಸುದ್ದಿ ಸಂಪಾದನೆ ಹಾಗೂ ಪುಟ ವಿನ್ಯಾಸ ಮುಗಿದ ಬಳಿಕ ಸ್ಥಳಕ್ಕೆ ಹೋದೆ. ಹೋಗುವ ಮುನ್ನ ವಿಜಯವಾಣಿ ದಿನಪತ್ರಿಕೆಯ ವರದಿಗಾರ ಶ್ರೀಹರ್ಷ ಸೋರಲಮಾವು ಅವರಿಗೆ ಧರಣಿ ಕುರಿತ ಮಾಹಿತಿ ಕೇಳಿ ಅವರೂ ಅಲ್ಲಿರುವುದಾಗಿ ತಿಳಿದು ಅಲ್ಲಿಗೆ ಹೋದೆ. ಅಲ್ಲಿ ಕೆಲ ಸಮಯ ಮಾಹಿತಿ ಪಡೆಯುತ್ತಿರುವ ಹೊತ್ತಿಗೆ ಒಂದಷ್ಟು ಜನರು ದಾಪುಗಾಲು ಹಾಕಿಕೊಂಡು ಧರಣಿ ಸ್ಥಳಕ್ಕೆ ಧಾವಿಸಿದರು. ಅವರ ಗುಂಪಿನ ನಾಯಕತ್ವ ವಹಿಸಿಕೊಂಡಿದ್ದ ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್, ಅವನ್ಯಾರೋ ರಾಯಸಂದ್ರ ರವಿ ಎಂದು ಕೇಳುತ್ತಾ ನುಗ್ಗಿ ಬಂದು, ರಾಯಸಂದ್ರ ರವಿ ಅವರನ್ನು ಕುರಿತು , ನಾನು ಫೋನ್ ಮಾಡಿದರೆ ತೆಗೆಯದೇ ಇರುವಷ್ಟು ದುರಂಹಕಾರವಾ ಎನ್ನುತ್ತ ಅದೇ ಮಾತನ್ನು ಕೆಟ್ಟ ಅಶ್ಲೀಲಪದಗಳೊಂದಿಗೆ ಪದೇ ಪದೇ ಕೇಳಿದ್ದಲ್ಲದೇ, ಸ್ಟ್ರೈಕ್ ಮಾಡಲು ನೀನ್ಯಾರು, ನಾನೇ ಆ ಕೆಲಸ ಕೊಡಿಸುತ್ತೇನೆ, ಧಮ್ಮಿದ್ದರೆ ಬಂದು ನನ್ನ ಕ್ಷೇತ್ರದಲ್ಲಿ ಬಂದು ಮಾಡು, ನಿಮ್ಮ ಗಾಡಿಗಳನ್ನೆಲ್ಲ ಚೂರು ಚೂರು ಮಾಡಿಬಿಡುತ್ತೇನೆ ಎಂದು ಕೂಗಾಡತೊಡಗಿದರು.
ಆಗ ಶಾಸಕರ ಜೊತೆ ಬಂದಿದ್ದ ಕೆಲವರು ರಾಯಸಂದ್ರ ರವಿಕುಮಾರ್ ಮೇಲೆ ಕೈ ಮಾಡಿದರು, ಅವರು ಹಲ್ಲೆ ಮಾಡುವುದನ್ನು ಶಾಸಕರು ತಡೆಯಬಹುದಿತ್ತು, ಆದರೆ ಅವರು ಅವರ ಹುಡುಗರನ್ನು ತಡೆಯುವ ಬದಲು ಅವರೇ ಕೈಯೆತ್ತಿ ರಾಯಸಂದ್ರ ರವಿಯವರಿಗೆ ಹೊಡೆದರು. ರವಿ ಅವರನ್ನು ಐದಾರು ಜನರ ಗುಂಪು ಹೊಡೆಯುತ್ತಲೇ ಗೇಟಿನತ್ತ ತಳ್ಳಿಕೊಂಡುಹೋಯಿತು. ಅವರಲ್ಲಿ ಯಾರೋ, ಅವನನ್ನು (ರಾಯಸಂದ್ರ ರವಿ) ಎತ್ತಿ ಕಾರಿನಲ್ಲಿ ಹಾಕಿಕೊಳ್ಳಿರೋ, ಇವತ್ತು ಅವನ ತಿಥಿ ಮಾಡಿಬಿಡೋಣ’ ಎಂದು ಕೂಗತೊಡಗಿದ್ದರು. ಆಗ ರಾಯಸಂದ್ರ ರವಿ ಅವರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋದರು. ಅರ್ಧ ಗಂಟೆ ಬಳಿಕ ಅವರು ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹೋಗಿ ಆಶ್ರಯ ಪಡೆದುಕೊಂಡಿದ್ದರು ಎಂದು ತಿಳಿಯುತು. ನಂತರ ಅವರು ಹಲ್ಲೆಯಿಂದಾದ ಆಘಾತ ಮತ್ತು ನೋವಿಗೆ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಂದು ತಿಳಿದು ಬಂದಿತು.
ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಗುತ್ತಿಗೆ ಕಾಮಗಾರಿ ಪಡೆದುಕೊಂಡ ರಾಯಸಂದ್ರ ರವಿಕುಮಾರ್ ಅವರು ಗುತ್ತಿಗೆ ಕೈ ತಪ್ಪಿದ್ದಕ್ಕೆ ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಹಾಗೂ ಈ ಸಂಬಂಧ ಶುಕ್ರವಾರ ಬೆಳಗ್ಗೆ 10.30ಕ್ಕೆ ಅದೇ ಸ್ಥಳದಲ್ಲಿ ಪತ್ರಿಕಾ ಗೋಷ್ಟಿ ಕರೆದಿದ್ದುದು ಶಾಸಕರನ್ನು ಕೆರಳಿಸಿದೆ ಅಂತಲೇ ಭಾವಿಸಿದರೂ, ಅವರದೇ ರಾಜಕೀಯ ಪಕ್ಷದ ಮತ್ತೊಬ್ಬ ಮುಖಂಡರೂ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಫರ್ಧಿಸಿ ಸೋತಿರುವ ರಾಯಸಂದ್ರ ರವಿಕುಮಾರ್ ಅವರಿದ್ದ ಧರಣಿ ಸ್ಥಳಕ್ಕೆ ಬಂದು ಕೇಳಿದ್ದರಲ್ಲಿ ತಪ್ಪೇನೂ ಇಲ್ಲವಾದರೂ, ದೈಹಿಕ ಹಲ್ಲೆ ಮಾಡಿದ್ದು ಯಾವತ್ತಿಗೂ ಯಾರೂ ಒಪ್ಪತಕ್ಕ ನಡವಳಿಕೆಯಲ್ಲ , ಅವರ ಈ ಜೀವವಿರೋಧಿ ಕೃತ್ಯವನ್ನು ನಾನು ಖಂಡಿಸುತ್ತೇನೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕೆಂದು ಆಗ್ರಹಿಸುತ್ತೇನೆ.