ಬೆಂಗಳೂರು: ಜಲಮಂಡಳಿ ವ್ಯಾಪ್ತಿಯ ಪ್ರದೇಶಗಳಿಗೆ 1470 ಎಂಎಲ್‍ಡಿ ಕಾವೇರಿ ನೀರನ್ನು ನಿತ್ಯ ಸರಬರಾಜು ಮಾಡಲಾಗುತ್ತಿದೆ. ಈ ಸರಬರಾಜಿನಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯವಾಗಿಲ್ಲ. ಬೆಂಗಳೂರು ನಗರಕ್ಕೆ ಬರುವ ನೀರು ಬರುತ್ತಿದೆ. ನಗರದಲ್ಲಿ ಸಮರ್ಪಕ ನೀರು ಸರಬರಾಜಿಗೂ ಸಹ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬದ್ಧವಾಗಿದ್ದು ಬೆಂಗಳೂರಿಗರು ಯಾವುದೇ ಸುಳ್ಳುವದಂತಿಗಳಿಗೆ ಕಿವಿಗೊಡಬೇಡಿ ಎಂದು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮನವಿ ಮಾಡಿದ್ದಾರೆ.
ಮಂಡಳಿಯ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರು ನಗರಕ್ಕೆ 1.54ಟಿಎಂಸಿ ನೀರು ತಿಂಗಳಿಗೆ ಅಗತ್ಯವಾಗಿದ್ದು,ಮಾರ್ಚ್ ತಿಂಗಳಿಂದ ಜುಲೈ ಅಂತ್ಯದವರೆಗೆ 8 ಟಿಎಂಸಿ ಅಗತ್ಯವಿದೆ. ಬೆಂಗಳೂರು ಸೇರಿದಂತೆ ಕಾವೇರಿ ನೀರಿನ ಮೇಲೆ ಅವಲಂಬನೆಯಾಗಿರುವ ನಗರಗಳಿಗೆ ಜುಲೈ ಅಂತ್ಯದವರೆಗೆ 17 ಟಿಎಂಸಿ ನೀರು ಬೇಕಾಗಿದ್ದು,ಕಾವೇರಿ ಜಲಾಶಯಗಳಲ್ಲಿ 34 ಟಿಎಂಸಿ ನೀರು ಸಂಗ್ರಹವಿದೆ. ಬೇಡಿಕೆಗಿಂತ ಎರಡುಪಟ್ಟು ನೀರು ಸಂಗ್ರಹವಿದ್ದು;ಯಾವುದೇ ರೀತಿಯ ಆತಂಕ ಬೇಡ. ನೀರನ್ನು ನಗರಕ್ಕೆ ಸಮರ್ಪಕವಾಗಿ ಸರಬರಾಜು ಮಾಡಲು ಬದ್ಧವಾಗಿದ್ದೇವೆ ಎಂದರು.
ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು,ನಿತ್ಯ 2100 ಎಂಎಲ್‍ಡಿ ನೀರು ಅಗತ್ಯವಿದೆ(ಓರ್ವ ಮನುಷ್ಯನಿಗೆ ನಿತ್ಯದ ಸರಾಸರಿ 150 ಲೀಟರ್ ನೀರು). 1450 ಎಂಎಲ್‍ಡಿ ಕಾವೇರಿ ನೀರು ನಿತ್ಯ ಬರುತ್ತಿದ್ದು,ಅದನ್ನು ನಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಸಮರ್ಪಕವಾಗಿ ಸರಬರಾಜು ಮಾಡಲಾಗುತ್ತಿದೆ.
ಬೆಂಗಳೂರು ಹೊರವಲಯದ 110 ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಉಳಿದ 650 ಎಂಎಲ್‍ಡಿ ನೀರಿನ ಸಮಸ್ಯೆ ಉಂಟಾಗಿದೆ;ಅಂತರ್ಜಲ ಮಟ್ಟ ಕುಸಿತಕ್ಕೆ ನಾವೆಲ್ಲರು ಕಾರಣರಾಗಿದ್ದೇವೆ.ನಗರದ ಹೊರವಲಯದ ಅಪಾರ್ಟ್‍ಮೆಂಟ್‍ಗಳು ಬೆಳೆದಿದ್ದು,ಇವರ್ಯಾರು ಸಹ ಕಾವೇರಿ ನೀರಿನ ಮೇಲೆ ಅವಲಂಬನೆಯಾಗಿರಲಿಲ್ಲ;ಬೋರವೆಲ್‍ಗಳನ್ನು ನೆಚ್ಚಿಕೊಂಡಿದ್ದರು;ಈಗ ಅಂತರ್ಜಲಮಟ್ಟ ಕುಸಿತದಿಂದ ಅವರಿಗೆ ಸಮಸ್ಯೆ ಉಂಟಾಗಿದೆ ಎಂದರು.
