ಮಂಡ್ಯ: ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ವೆಂಕಟರಮಣೇಗೌಡ ಅಂದರೆ ಸ್ಟಾರ್ ಚಂದ್ರು ಎಂಬುವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಹಾಗಾದ್ರೇ ಸ್ಟಾರ್ ಚಂದ್ರು ಎಂದೇ ಕರೆಯಲ್ಪಡುವ ವೆಂಕಟರಮಣೇಗೌಡ ಬಗ್ಗೆ ಇಲ್ಲಿದೆ ಪರಿಚಯ.
ಜನಸಮೂಹದಲ್ಲಿ ’ಸ್ಟಾರ್ ಚಂದ್ರು’ ಎಂದೇ ಜನಪ್ರಿಯರಾಗಿರುವ ವೆಂಕಟರಮಣೇಗೌಡ ಅವರು ಮಂಡ್ಯ ಜಿಲ್ಲೆಯ ಸಾಮಾನ್ಯ ರೈತಕುಟುಂಬದಲ್ಲಿ ಜನಿಸಿ ಸ್ವಂತ ದುಡಿಮೆಯಿಂದ ಉದ್ಯಮಿಯಾಗಿ ಬೆಳೆದ ಕ್ರಿಯಾಶೀಲ ಸಾಹಸಿ. ಹಳ್ಳಿಗಾಡಿನಲ್ಲಿ ವಿದ್ಯಾಭ್ಯಾಸ ಮಾಡಿ ಬೆಂಗಳೂರು ನಗರದಲ್ಲಿ ಬದುಕು ಕಟ್ಟಿಕೊಂಡು ಸಾವಿರಾರು ಜನರಿಗೆ ಉದ್ಯೋಗಕಲ್ಪಿಸಿದ ಅವರ ಬದುಕು ಆಧುನಿಕ ಕಾಲದ ಉದ್ಯಮಿಗಳ ಯಶಸ್ಸಿನ ಕತೆ. ಉದ್ಯೋಗ ನಿಮಿತ್ತ ರಾಜಧಾನಿಗೆ ಬಂದರೂ ತಮ್ಮ ಹುಟ್ಟಿದೂರಿನ ’ಕಳ್ಳುಬಳ್ಳಿ’ ಸಂಬಂಧವನ್ನು ಉಳಿಸಿಕೊಂಡಿರುವ ಅಪರೂಪದ ವ್ಯಕ್ತಿ.
ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಜನಿಸಿದ್ದು ದಿನಾಂಕ 24-06-1965ರಂದು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ಬೆಳ್ಳೂರು ಹೋಬಳಿಗೆ ಸೇರಿದ ಕನ್ನಾಘಟ್ಟ ಗ್ರಾಮದ ರೈತಕುಟುಂಬದಲ್ಲಿ. ತಂದೆ ಲೇಟ್ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮ. ಈ ದಂಪತಿಯ ಮೂವರು ಗಂಡು ಮಕ್ಕಳಲ್ಲಿ ಮೊದಲನೆಯವರು ಕೆ.ಎಚ್ ಪುಟ್ಟಸ್ವಾಮಿಗೌಡ. ಎರಡನೆಯವರು ಶ್ರೀ ಕೆ.ಎಚ್ ವೆಂಕಟೇಶ್. ಮೂರನೆಯವರೇ ಶ್ರೀ ವೆಂಕಟರಮಣೇಗೌಡ, ಅಂದರೆ ನಮ್ಮ ’ಸ್ಟಾರ್ ಚಂದ್ರು. ಇವರ ಜೊತೆಗೆ ನಾಲ್ವರು ಸೋದರಿಯರಿದ್ದ ಒಟ್ಟು ಕುಟುಂಬದಲ್ಲಿ ಬೆಳೆದವರು. ಇವರದು ಪತ್ನಿ ಶ್ರೀಮತಿ ಕುಸುಮ ಮತ್ತು ಇಬ್ಬರು ಮಕ್ಕಳ ತುಂಬು ಕುಟುಂಬ.
