ಕಲಬುರಗಿ : ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು 1,460 ಕೋಟಿ ರೂ. ಬೃಹತ್ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಉದ್ಯೋಗ ಭದ್ರತೆಯಿಲ್ಲದ ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ದುಪ್ಪಟ್ಟುಗೊಳಿಸಲಾಗುವುದು. ಆದಿವಾಸಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮುಖ್ಯವಾಹಿನಿಗೆ ತರಲಾಗುವುದು. ಜನಗಣತಿಯ ಅಂಕಿ-ಅಂಶಗಳನ್ನು ಆಧರಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ನೆರವು ನೀಡಲಾಗುವುದು’ ಎಂದು ಆಶ್ವಾಸನೆ ನೀಡಿದರು.
ಕಲಬುರಗಿ ಜಿಲ್ಲೆಯಲ್ಲಿ 5.25 ಲಕ್ಷ ಜನ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ 2,000 ರೂ. ಪಡೆಯುತ್ತಿದ್ದಾರೆ. 5.28 ಲಕ್ಷ ಮನೆಗಳಲ್ಲಿ ಗೃಹ ಜ್ಯೋತಿಯ ಬೆಳಕು ಕಾಣುತ್ತಿದೆ. 4.91 ಲಕ್ಷ ಪಡಿತರ ಕುಟುಂಬಗಳು ಅನ್ನ ಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪ್ರತಿ ದಿನ 1.57 ಲಕ್ಷ ಜನ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ರಾಜ್ಯದಾದ್ಯಂತ 1.40 ಲಕ್ಷ ಜನ ಯುವ ನಿಧಿಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ. ಇದೆಲ್ಲವು ಬಡವರ ಕಲ್ಯಾಣಕ್ಕೆ ರೂಪಿಸಿರುವ ನಮ್ಮ ಸರ್ಕಾರದ ಜನಪರ ಯೋಜನೆಗಳಾಗಿವೆ ಎಂದರು.
2013ರಲ್ಲಿ ಅಂದಿನ ಯು.ಪಿ.ಎ. ಸರ್ಕಾರ ಈ ಭಾಗಕ್ಕೆ ಸಂವಿದಾನಕ್ಕೆ ತಿದ್ದುಪಡಿ ತಂದು 371ಜೆ ಕಲಂ ಜಾರಿಗೆ ತಂದ ಪರಿಣಾಮ ಇಂದಿಲ್ಲ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. 9 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಇಲ್ಲಿನ ರಾಜ್ಯ ಸರ್ಕಾರ 371ಜೆ ಮೀಸಲಾತಿಯಡಿ ಈಗಾಗಲೆ 15 ಸಾವಿರ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಹೀಗಾಗಿ ಪ್ರದೇಶದ ಸರ್ವರ ಕಲ್ಯಾಣಕ್ಕೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದರು.