ಬೆಂಗಳೂರು : ವಿರೋಧ ಪಕ್ಷ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇದ್ದರೆ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಕೊಡಿಸಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಧ್ಯಮಗಳಿಗೆ ಭಾನುವಾರ ಅವರು ಪ್ರತಿಕ್ರಿಯೆ ನೀಡಿದರು. ನರೇಗಾ ಯೋಜನೆಯಲ್ಲಿ ಮಾನವ ಕೂಲಿ ದಿನಗಳನ್ನು 100 ರಿಂದ 150ಕ್ಕೆ ಏರಿಸಲಿ. ಅದನ್ನು ಬಿಟ್ಟು ರಾಜಕೀಯ ಹೇಳಿಕೆ ನೀಡುವುದು ಬೇಡ. ಕಪಟ ನಾಟಕ ಬಿಟ್ಟು ಈ ಕೆಲಸಗಳನ್ನು ಮಾಡಲಿ” ಎಂದು ಡಿಸಿಎಂ ಶಿವಕುಮಾರ್ ಅವರು ಹೇಳಿದರು.
ಶಿಕ್ಷಕರ ಕೃತಜ್ಞತಾ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು
ಶಿಕ್ಷಕರು ಎಂದರೆ ವಿದ್ಯಾವಂತರು, ಪ್ರಜ್ಞಾವಂತರು, ಬುದ್ಧಿವಂತರು. ಬೆಂಗಳೂರಿನ ಶಿಕ್ಷಕರು ಪುಟ್ಟಣ್ಣ ಅವರನ್ನು ಗೆಲ್ಲಿಸಿದ್ದೀರಿ. ಇದು ಪುಟ್ಟಣ್ಣನ ಗೆಲುವು ಮಾತ್ರವಲ್ಲ. ಇದು ನಿಮ್ಮ ಗೆಲುವು.
ಎರಡು ಪಕ್ಷಗಳ ಅಪವಿತ್ರ ಮೈತ್ರಿಯನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಕೊಟ್ಟಿದ್ದೀರಿ. ಇದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ನಾವಿಲ್ಲಿಗೆ ಬಂದಿದ್ದೇವೆ. ನಿಮ್ಮ ಬೇಡಿಕೆಗಳನ್ನು ಪುಟ್ಟಣ್ಣ ಅವರು ನಮಗೆ ನೀಡಿದ್ದಾರೆ.
ಈಗ ನಾನು ಮತ್ತು ಸಿಎಂ ಅವರು ನಿಮಗೆ ಕೈ ಮುಗಿದು ಬೆಂಗಳೂರು ಗ್ರಾಮಾಂತರ ಹಾಗೂ ನಗರದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ.
ನೀವೆಲ್ಲರೂ ಒಬ್ಬರು ಹತ್ತು ಪದವೀಧರರನ್ನು ನೋಂದಣಿ ಮಾಡಿಸಿ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನವನ್ನು ನಾವು ಗೆಲ್ಲುವಂತೆ ಮಾಡಬೇಕು. ಆಗ ನಾವು ನೀವು ಹೇಳಿದವರಿಗೆ ಬಿ ಫಾರ್ಮ್ ನೀಡುತ್ತೇವೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದು ನಮಗೆ ಗೊತ್ತಿದೆ.
ನೀತಿಗೆಟ್ಟ ರಾಜಕಾರಣ ನೋಡಿ ಅಸಹ್ಯವಾಗುತ್ತದೆ: ನಾವು ಹಾಗೂ ಸಿದ್ದರಾಮಯ್ಯ ಅವರು ಕೋಮುವಾದಿ ಪಕ್ಷ ಬಿಜೆಪಿ ಸಮಾಜವನ್ನು ಒಡೆಯುತ್ತದೆ ಎಂಬ ಕಾರಣಕ್ಕೆ ಅವರನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿ ಅವರನ್ನು ಐದು ವರ್ಷಗಳ ಕಾಲ ಬೇಷರತ್ತಾಗಿ ಮುಖ್ಯಮಂತ್ರಿ ಮಾಡಿದೆವು. ಈ ಮೈತ್ರಿ ಸರ್ಕಾರವನ್ನು ಕೆಡವಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಅವರನ್ನೇ ಕುಮಾರಸ್ವಾಮಿ ಅವರು ಅಪ್ಪಿಕೊಂಡು ಅವರ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ.
