ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು ರಾಜ್ಯ ಬಜೆಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಸಶಕ್ತೀಕರಣವನ್ನು ಡಿಜಿಟಲೀಕರಣಗೊಳಿಸೋ ಸಂಬಂಧ ಪ್ರತಿ ಅಂಗವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ನೀಡಲಾಗುತ್ತಿದೆ.
ರಾಜ್ಯ ಸರ್ಕಾರದಿಂದ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಡಿಜಿಟಲೀಕರಣಗೊಂಡ ಸಶಕ್ತಿಕರಣದ ಭಾಗವಾಗಿ ರಾಜ್ಯದ ಪ್ರತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ನೀಡುವುದಾಗಿ ಹೇಳಿದೆ.
ಕುಟುಂಬವೊಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಬೇಕಾದರೆ ಅಲ್ಲಿ ಪುರುಷರಷ್ಟೇ ಮಹಿಳೆಯರ ಪಾತ್ರವೂ ಮುಖ್ಯ. ರಾಜ್ಯ ಸರ್ಕಾರ ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಕೋಟ್ಯಂತರ ತಾಯಂದಿರ ಕೈಗಳಿಗೆ “ಗೃಹಲಕ್ಷ್ಮಿ”ಯ ಬಲ ನೀಡಿದೆ, ಶಿಕ್ಷಣ ಮತ್ತು ಉದ್ಯೋಗ ನಿಮಿತ್ತ ನಿತ್ಯ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ” ತುಂಬಿದೆ, ಸ್ವಂತ ಉದ್ಯೋಗ ಆರಂಭಿಸುವ ಅಕ್ಕ ತಂಗಿಯರ ಪ್ರಯತ್ನಕ್ಕೆ ಆರ್ಥಿಕ ನೆರವು ನೀಡಿದೆ, ಅಂಗನವಾಡಿ ಕಾರ್ಯಕರ್ತೆಯರ ಪ್ರೋತ್ಸಾಹಧನ ಹೆಚ್ಚಿಸಿ ಅವರ ಜೀವನಮಟ್ಟ ಸುಧಾರಿಸಿದೆ, ದೇವದಾಸಿ ವೃತ್ತಿ ತೊರೆದವರು, ಲಿಂಗತ್ವ ಅಲ್ಪಸಂಖ್ಯಾತರ ಘನತೆಯ ಬದುಕಿಗೆ ಬೆಂಬಲವಾಗಿ ನಿಂತಿದೆ ಎಂದು ತಿಳಿಸಿದೆ.
ಎಳೆಯ ಕಂದಮ್ಮನಿಂದ ಹಿಡಿದು ವಯೋವೃದ್ಧೆಯ ವರೆಗೆ ಪ್ರತಿಯೊಬ್ಬ ಹೆಣ್ಣು ರಾಜ್ಯ ಸರ್ಕಾರದ ಒಂದಿಲ್ಲೊಂದು ಯೋಜನೆಯ ಫಲಾನುಭವಿಯಾಗಿದ್ದಾರೆಂಬುದು ಹೆಮ್ಮೆಯ ವಿಷಯ. ರಾಜ್ಯ ಸರ್ಕಾರದ ಮಹಿಳಾಸ್ನೇಹಿ ಯೋಜನೆಗಳು ನಾಡಿನ ಹೆಣ್ಣುಮಕ್ಕಳ ಪಾಲಿಗೆ ಅನುದಿನವೂ ಮಹಿಳಾ ದಿನವನ್ನಾಗಿಸಿದೆ.