ಆದಿಚುಂಚನಗಿರಿ ತಪೋಭೂಮಿಯ ಪರಿಸರದಲ್ಲಿ ಚಂದ್ರು ಅವರ ಬಾಲ್ಯ ಕಳೆಯಿತು. ಬೆಳ್ಳೂರು ಹೋಬಳಿಯ ಅಗಚಹಳ್ಳಿ ಮತ್ತು ಬೆಳ್ಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮುಗಿಸಿ ಆದಿಚುಂಚನಗಿರಿಯಲ್ಲಿ ಪಿ ಯು ಸಿ ಶಿಕ್ಷಣ ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಅವರು ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿ ಬಿ.ಎಸ್ಸಿ ಪದವಿ ಪಡೆದರು. ತುಂಬ ಕುಟುಂಬದ ನಾಗಮಂಗಲ ತಾಲ್ಲೂಕಿನ ಕನ್ನಾಘಟ್ಟದ ಹೊನ್ನೆಗೌಡರ ಮಗ ವೆಂಕಟರಮಣೇಗೌಡ, ’ಸ್ಟಾರ್ ಚಂದ್ರು’ಆಗಿ ಉದ್ಯಮಿಯಾಗಿ ಬೆಳೆದಿದ್ದು, ಒಬ್ಬ ಪ್ರಾಮಾಣಿಕ ವ್ಯಕ್ತಿಯ, ಶ್ರಮಜೀವಿಯ ಸಾಹಸಗಾಥೆ. ಪದವಿ ಶಿಕ್ಷಣ ಪಡೆದ ನಂತರ ಸರ್ಕಾರಿ ಉದ್ಯೋಗ ಕೈಬೀಸಿ ಕರೆದರೂ ಅದಕ್ಕೆ ಒಲಿಯದೆ ಹಿರಿಯ ಅಣ್ಣ ಕೆ ಎಚ್ ಪುಟ್ಟಸ್ವಾಮಿಗೌಡ ಅವರು ಆರಂಭಿಸಿದ್ದ ಉದ್ದಿಮೆಯಲ್ಲಿ ಕೈಜೋಡಿಸಿದರು.
ಪ್ರಾಮಾಣಿಕತೆ, ಸಜ್ಜನಿಕೆ ಮತ್ತು ಶ್ರಮದ ಆಧಾರದಿಂದ ಉದ್ದಿಮೆಗಳನ್ನು ಬೆಳೆಸಿ ಯಶಸ್ಸು ಕಂಡ ವೆಂಕಟರಮಣೇಗೌಡ, ನಮ್ಮ ’ಸ್ಟಾರ್ ಚಂದ್ರು’ ತಮ್ಮ ಅನುಭವಗಳನ್ನೇ ಬಂಡವಾಳ ಮಾಡಿಕೊಂಡು ತಮ್ಮದೇ ಸ್ವತಂತ್ರ ಉದ್ದಿಮೆ ’ಸ್ಟಾರ್ ಇನ್ಫ್ರಾಟೆಕ್’ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದರು. ಅದನ್ನು ಯಶಸ್ವಿಯಾಗಿ ಮುನ್ನಡೆಸಿ ’ಸ್ಟಾರ್ ಚಂದ್ರು’ ಎಂಬ ಹೆಸರಿನಿಂದ ಉದ್ಯಮಕ್ಷೇತ್ರದಲ್ಲಿ ಮನೆಮಾತಾದರು.