ಇಂತಹ ನೀತಿಗೆಟ್ಟ ರಾಜಕಾರಣ ಕಂಡು ನನಗೆ ಅಸಹ್ಯವಾಗುತ್ತದೆ. ಜನ ಯಾರನ್ನ ನಂಬಬೇಕು ಎಂಬುದು ತಿಳಿಯುತ್ತಿಲ್ಲ. ಯಾರೂ ಏನೇ ಒಂದಾಗಲಿ, ರಾಜ್ಯ ಸಭೆ ಚುನಾವಣೆಯಲ್ಲಿ ನಮ್ಮ ಶಾಸಕರಿಗೆ ತಲಾ 50 ಕೋಟಿ ಕೊಟ್ಟು ಸರ್ಕಾರ ಬೀಳಿಸಲು ಬಿಲ್ಲು ಬಾಣ ತೆಗೆದುಕೊಂಡಿದ್ದರು. ನಮ್ಮ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನು ಬಿಜೆಪಿಗರು ಸಂಪರ್ಕ ಮಾಡಿದ್ದರು. ಆದರೆ ಇದ್ಯಾವುದೂ ಸಾಧ್ಯವಾಗಲಿಲ್ಲ.
ನಿಮ್ಮ ಪಕ್ಷದ ನಾಯಕರು ಸರ್ಕಾರ ಬೀಳಿಸುವ ವಿಚಾರದಲ್ಲಿ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ತಿಳಿಸಲು ಬಯಸುತ್ತೇನೆ. ನಿಮ್ಮ ಪಕ್ಷಗಳಲ್ಲಿ ಎಷ್ಟು ಶಾಸಕರು ಕಡಿಮೆ ಆಗುತ್ತಾರೆ ಎಂದು ನಾನು ಈಗ ಚರ್ಚೆ ಮಾಡುವುದಿಲ್ಲ. ನಾವು ಜನಾಶಿರ್ವಾದದಿಂದ 135 ಹಾಗೂ 3 ಪಕ್ಷೇತರರ ಬೆಂಬಲದೊಂದಿಗೆ ಬಹಳ ಬಲಿಷ್ಟವಾಗಿದ್ದೇವೆ. ಹೀಗಾಗಿ ನಮ್ಮ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲ.
ಶಿಕ್ಷಕರ ಬೇಡಿಕೆ, ಎನ್ ಪಿ ಎಸ್ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ. ನಾವು ಈಗಾಗಲೇ ಜನರಿಗೆ ಕೊಟ್ಟಿರುವ ಭರವಸೆ ಈಡೆರಿಸುತ್ತಿದ್ದೇವೆ. ನಿಮ್ಮ ಬಗ್ಗೆಯೂ ನಮಗೆ ಸಹಾನುಭೂತಿ ಇದೆ. ನೀವು ತಾಳ್ಮೆ ಕಳೆದುಕೊಳ್ಳುವ ಅಗತ್ಯವಿಲ್ಲ. ನಿಮ್ಮನ್ನು ನಾವು ಕೈ ಬಿಡುವುದಿಲ್ಲ.
ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕೆ ಬೆಂಗಳೂರಿಗೆ ಬರುವುದನ್ನು ತಡೆಯಬೇಕು. ಇದಕ್ಕಾಗಿ ಮುಖ್ಯಮಂತ್ರಿಗಳು ಸಿ ಎಸ್ ಆರ್ ನಿಧಿಯಲ್ಲಿ 2 ಸಾವಿರ ಪಬ್ಲಿಕ್ ಶಾಲೆ ತೆರೆಯಲು ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಈ ಚುನಾವಣೆ ನಂತರ ಅದನ್ನು ಕಾರ್ಯರೂಪಕ್ಕೆ ತರುತ್ತೇವೆ.
ಸುರೇಶ್ ಗೆಲ್ಲಿಸುವ ಜವಾಬ್ದಾರಿ ನಿಮ್ಮದು: ಡಿ.ಕೆ ಸುರೇಶ್ ಅವರ ಕ್ಷೇತ್ರದಲ್ಲಿ ಪ್ರತಿ ತಾಲೂಕಿನಲ್ಲಿ ಒಂದೆರಡು ಶಾಲೆ ಕಾಮಗಾರಿ ಆರಂಭವಾಗಿದೆ. ಸಂಸತ್ ಚುನಾವಣೆ ನಿಮ್ಮ ಜವಾಬ್ದಾರಿ. ಸುರೇಶ್ ಅವರು ನಿಮ್ಮ ಅಭ್ಯರ್ಥಿ. ನೀವು ಅನೇಕ ಸಂಸದರನ್ನು ನೋಡಿದ್ದೀರಿ. ಆದರೆ ಸುರೇಶ್ ಅವರು ಪಂಚಾಯ್ತಿ ಸದಸ್ಯನ ರೀತಿಯಲ್ಲಿ ಜನರ ಮಧ್ಯೆ ಇದ್ದು ಕೆಲಸ ಮಾಡುತ್ತಿದ್ದಾರೆ.
ಅವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಧ್ವನಿ ಎತ್ತಿದಕ್ಕೆ ಪ್ರಧಾನ ಮಂತ್ರಿಗಳು, ಹಣಕಾಸು ಸಚಿವ ಸೇರಿದಂತೆ ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ. ನಾವು ನಮ್ಮ ಹಕ್ಕು ಕೇಳಿದರೆ ದೇಶ ಒಡೆಯುತ್ತಾರೆ ಎಂದು ಸುಳ್ಳು ಪ್ರಚಾರ ಮಾಡಿದರು.
ಬಿಜೆಪಿಯವರು ಕಪಟ ನಾಟಕ ಮಾಡುತ್ತಿದ್ದಾರೆ:
ಬಿಜೆಪಿ ಪರವಾದ ರಾಜ್ಯದ 27 ಸಂಸದರು ಈವರೆಗೂ ಕೇಂದ್ರ ಸರ್ಕಾರದ ಬಳಿ ಒಂದು ಮಾತನ್ನು ಆಡಿಲ್ಲ. ಬಿಜೆಪಿಯವರು ಬರಗಾಲದ ವಿರುದ್ಧ ಹೋರಾಟ ಮಾಡುತ್ತಿದ್ದಾರಂತೆ. ಅವರು ಬರ ವಿಚಾರದಲ್ಲಿ ಕಪಟ ನಾಟಕ ಮಾಡುತ್ತಿದ್ದಾರೆ. ನಾವು ಕೂಡ ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದೆವು. ಕುಮಾರಸ್ವಾಮಿ, ದೇವೇಗೌಡರು ಹಾಗೂ ಬಿಜೆಪಿ ಸಂಸದರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತಿಲ್ಲ ಯಾಕೆ? ಕಳಸಾ ಬಂಡೂರಿ ಯೋಜನೆ, ಕೃಷ್ಣಾ ಮೇಲ್ದಂಡೆ ಕಾಮಗಾರಿ ನೋಟಿಫಿಕೇಶನ್ ಹೊರಡಿಸುತ್ತಿಲ್ಲ ಯಾಕೆ?.
ಬರಗಾಲದಲ್ಲಿ ನರೇಗಾ ಯೋಜನೆ ಮೂಲಕ ಮಾನವ ಕೂಲಿ ದಿನಗಳನ್ನು 100ರಿಂದ 150ಕ್ಕೆ ಏರಿಸಲು ಕಾನೂನಿದೆ. ಅದನ್ನು ಮಾಡಲು ಇವರಿಗೆ ಯೋಗ್ಯತೆ ಇಲ್ಲ. ಅವರು ಏನೇ ರಾಜಕಾರಣ ಮಾಡಲಿ ನಮಗೆ ನಿಮ್ಮ ಮೇಲೆ ನಂಬಿಕೆ ಇದೆ.
ಪುಟ್ಟಣ್ಣ ಅವರ ಗೆಲುವಿಗೆ ಸಹಕಾರ ಕೊಟ್ಟು ನಮಗೆ ಶಕ್ತಿ ತುಂಬಿದ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.