ನಿಮ್ಮ ಪತಿ ಸೋಮಾರಿಯೇ? ಸೋಂಬೇರಿ ಪತಿಯಂದಿರು ಎಂದಿಗೂ ನಿಮ್ಮ ಕೆಲಸದಲ್ಲಿ ಕೈ ಜೋಡಿಸುವುದಿಲ್ಲ. ಸೇವೆ ಮಾಡಿಸಿಕೊಂಡು, ಎಲ್ಲ ಕೆಲಸವನ್ನೂ ನಿಮ್ಮ ಮೇಲೆ ಹೊರಿಸಿ ಹಾಯಾಗಿರುತ್ತಾರೆ. ನಿಮ್ಮ ಪರಿಸ್ಥಿತಿಯ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡುವುದೊಂದೇ ಪರಿಹಾರ.
ಅಷ್ಟಕ್ಕೂ ನಿಮ್ಮ ಪತಿ ನಿಜಕ್ಕೂ ಸೋಂಬೇರಿಯಾ ಅಥವಾ ಸೋಂಬೇರಿಯ ಹಾಗೆ ಇದ್ದುಕೊಂಡು ಸೇವೆ ಮಾಡಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆಯನ್ನು ಎಂದಾದರೂ ಕೇಳಿಕೊಂಡಿದ್ದೀರಾ? ನಿಮ್ಮ ಪತಿ ನಿಜಕ್ಕೂ ಸೋಮಾರಿಯಾಗಿದ್ದರೆ ಈ ಕೆಲವು ಲಕ್ಷಣಗಳನ್ನಂತೂ ತೋರ್ಪಡಿಸಿಕೊಳ್ಳುತ್ತಾರೆ. ಈ ಲಕ್ಷಣಗಳು ನಿಮ್ಮ ಪತಿಯಲ್ಲೂ ಇದ್ದರೆ ಅವರು ನಿಜಕ್ಕೂ ಸೋಂಬೇರಿ ಎಂದು ತಿಳಿದುಕೊಳ್ಳಬಹುದು.
ಪತಿ-ಪತ್ನಿ ಇಬ್ಬರೂ ದುಡಿಯುವವರಾದರೆ ಮನೆಕಾರ್ಯದಲ್ಲೂ ಇಬ್ಬರೂ ಭಾಗಿಯಾಗುವುದು ಸಾಮಾನ್ಯ. ಆದರೆ, ನಿಮ್ಮ ಪತಿ ಮಾತ್ರ ಮನೆಕೆಲಸಕ್ಕೆ ನೂರೆಂಟು ನೆಪಗಳನ್ನು ಹುಡುಕುತ್ತಾರೆ.
ಮನೆಯಲ್ಲಿ ಮಾಡುವ ಕೆಲಸಕ್ಕೆ ಮಾತ್ರವಲ್ಲ, ತರಕಾರಿ, ಮನೆಗೆ ಬೇಕಾಗುವ ಸಾಮಗ್ರಿಗಳನ್ನು ತರಲೂ ಅವರಿಂದ ಸಾಧ್ಯವಾಗುವುದಿಲ್ಲ. “ಇಂದು ಸಿಕ್ಕಾಪಟ್ಟೆ ಕೆಲಸವಿತ್ತು, ನೂರಾರು ಕಿಲೋಮೀಟರ್ ಓಡಾಡಿ ದಣಿದಿದ್ದೇನೆʼ ಎನ್ನುವಂತಹ ಹತ್ತಾರು ನೆಪಗಳು ಅವರ ಬತ್ತಳಿಕೆಯಲ್ಲಿ ಇರುತ್ತವೆ. ಮನೆಯಲ್ಲಿ ಕೇವಲ ಮೊಬೈಲ್ ಟಿವಿಗಳಲ್ಲಿ ಮುಳುಗಿರುತ್ತಾರೆ ಅಥವಾ ವಿಡಿಯೋ ಗೇಮ್ ಆಡುತ್ತಿರುತ್ತಾರೆ.