ತಮ್ಮ ಧೈರ್ಯ, ಮುನ್ನೋಟ ಮತ್ತು ಶ್ರಮದಿಂದ ಬೆಳೆಸಿದ ’ಸ್ಟಾರ್ ಇನ್ಫ್ರಾಟೆಕ್’ ಸಂಸ್ಥೆಯು ಈಗ ಬೆಂಗಳೂರಿನಲ್ಲಿ ಸುಮಾರು ನಾಲ್ಕು ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಕರ್ನಾಟಕ ಸರ್ಕಾರದ ಅನೇಕ ನಿರ್ಮಾಣದ ಕಾಮಗಾರಿಗಳನ್ನು, ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಿರುವ ಸಂಸ್ಥೆಯು ರಾಜ್ಯದ ಅಭಿವೃದ್ಧಿಯಲ್ಲಿ ತನ್ನದೇ ಪಾಲನ್ನು ನೀಡಿದೆ. ಗುಣಮಟ್ಟದ ಕಾಮಗಾರಿ, ಸಮರ್ಥ ಆರ್ಥಿಕ ನಿರ್ವಹಣೆ, ಸಮಯಮಿತಿಯಲ್ಲಿ ಯೋಜನೆಗಳ ಅನುಷ್ಠಾನದ ಬದ್ಧತೆಗೆ ಹೆಸರಾಗಿರುವ ಸಂಸ್ಥೆಯ ಯಶಸ್ಸಿಗೆ ಚಂದ್ರು ಅವರ ಮನ್ನೋಟ ಮತ್ತು ಕ್ರಿಯಾಶೀಲ ನಾಯಕತ್ವವೇ ಆಧಾರ. ಅವರು ಈಗ ಚಂದ್ರಣ್ಣ ಮಾತ್ರವಾಗಿ ಉಳಿದಿಲ್ಲ. ’ಸ್ಟಾರ್ ಚಂದ್ರು’ ಎಂದೇ ಖ್ಯಾತಿಯಾಗಿದ್ದಾರೆ.
ಉದ್ಯಮರಂಗದಲ್ಲಿ ಯಶಸ್ಸು ಪಡೆದರೂ ತಮ್ಮ ಬೇರುಗಳನ್ನು ಮರೆಯದ ’ಸ್ಟಾರ್ ಚಂದ್ರು’ ಅವರು ತಮ್ಮ ಹಳ್ಳಿ ಮತ್ತು ಜಿಲ್ಲೆಯ ಕಳ್ಳುಬಳ್ಳಿ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದಾರೆ. ತಮ್ಮ ಗ್ರಾಮದಲ್ಲಿ ಸೋದರರ ಜೊತೆಗೂಡಿ ಗ್ರಂಥಾಲಯ, ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುವುದರ ಜೊತೆಗೆ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.
ಜನರ ಕಷ್ಟಕ್ಕೆ ಮಿಡಿವ, ಹಿರಿಯರನ್ನು ಕಂಡರೆ ನಮಿಸುವ, ಜನಸಾಮಾನ್ಯರಲ್ಲಿ ಜನಸಾಮಾನ್ಯನಾಗಿ ಬೆರೆಯುವ ಗುಣವುಳ್ಳ ’ಸ್ಟಾರ್ ಚಂದ್ರು’ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರೂ ಪ್ರಚಾರದಿಂದ ದೂರ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಅವರ ಬದುಕು ಅರಳಲು ನೆರವಾಗಿದ್ದಾರೆ. ಮಾನಸಿಕ ಅಸ್ವಸ್ಥ ಮಕ್ಕಳ ಕೇಂದ್ರಕ್ಕೆ ಆಸರೆಯಾಗಿ ನಿಂತಿದ್ದಾರೆ. ಅನೇಕ ಸಂಘ ಸಂಸ್ಥೆಗಳ ಮಾನವೀಯ ಚಟುವಟಿಕೆಗಳಿಗೆ ಚಂದ್ರು ಅವರ ಅಭಯಹಸ್ತವಿದೆ.
ಕೊರೋನಾ ಸಮಯದಲ್ಲಿ ಅವರು ಮೆರೆದ ಮಾನವೀಯ ಕಾಳಜಿ ಎಲ್ಲ ಉದ್ಯಮಿಗಳಿಗೂ ಆದರ್ಶಪ್ರಾಯ, ಅನುಕರಣೀಯ. ತಮ್ಮ ಉದ್ಯಮದಲ್ಲಿ ಭಾಗಿಯಾಗಿದ್ದವರನ್ನು ಅವರು ಕಾರ್ಮಿಕರೆಂದು ಭಾವಿಸುವುದಿಲ್ಲ. ಉದ್ಯಮದ ಪ್ರಗತಿಯ ಪಾಲುದಾರರೆಂದು ಪರಿಗಣಿಸಿದ್ದಾರೆ. ಕೊರೋನಾ ಕಾಲದಲ್ಲಿ ಕೆಲಸ ಸ್ಥಗಿತಗೊಂಡಾಗ ಮತ್ತೆ ಆರಂಭವಾಗುವವರೆಗೆ ಅವರಿಗೆ ವೇತನ ನೀಡುವ ಮೂಲಕ ಅವರ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಅಲ್ಲದೆ ಬೃಹತ್ ಮಟ್ಟದಲ್ಲಿ ಉಪಹಾರಗೃಹವೊಂದನ್ನು ನಿರ್ವಹಿಸಿ ಹಸಿವು ನೀಗಿಸುವ ದಾಸೋಹವನ್ನು ಮಾಡಿದ್ದಾರೆ.
