ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ನಕ್ಷೆಯಲ್ಲಿ ಜಮೀನು ಇರದೇ ರೈತರು ಕೃಷಿ ನಿರತರಾಗಿದ್ದಾರೆ. ಈ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅದೇ ನಕ್ಷೆಯಿಲ್ಲದ ಜಮೀನುಗಳಲ್ಲಿ ಕೃಷಿ ನಿರತ ರೈತರಿಗೆ ಸಾಗುವಳಿ ಚೀಟಿ ನೀಡಲು ಮುಂದಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ರಾಜ್ಯದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ವಿಚಾರದಲ್ಲಿ ದಶಕಗಳಿಂದಲೂ ಸಮಸ್ಯೆಗಳಿವೆ. ಅರಣ್ಯಭೂಮಿಯ ಗಡಿಯನ್ನು ಗುರುತಿಸದ ಕಾರಣ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿರುವ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್‌ಟಿಸಿ, ಪೋಡಿ, ಫೌತಿಖಾತೆ ಸೇರಿದಂತೆ ಈ ಭಾಗದಲ್ಲಿರುವವರಿಗೆ ಕಂದಾಯ ಇಲಾಖೆ ಸೇವೆಗಳನ್ನು ತಲುಪಿಸುವುದುನೀಡುವುದು ದುಸ್ಥರವಾಗಿದೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದೂ ಸಹ ಸವಾಲಿನ ಕೆಲಸವಾಗಿದೆ ಎಂದಿದ್ದಾರೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಕಂದಾಯ ಹಾಗೂ ಅರಣ್ಯ ಇಲಾಖೆ ವತಿಯಿಂದ ರಾಜ್ಯಾದ್ಯಂತ ಜಂಟಿ ಸರ್ವೇ ನಡೆಸಿ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಳೆದ ಚಳಿಗಾಲದ ಅಧಿವೇಶನದಲ್ಲೇ ಭರವಸೆ ನೀಡಿತ್ತು. ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಮೂಲಕ ಪರಿಭಾವಿತ ಅರಣ್ಯ, ಮೀಸಲು ಅರಣ್ಯದ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಹಾಗೂ ನಕ್ಷೆ ಇಲ್ಲದ ಜಮೀನುಗಳಲ್ಲಿ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ನಿಶ್ಚಯಿಸಿತ್ತು ಎಂದು ತಿಳಿಸಿದ್ದಾರೆ.
ಅದರಂತೆ ಅನೇಕ ವರ್ಷಗಳ ನಂತರ ಅರಣ್ಯ ಭೂಮಿಯ ಜಂಟಿ ಸರ್ವೇಗೆ ಫೆಬ್ರವರಿ 16ರಂದೇ ಅಧೀಕೃತವಾಗಿ ಸರ್ಕಾರದ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯಾದ್ಯಂತ ಸರ್ವೇ ಕೆಲಸವೂ ಬರದಿಂದ ಸಾಗುತ್ತಿದೆ. ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯದಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಜಂಟಿ ಸರ್ವೇ ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ವೇ ಕೆಲಸ ಪ್ರಗತಿಯಲ್ಲಿದೆ. ಸರ್ಕಾರಿ ಭೂ ಮಾಪಕರು (ಸರ್ವೇಯರ್) ಹಾಗೂ ಪರವಾನಗಿ ಹೊಂದಿರುವ ಭೂ ಮಾಪಕರ ಸಹಾಯದಿಂದ ಸರ್ವೇ ಕೆಲಸ ಆರಂಭಿಸಲಾಗಿದೆ ಎಂದಿದ್ದಾರೆ.
- ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 2845964 ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದ್ದು, ಈ ಪೈಕಿ 12,70,847 ಎಕರೆ ಭೂಮಿಯನ್ನು ಅಳತೆ ಮಾಡಲಾಗಿದೆ. 11,541 ಎಕರೆ ವಿಸ್ತೀರ್ಣದ ಭೂಮಿ ಅಳತೆಗೆ ಬಾಕಿ ಇದ್ದು ಕ್ರಮ ಜರುಗಿಸಲಾಗಿದೆ. ಈವರೆಗಿನ ಸರ್ವೇ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 7910 ಎಕರೆ ಕಂದಾಯ ಜಮೀನು ಇದ್ದು, ಇದನ್ನು ಅರಣ್ಯ ಇಲಾಖೆ ನೋಟಿಫಿಕೇಶನ್ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಈ ಜಮೀನನ್ನು ಡೀನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಸೂಚನೆಯಂತೆ ಪರಿಭಾವಿತ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ 47,809.31 ಎಕರೆ. ಈ ಪೈಕಿ 21,662 ಎಕರೆ ಪ್ರದೇಶದ ಅಳತೆ ಕಾರ್ಯ ಮುಗಿದಿದ್ದು, 26,147 ಎಕರೆ ವಿಸ್ತೀರ್ಣದ ಪ್ರದೇಶ ಅಳತೆಗೆ ಕ್ರಮ ಜರುಗಿಸಲಾಗಿದೆ.
- ಕೊಡಗು ಜಿಲ್ಲೆಯಲ್ಲಿ ಒಟ್ಟು ಪರಿಭಾವಿತ ಅರಣ್ಯ ಪ್ರದೇಶದ ಪೈಕಿ ಈವರೆಗೆ ಒಟ್ಟು 20,769 ಎಕರೆ ಭೂಮಿಯನ್ನು ಅಳತೆ ಮಾಡಲಾಗಿದೆ. ಉಳಿದ ಪ್ರದೇಶವನ್ನೂ ಶೀಘ್ರ ಅಳತೆಗೆ ಕ್ರಮವಹಿಸಲಾಗಿದೆ.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಭಾವಿತ ಅರಣ್ಯ ಪ್ರದೇಶದ ವಿಸ್ತೀರ್ಣ ಒಟ್ಟು 21983 ಎಕರೆ ಎಂದು ಗುರುತಿಸಲಾಗಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ 800 ಎಕರೆ ಜಮೀನಿನಲ್ಲಿ ಅಳತೆ ಕಾರ್ಯ ನಡೆಸಲಾಗಿದೆ.
- ಚಿಕ್ಕಮಗಳೂರು ಜಿಲ್ಲೆಯಲ್ಲಿ 130927 ಎಕರೆ ವಿಸ್ತೀರ್ಣದ ಜಮೀನನ್ನು ಪರಿಭಾವಿತ ಅರಣ್ಯ ಪ್ರದೇಶ ಎಂದು ಗುರುತಿಸಿದ್ದು, ಈಗಾಗಲೇ 17 ಜನ ಭೂ ಮಾಪಕರನ್ನು ಸರ್ವೇ ಕೆಲಸಕ್ಕೆ ನಿಯೋಜಿಸಲಾಗಿದೆ. ಪ್ರಾಥಮಿಕವಾಗಿ 300 ಎಕರೆ ಪ್ರದೇಶದ ಸರ್ವೇ ಕಾರ್ಯವನ್ನು ಮುಗಿಸಲಾಗಿದೆ.
- ಅರಣ್ಯ ಹಾಗೂ ಕಂದಾಯ ಭೂಮಿ ಗುರುತಿಸುವ ಸಂಬಂಧ ಹೆಚ್ಚು ಸಮಸ್ಯೆಗಳಿರುವ ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಬೇರೆ ಬೇರೆ ಜಿಲ್ಲೆಗಳಿಂದ ಆದ್ಯತೆ ಮೇಲೆ ಭೂ ಮಾಪಕರನ್ನು ತುರ್ತು ನಿಯೋಜನೆಗೊಳಿಸಿ ಜಂಟಿ ಸರ್ವೇ ಕೆಲಸಕ್ಕೆ ವೇಗ ನೀಡಲಾಗಿದೆ.