ಬೋರವೆಲ್‍ಗಳ ಮೇಲೆ ಅವಲಂಬಿಸಿರುವವರ ಸಮಸ್ಯೆ ಬಗೆಹರಿಸಲು ಮಂಡಳಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಐಐಎಸ್‍ಸಿ ಸಹಯೋಗದಲ್ಲಿ ಅಂತರ್ಜಲಮಟ್ಟ ಹೆಚ್ಚಳಕ್ಕೆ ಮಂಡಳಿ ಒತ್ತು: ಬೆಂಗಳೂರು ನಗರದಲ್ಲಿ ಕುಸಿದಿರುವ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಮಂಡಳಿಯು 1300 ಎಂಎಲ್‍ಡಿ ಸಂಸ್ಕರಿಸಿದ ಗುಣಮಟ್ಟದ ನೀರನ್ನು ನಗರದಲ್ಲಿ ನೀರಿಲ್ಲದೇ ಒಣಗಿರುವ ಕೆರೆಗಳಿಗೆ ತುಂಬಿಸಲು ಉದ್ದೇಶಿಸಿದೆ ಎಂದು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ವಿವರಿಸಿದರು.
ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ಸಹಯೋಗದೊಂದಿಗೆ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ನಾಯಂಡಹಳ್ಳಿ ಕೆರೆ, ಚಿಕ್ಕಬಾಣವಾರ ಕೆರೆ, ವರ್ತೂರು ಕೆರೆ,ಅಗರಂ ಕೆರೆ ಸೇರಿದಂತೆ ನಗರದಲ್ಲಿ ನೀರಿಲ್ಲದೆ ಬತ್ತಿರುವ 6 ಕೆರೆಗಳನ್ನು ತುಂಬಿಸಲಾಗುವುದು;ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು,ಸುತ್ತಮುತ್ತಲಿನ ಬಡಾವಣೆಗಳ ಅನುಕೂಲವಾಗಲಿದೆ. ಇದರ ಜೊತೆಗೆ ಆ ಕೆರೆಗಳ ಪಕ್ಕದಲ್ಲಿಯೇ ಫಿಲ್ಟರ್ ಬೋರ್‍ಗಳನ್ನು ಅಳವಡಿಸಲಾಗುವುದು ಮತ್ತು ವಾಟರ್ ಪ್ಲಾಂಟ್ ಅಳವಡಿಸಿ ಪರಿಶೀಲಿಸಿ ಯೋಗ್ಯವಾದ ನೀರನ್ನು ಜನರಿಗೆ ಒದಗಿಸಲು ಕ್ರಮವಹಿಸಲಾಗುವುದು. ದೇವನಹಳ್ಳಿಯ ಕೋಟೆ ಬಳಿಯ ಕೆರೆ ಬಳಿ ಇದೇ ರೀತಿ ನೀರು ಸಂಸ್ಕರಿಸಿ ಯೋಗ್ಯವಾದ ನೀರನ್ನು ದೇವನಹಳ್ಳಿ ನಗರಕ್ಕೆ ಸರಬರಾಜು ಮಾಡಲಾಗುತ್ತಿರುವುದನ್ನು ಅವರು ವಿವರಿಸಿದರು.
582 ಕಡೆ ಸಿಂಟೆಕ್ಸ್ ಟ್ಯಾಂಕ್‍ಗಳ ಅಳವಡಿಕೆ: ಬೆಂಗಳೂರು ನಗರದ ಕೊಳಗೇರಿ ಪ್ರದೇಶ, ಜನನಿಬೀಡ ಪ್ರದೇಶ, ತಗ್ಗು ಮತ್ತು ಎತ್ತರದ ಪ್ರದೇಶಗಳಲ್ಲಿ 1 ಸಾವಿರದಿಂದ 3 ಸಾವಿರ ಲೀಟರ್ ಸಾಮಥ್ರ್ಯದ 582 ಸಿಂಟೆಕ್ಸ್ ಟ್ಯಾಂಕ್‍ಗಳನ್ನು ಮಂಡಳಿ ವತಿಯಿಂದ ಅಳವಡಿಸಲಾಗಿದ್ದು,ನಿತ್ಯ ಎರಡು ಬಾರಿ ಸದರಿ ಟ್ಯಾಂಕ್‍ಗಳನ್ನು ಭರ್ತಿ ಮಾಡಲಾಗುತ್ತದೆ;ಬೇಡಿಕೆ ಪರಿಶೀಲಿಸಿ ಹೆಚ್ಚು ಬಾರಿಯೂ ತುಂಬಿಸಲು ಕ್ರಮವಹಿಸಲಾಗಿದೆ. ಈ ಪ್ರದೇಶದಲ್ಲಿ ವಾಸವಾಗಿರುವ ಜನರು ಸಿಂಟೆಕ್ಸ್ ಟ್ಯಾಂಕ್‍ಗಳ ಮೂಲಕ ಕುಡಿಯುವ ನೀರನ್ನು ಉಚಿತವಾಗಿ ಪಡೆಯುತ್ತಿದ್ದಾರೆ ಎಂದು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ವಿವರಿಸಿದರು.