ತಮ್ಮ ಸಹೊದ್ಯೋಗಿಗಳಿಗೆ ಅವರು ನೀಡಿರುವ ನೆರವು ಮತ್ತು ಕಾರ್ಮಿಕರು ಪ್ರತಿಯಾಗಿ ನೀಡುತ್ತಿರುವ ಸಹಕಾರದಿಂದ ಅವರ ಉದ್ಯಮವು ಪ್ರೀತಿ ವಿಶ್ವಾಸದ ಭದ್ರ ಬುನಾದಿಯ ಮೇಲೆ ಗಟ್ಟಿಯಾಗಿ ನಿಂತಿದೆ. ಉದ್ಯಮಿ-ಕಾರ್ಮಿಕರ ಪರಸ್ಪರ ವಿಶ್ವಾಸದ ಮೂಲಕ ಉದ್ಯಮ ಬೆಳೆಸುವ ಪ್ರಯೋಗವು ಕಂಡಿರುವ ಯಶಸ್ಸು, ಉದ್ಯಮ ಸಂಸ್ಕೃತಿಗೆ ’ಸ್ಟಾರ್ ಚಂದ್ರು’ ಅವರು ನೀಡಿರುವ ಒಂದು ಅಪೂರ್ವವಾದ ಕೊಡುಗೆ. ಆದರೆ ಬಲಗೈಯ್ಯಲ್ಲಿ ನೀಡುವುದು ಎಡಗೈಗೆ ತಿಳಿಯಬಾರದೆನ್ನುವ ಅಪೂರ್ವ ಮಾನವೀಯ ಕಾಳಜಿಯಿಂದ ಇಂಥ ಕಾರ್ಯಗಳಿಗೆ ಎಲ್ಲೂ ಪ್ರಚಾರ ಬಯಸದೆ ಅದೊಂದು ’ಕರ್ತವ್ಯ’ ಎಂಬ ರೀತಿಯಲ್ಲಿ ಅವರು ಪಾಲಿಸಿಕೊಂಡು ಬಂದಿದ್ದಾರೆ.
ರೈತರ ಮಕ್ಕಳು ಉದ್ಯಮಿಗಳಾಗಿ ಬೆಳೆಯಬೇಕೆಂಬುದು ಚಂದ್ರು ಅವರ ದೊಡ್ಡ ಕನಸು. ಅವರು ಕೇವಲ ಉದ್ಯೋಗಿಗಳಾಗದೆ ಉದ್ಯಮಿಗಳಾದರೆ ಹಲವರಿಗೆ ಉದ್ಯೋಗದಾತರಾಗಬಹುದೆಂಬ ಉದ್ದೇಶದಿಂದ ಅವರು ಯುವಕರನ್ನು ಆ ನಿಟ್ಟಿನಲ್ಲಿ ತರಬೇತಿಗೊಳಿಸಲು ಕಾರ್ಯಾಗಾರ, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳ ಆಯೋಜನೆಗೆ ಬೆಂಬಲವಾಗಿ ನಿಂತಿದ್ದಾರೆ. ಇಲ್ಲಿಯೂ ಸಹ ಅವರು ಮುನ್ನೆಲೆಗೆ ಬರದೆ ನೇಪಥ್ಯದಲ್ಲಿಯೇ ಉಳಿದು ಕಾರ್ಯಪ್ರವೃತ್ತರಾಗಿದ್ದಾರೆ.