ರಾಜ್ಯಾದ್ಯಂತ ಪೋಡಿ, ಹದ್ದುಬಸ್ತು, ನ್ಯಾಯಾಲಯದಲ್ಲಿರುವ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆಯೂ ಭೂ ಮಾಪಕರ ಜವಾಬ್ದಾರಿ ಪ್ರಮುಖವಾದದ್ದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮೇಲ್ಕಾಣಿಸಿದ ಜಿಲ್ಲೆಗಳ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲೂ ಸಹ ಆದ್ಯತೆ ಮೇಲೆ ಶೀಘ್ರದಲ್ಲೇ ಜಂಟಿ ಸರ್ವೇ ಕೆಲಸಕ್ಕೆ ಹಂತಹಂತವಾಗಿ ಮುಂದಾಗುವಂತೆ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಸರ್ವೇ ಕೆಲಸಗಳಿಗೆ ಚುರುಕು ಮುಟ್ಟಿಸಿ ಸರ್ವೇಗೆ ಸಂಬಂಧಿಸಿದ ಜನರ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುವ ಸಲುವಾಗಿಯೇ ಈಗಾಗಲೇ 991 ಪರವಾನಗಿ ಸರ್ವೇಯರ್ ಗಳನ್ನು ಎಲ್ಲಾ ಜಿಲ್ಲೆಗಳಿಗೂ ಆದ್ಯತೆ ಮೇಲೆ ಕಳುಹಿಸಿಕೊಡಲಾಗುತ್ತಿದೆ. ಅಲ್ಲದೆ, 364 ಸರ್ಕಾರಿ ಸರ್ವೇಯರ್ ಹಾಗೂ 27 ಎಡಿಎಲ್‌ಆರ್ ನೇಮಕಕ್ಕೂ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಪ್ರತೀ ಜಿಲ್ಲೆಯ ವಿಸ್ತೀರ್ಣವನ್ನು ಅಳೆಯುವ ಸಲುವಾಗಿ ಡ್ರೋನ್ ಸರ್ವೇಗೆ ಈಗಾಗಲೇ ಚಾಲನೆ ನೀಡಲಾಗಿದೆ. ಡ್ರೋನ್ ಸರ್ವೇ ಮೂಲಕವೂ ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ಭೂಮಿ ವಿಸ್ತೀರ್ಣದ ಪ್ರಮಾಣ ಹಾಗೂ ಅರಣ್ಯ ಪ್ರದೇಶ ವಿಸ್ತೀರ್ಣದ ನಿಖರ ಪ್ರಮಾಣ ಎಷ್ಟು? ಎಂಬ ಮಾಹಿತಿಯನ್ನು ಗುರಿತಿಸುವ ಕೆಲಸ ಚಾಲ್ತಿಯಲ್ಲಿದೆ ಎಂದಿದ್ದಾರೆ.
ಒಂದು ವೇಳೆ ಕಂದಾಯ ಭೂಮಿಯನ್ನು ತಪ್ಪಾಗಿ ಅರಣ್ಯ ಇಲಾಖೆ ನೋಟಿಫೈ ಮಾಡಿರುವುದು ಜಂಟಿ ಸರ್ವೇ ಅಥವಾ ಟ್ರೋನ್ ಸರ್ವೇಯಿಂದ ಖಚಿತವಾದಲ್ಲಿ ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುವುದು. ಈ ಸಂಬಂಧ ಅರಣ್ಯ ಇಲಾಖೆ ಸಚಿವರಾದ ಮಾನ್ಯ ಈಶ್ವರ್ ಖಂಡ್ರೆ ಅವರ ಜೊತೆಗೂ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಂಟಿ ಸರ್ವೇ ನಂತರ ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ಗಡಿಯನ್ನು ನಿಖರವಾಗಿ ಗುರುತಿಸಲಾಗುವುದು. ಗಡಿ ಗುರುತಿಸಿದ ನಂತರ ಅಂತಹ ಜಮೀನಿನಲ್ಲಿ ಒಂದು ವೇಳೆ ಕೃಷಿ ಚಟುವಟಿಕೆ ನಡೆಯುತ್ತಿದ್ದರೆ, ಅರ್ಹ ಹಿಡುವಳಿದಾರರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಜರುಗಿಸಲಾಗುವುದು. ಫಾರಂ-57 ಅಡಿಯಲ್ಲಿ ಅರ್ಹ ರೈತರು ಅರ್ಜಿ ಸಲ್ಲಿಸಿದ್ದರೆ ಬಗರ್‌ಹುಕುಂ ಆ್ಯಪ್ ಮೂಲಕ ಭೂ ಮಂಜೂರು ಮಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.