ನಿಮ್ಮ ಪತಿಯಲ್ಲೂ ಈ ಗುಣವಿದ್ದರೆ ನಿಧಾನವಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
ಎಲ್ಲರಿಗೂ ಕಚೇರಿಯಲ್ಲಿ ನೂರೆಂಟು ಒತ್ತಡಗಳಿರುತ್ತವೆ. ಆದರೆ, ಅದರ ಭಾರವನ್ನು ಮನೆಯಲ್ಲೂ ಮುಂದುವರಿಸುವುದು ಕೆಲವೊಮ್ಮೆ ಮಾತ್ರ ಸರಿ. ಉದಾಹರಣೆಗೆ, ನಿಮ್ಮ ಪತಿಯಲ್ಲಿ ನೀವು ಏನಾದರೂ ಸಹಾಯ ಕೇಳಿದಾಗ ಅವರು ಕಚೇರಿ ಕೆಲಸ, ಅಲ್ಲಿನ ವಾತಾವರಣವನ್ನು ದೂರುತ್ತಿದ್ದರೆ, ಪ್ರತಿ ಬಾರಿಯೂ ಹಾಗೆಯೇ ವರ್ತಿಸಿದರೆ ಅವರಿಗೆ ಮನೆಕೆಲಸ ಮಾಡಲು ಇಷ್ಟವಿಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳಿ. ಈ ಕುರಿತು ಅವರೊಂದಿಗೆ ಮಾತನಾಡಿ, ಅವರಿಗೆ ಪರಿಸ್ಥಿತಿ ಮನದಟ್ಟು ಮಾಡಿಕೊಡುವುದಕ್ಕೆ ಯತ್ನಿಸಬಹುದು.
ಜಗಳ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ. ಮುನಿಸಿಕೊಂಡು ಸುಮ್ಮನಿದ್ದು, ನೀವೇ ಎಲ್ಲ ಜವಾಬ್ದಾರಿಯನ್ನೂ ಹೊರುವುದು ದೀರ್ಘಕಾಲದ ದೃಷ್ಟಿಯಿಂದ ಒಳ್ಳೆಯದಲ್ಲ.
ನೀವು ಅಷ್ಟೆಲ್ಲ ಕೆಲಸ ಮಾಡುವುದನ್ನು ಕಂಡರೂ ತಮ್ಮ ಪಾಡಿಗೆ ತಮ್ಮ ಲೋಕದಲ್ಲಿರುವ ಪುರುಷರಿದ್ದಾರೆ. ಕಚೇರಿ-ಮನೆ ಎರಡನ್ನೂ ಸಂಭಾಳಿಸುವ ಪತ್ನಿಗೂ ಸಹಾಯ ಮಾಡದ ಪತಿಯಂದಿರು ಸ್ವಭಾವತಃ ಸೋಮಾರಿಗಳೇ ಆಗಿರುತ್ತಾರೆ ಎನ್ನಬಹುದು.
ಪತ್ನಿಯ ಸಂಕಷ್ಟ ಅರ್ಥ ಮಾಡಿಕೊಳ್ಳದೆ, ತಮ್ಮ ಸೋಮಾರಿತನವನ್ನೇ ಪೋಷಿಸಿಕೊಂಡು ಬರುವುದಕ್ಕೆ ಅವರಿಗೆ ಏನೇನೂ ಬೇಸರವಾಗುವುದಿಲ್ಲ. ನೀವು ಬಾಯಿಬಿಟ್ಟು ನೆರವು ಕೇಳುವವರೆಗೂ ಅವರಾಗಿಯೇ ಸಹಾಯ ಮಾಡಲು ಮುಂದಾಗದಿರುವುದು ಸೋಮಾರಿತನದ ಮತ್ತೊಂದು ಪ್ರತೀಕ.
ನೀವು ಮನೆಗೆ ಸಂಬಂಧಿಸಿದ ಯಾವುದಾದರೊಂದು ಕೆಲಸವನ್ನು ಅವರಿಗೆ ವಹಿಸಿದರೆ ಅವರು ಅದಕ್ಕೆ ಸಾಧ್ಯವಿಲ್ಲʼ ಎನ್ನುವುದಿಲ್ಲ.
ಆದರೆ, ಒಂದು ದಿನ, ವಾರ ಕಳೆದರೂ ಆ ಕೆಲಸ ಆಗಿರುವುದಿಲ್ಲ. ಮುಂದೂಡುತ್ತಲೇ ಇರುತ್ತಾರೆ. ಕೊನೆಗೆ, ನೀವೇ ಮುಂದಾಗಿ ಆ ಕೆಲಸವನ್ನು ಮಾಡಬೇಕು. ಇಂತಹ ಗುಣಗಳು ನಿಮ್ಮ ಪತಿಯಲ್ಲೂ ಇದ್ದರೆ ಅವರೊಂದಿಗೆ ಮುಕ್ತವಾಗಿ ಪ್ರೀತಿಯಿಂದ ಮಾತನಾಡುವುದೊಂದೇ ಪರಿಹಾರ ಆಗಬಲ್ಲದು.