ಸದಾ ಒಳಿತನ್ನೇ ಬಯಸಿ ತಮ್ಮ ಉದ್ಯಮ ಮತ್ತು ಬದುಕಿನಲ್ಲಿ ರುಚಿಶುದ್ಧ ಮೌಲ್ಯಗಳನ್ನು ಕಾಪಾಡಿಕೊಂಡು ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ’ಸ್ಟಾರ್ ಚಂದ್ರು’ ಅವರು ಮೂಲಭೂತವಾಗಿ ಕೌಟುಂಬಿಕ ವ್ಯಕ್ತಿ. ಎಷ್ಟೇ ಎತ್ತರಕ್ಕೆ ಉದ್ಯಮದಲ್ಲಿ ಬೆಳೆದಿದ್ದರೂ ಕೌಟುಂಬಿಕ ಬಾಂಧವ್ಯದ ಬೆಸುಗೆಯ ಮಹತ್ವವನ್ನು ಅರಿತಿರುವ ಚಂದ್ರು ಅವರು ತಮ್ಮ ಸೋದರರು, ಬಂಧು-ಬಾಂಧವರೊಡನೆ ಹಾಗು ಅಪಾರವಾದ ಸ್ನೇಹ ಬಳಗದೊಡನೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.
ತಮ್ಮ ಒಬ್ಬ ಸೋದರ ಉದ್ಯಮಿಯಾಗಿ ಮತ್ತು ಮತ್ತೊಬ್ಬರು ಕೃಷಿಕರಾಗಿ ಯಶಸ್ಸು ಕಂಡಿದ್ದರೂ ಅವರ ಕುಟುಂಬಕ್ಕೆ ರಾಜಕೀಯ ನಂಟು ಹೊಸದಲ್ಲ. ಹಿರಿಯ ಅಣ್ಣ ಶ್ರೀ ಕೆ.ಎಚ್ ಪುಟ್ಟಸ್ವಾಮಿಗೌಡರು 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೌರಿಬಿದನೂರು ವಿಧಾನಸಭಾಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ. ಅವರ ಅಳಿಯ ಶರತ್ ಬಚ್ಚೇಗೌಡ ಸಹ ಹಾಲಿ ಶಾಸಕರಾಗಿದ್ದರೆ. ಬೀಗರಾದ ಹಿರಿಯ ರಾಜಕಾರಣಿ ಬಿ ಎನ್ ಬಚ್ಚೇಗೌಡ ಅವರು ಸಂಸತ್ ಸದಸ್ಯರು.
ಈ ಹಿನ್ನೆಲೆಯಲ್ಲಿ ಉದ್ಯಮಿಯಾಗಿ ಯಶಸ್ಸು ಕಂಡಿರುವ ವೆಂಕಟರಮಣೇಗೌಡ, -ನಮ್ಮ ಸ್ಟಾರ್ ಚಂದ್ರು,- ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ಮೂಲಕ ಮಂಡ್ಯ ನೆಲದ ಋಣವನ್ನು ತೀರಿಸಲು ಬಂದಿದ್ದಾರೆ. ಮಂಡ್ಯದ ಮಣ್ಣಿನ ಗುಣಗಳಾದ ನೇರ ನುಡಿ, ನೇರ ನಡೆ, ಸಜ್ಜನಿಕೆ, ಹೃದಯವಂತಿಕೆ, ಕಷ್ಟಗಳಿಗೆ ಸ್ಪಂದಿಸುವ ಗುಣಗಳನ್ನು ನಂಬಿ ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ದುಡಿಯಲು ಉತ್ಸುಕರಾಗಿದ್ದಾರೆ. ಅವರು ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಮಂಡ್ಯ ಜಿಲ್ಲೆಯನ್ನು ಉದ್ದಿಮೆಯ ತವರೂರಾಗಿ ಮಾಡಲು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ’ಸ್ಟಾರ್ ಚಂದ್ರು’ (ವೆಂಕಟರಮಣೇಗೌಡ) ತಮ್ಮದೇ ಕನಸು ಕಂಡಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
ನೇಪಾಳದಲ್ಲೂ ‘UPI’ ಆರಂಭ ; ಭಾರತೀಯರು ಈಗ ‘QR ಕೋಡ್’ ಬಳಸಿ ನೇಪಾಳಿ ವ್ಯಾಪಾರಿಗಳಿಗೆ ಪಾವತಿಸಬಹುದು