ಬೆಂಗಳೂರು: ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ 5, 8, 9 ಮತ್ತು 11ನೇ ತರಗತಿ ಪರೀಕ್ಷೆಗಳನ್ನು ನಡೆಸುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಈ ಕುರಿತಂತೆ ಇಂದು ಸಿಎಂ ಸಿದ್ಧರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವಂತ ಅವರು, ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಶಿಕ್ಷಣ ಕಾಯಿದೆಗೆ ಅನುಗುಣವಾಗಿ 5, 8, 9 ಮತ್ತು 11 ನೇ ತರಗತಿಗೆ ಹಿಂದಿನ ರಾಜ್ಯ ಸರ್ಕಾರದ ಸಂಕಲನಾತ್ಮಕ ಮೌಲ್ಯ ಮಾಪನದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶ ಮಾಡಿರುವುದು ಸರಿಯಿರುತ್ತದೆ. ಹಿಂದಿನ ಬಿಜೆಪಿ ಸರ್ಕಾರವು ಅನೇಕ ಪ್ರಗತಿಪರ ಶಿಕ್ಷಣ ಚಿಂತಕರ ಅಭಿಪ್ರಾಯಗಳನ್ನು ಬದಿಗೊತ್ತಿ ಶಾಲಾ ಮಕ್ಕಳ ಹಿತಾಸಕ್ತಿಗೆ ವಿರುದ್ದವಾಗಿ ವಾರ್ಷಿಕ ಪರೀಕ್ಷೆ ನಡೆಸಲು ತೀರ್ಮಾನವನ್ನು ತೆಗೆದುಕೊಂಡಿತ್ತು. ಕೆಲವು ಅಧಿಕಾರಿಗಳು ಇದಕ್ಕೆ ಪೂರಕವಾಗಿ ಈಗಿನ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿ ರಾಜ್ಯ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಲು ಅನುವು ಮಾಡಿಕೊಟ್ಟಿದ್ದರು. ಈ ಅಧಿಸೂಚನೆಗಳು ಶಿಕ್ಷಣ ಕಾಯಿದೆಯ ನಿಯಮಾವಳಿಗಳಿಗೆ ಪೂರಕವಾಗಿರುವುದಿಲ್ಲ ಮತ್ತು ಯಾವುದೇ ತಿದ್ದುಪಡಿ ಶಾಸನದ ಮೂಲಕ ಇಂತಹ ಕ್ರಮಕ್ಕೆ ಅವಕಾಶ ನೀಡಿರುವುದಿಲ್ಲ ಎನ್ನುವ ಕಾರಣಕ್ಕೆ ಹೈಕೋರ್ಟ್ ಶಿಕ್ಷಣ ಇಲಾಖಾ ಆದೇಶವನ್ನು ರದ್ದುಗೊಳಿಸಿರುತ್ತದೆ ಎಂದಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರವು ತನ್ನ ಹಿಡನ್ ಅಜೆಂಡಾಗೆ ಅನುಗುಣವಾಗಿ ವಾರ್ಷಿಕ ಪರೀಕ್ಷೆಯ ನಿರ್ಧಾರವನ್ನು ತೆಗೆದುಕೊಂಡಿತ್ತು. ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯ ಕಾರಣಕ್ಕಾಗಿ ಇಂತಹ ನಿರ್ಧಾರವು ಸರಿ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಅನೇಕ ಶಿಕ್ಷಣ ತಜ್ಞರು ಈ ಶಾಲೆಗಳಿಗೆ ಸಂಕಲನಾತ್ಮಕ ಮೌಲ್ಯಮಾಪನದ ಹೆಸರಿನಲ್ಲಿ ವಾರ್ಷಿಕ ಪರೀಕ್ಷೆ ಅಥವಾ ಪಬ್ಲಿಕ್ ಪರೀಕ್ಷೆ ನಡೆಸುವುದು ಸಮಂಜಸ ಅಲ್ಲವೆಂದು ಪ್ರತಿಪಾದಿಸಿದ್ದರು. ಈ ಕ್ರಮದಿಂದ ಮಕ್ಕಳ ಮನಸ್ಸುಗಳ ಮೇಲೆ ಒತ್ತಡವನ್ನು ಹೇರುವುದರ ಜೊತೆಗೆ ಕಲಿಕಾ ಕ್ರಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪದೇ ಪದೇ ಶಾಲಾ ಮಕ್ಕಳ ಕಲಿಕಾ ಕ್ರಮವನ್ನು ಬದಲಾಯಿಸುವುದು, ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ಮಕ್ಕಳ ಮೇಲೆ ಅಥವಾ ಶಿಕ್ಷಣದ ಕ್ರಮದ ಮೇಲೆ ಪ್ರಯೋಗಗಳನ್ನು ಮಾಡುವುದು ಸಮಂಜಸ ನಿರ್ಧಾರ ಆಗಿರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಹಿಂದಿನ ಬಿಜೆಪಿ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರೂ, ಅವರ ಹಿಡನ್ ಅಜೆಂಡಾ ಕಾರಣಕ್ಕಾಗಿ ಅನೇಕ ಅವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ರಾಜ್ಯ ಹೈಕೋರ್ಟ್ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕರ್ನಾಟಕ ಶಿಕ್ಷಣ ಕಾಯಿದೆಗೆ ಪೂರಕವಾಗಿ ತನ್ನ ತೀರ್ಪನ್ನು ನೀಡಿದ್ದು, ರಾಜ್ಯ ಸರ್ಕಾರವು ಇದಕ್ಕೆ ಅನುಗುಣವಾಗಿ ಉದ್ದೇಶಿತ ವಾರ್ಷಿಕ ಪರೀಕ್ಷೆಯನ್ನು 5, 8, 9 ಮತ್ತು 11 ನೇ ತರಗತಿಗೆ ಕೈಬಿಡಬೇಕಾಗಿ ಕೋರುತ್ತೇನೆ. ಹೈಕೋರ್ಟ್ ತೀರ್ಪಿನ ವಿರುದ್ಧ ಯಾವುದೇ ಅಪೀಲು ಸಲ್ಲಿಸದೆ, ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ಮಕ್ಕಳನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸದೇ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಬೇಕಾಗಿ ವಿನಂತಿಸಿದ್ದಾರೆ.
ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸತತ 9 ಗಂಟೆ ಪರಿಶೀಲನೆ ನಡೆಸಿದ ‘NIA’
Shocking News: ‘ಚಾಕೋಲೇಟ್’ ಎಂದು ‘ಮಾತ್ರೆ’ ತಿಂದ 5 ವರ್ಷದ ‘ಮಗು’: ‘ಧಾರುಣ ಸಾವು’