ಬೆಂಗಳೂರು ಜಲಮಂಡಳಿಯು 6 ಸಾವಿರ ಲೀಟರ್ ಸಾಮಥ್ರ್ಯದ 68 ಖಾಸಗಿ ನೀರಿನ ಟ್ಯಾಂಕರ್‍ಗಳನ್ನು ಬಾಡಿಗೆಗೆ ತೆಗೆದುಕೊಂಡು ಸಿಂಟೆಕ್ಸ್ ಟ್ಯಾಂಕ್‍ಗಳಿಗೆ ನೀರನ್ನು ಮರುಪೂರಣ ಮಾಡಲಾಗುತ್ತಿದೆ ಎಂದು ವಿವರಿಸಿದ ಅವರು ಜನನಿಬಿಡ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲು 94 ತಾತ್ಕಾಲಿಕ ಮೊಬೈಲ್ ನೀರಿನ ಟ್ಯಾಂಕರ್‍ಗಳ ವ್ಯವಸ್ಥೆ ಮಾಡಲಾಗಿದೆ.
ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ ಪ್ರಮುಖ ಗ್ರಾಹಕರುಗಳೊಂದಿಗೆ ಸಭೆ ನಡೆಸಿ ಅವರುಗಳಿಗೆ ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುವಂತೆ ಹಾಗೂ ಸಂಸ್ಕರಿಸಿದ ನೀರನ್ನು ಇತರೇ ಉದ್ದೇಶಗಳಿಗೆ ಬಳಸುವಂತೆ ತಿಳಿಸಲಾಗಿದೆ ಎಂದು ಅವರು ವಿವರಿಸಿದರು.
ಕಾವೇರಿ-5ನೇ ಹಂತದ ಯೋಜನೆ ಮೇ 15ಕ್ಕೆ ಪೂರ್ಣ: ಕಾವೇರಿ 5ನೇ ಹಂತದ ಕಾಮಗಾರಿ ಕ್ಷೀಪ್ರಗತಿಯಲ್ಲಿ ಜರುಗುತ್ತಿದ್ದು, ಮೇ 15ರೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. 775 ಸಾಮಥ್ರ್ಯದ ಈ ಕಾವೇರಿ 5ನೇ ಹಂತದ ಯೋಜನೆ ಮೂಲಕ 110 ಹಳ್ಳಿಗಳ ವ್ಯಾಪ್ತಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ವಿವರಿಸಿದರು.
ಕಾವೇರಿ 5ನೇ ಹಂತದ ಯೋಜನೆ ಜಾರಿಯಾದ ನಂತರ ಬೆಂಗಳೂರು ನಗರಕ್ಕೆ ಒಟ್ಟು 2220 ಎಂಎಲ್‍ಡಿ ಬರಲಿದೆ ಎಂದು ಅವರು ತಿಳಿಸಿದರು.
110 ಹಳ್ಳಿಗಳ ವ್ಯಾಪ್ತಿಗೆ ಬೆಂಗಳೂರು ಜಲಮಂಡಳಿ ವತಿಯಿಂದ 6 ಸಾವಿರ ಲೀಟರ್ ಸಾಮಥ್ರ್ಯದ 79 ಖಾಸಗಿ ಟ್ಯಾಂಕರ್‍ಗಳನ್ನು ವಲಯವಾರು ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ಈ ಟ್ಯಾಂಕರ್‍ಗಳಿಗೆ ಬೆಂಗಳೂರು ಜಲಮಂಡಳಿಯ ಫಿಲ್ಲಿಂಗ್ ಪಾಯಿಂಟ್ ಮುಖಾಂತರ ಕುಡಿಯುವ ನೀರು ಒದಗಿಸಲಾಗುತ್ತಿದ್ದು,ಇನ್ನೂ ಅವಶ್ಯವಿರುವಷ್ಟು ಟ್ಯಾಂಕರ್‍ಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
110 ಹಳ್ಳಿಗಳಿಗೆ ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‍ಎಸ್‍ಬಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಮಂಡಳಿ ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಐಐಎಸ್‍ಸಿ ತಜ್ಞರಾದ ಪ್ರೊ.ವಿಶ್ವನಾಥ, ಚೀಪ್ ಎಂಜನಿಯರ್ ಜಯಪ್ರಕಾಶ ಮತ್ತಿತರರು ಇದ್ದರು.